ಸ್ವಾಭಿಮಾನ ಬಿಟ್ಟಿಲ್ಲ, ಸಚಿವನಾಗಲು ಯಾರ ಕಾಲಿಗೂ ಬೀಳಲ್ಲ: ಹಾಲಾಡಿ ಶ್ರೀನಿವಾಸ ಶೆಟ್ಟಿ

Update: 2021-07-29 15:46 GMT

ಉಡುಪಿ, ಜು.29: ನಾನು ಇದುವರೆಗಿನ ರಾಜಕೀಯದಲ್ಲಿ ಸ್ವಾಭಿಮಾನವನ್ನು ಬಿಟ್ಟಿಲ್ಲ. ಹೀಗಾಗಿ ಸಚಿವ ಸ್ಥಾನ ಕೇಳಲು ಯಾರ ಬಳಿಯೂ ಹೋಗುವುದಿಲ್ಲ, ಯಾರ ಕಾಲಿಗೂ ಬೀಳುವುದಿಲ್ಲ, ಯಾವ ನಾಯಕನ ಹಿಂದೆಯೂ ಸುತ್ತು ಬರುತ್ತಾ ತಿರುಗಾಡಲು ಹೋಗುವುದಿಲ್ಲ ಎಂದು ಕುಂದಾಪುರದ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಹೇಳಿದ್ದಾರೆ.

ರಾಜ್ಯದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಸಚಿವ ಸಂಪುಟ ರಚನೆಗೆ ಸಿದ್ಧತೆಗಳನ್ನು ನಡೆಸಿರುವ ಹಿನ್ನೆಲೆಯಲ್ಲಿ ಕುಂದಾಪುರ ವಿಧಾನಸಭಾ ಕ್ಷೇತ್ರವನ್ನು ಐದು ಬಾರಿ ಪ್ರತಿನಿಧಿಸಿರುವ ಅವರನ್ನು ಈ ಬಾರಿಯಾದರೂ ಸಚಿವ ಸ್ಥಾನ ಪಡೆಯುವ ನಿರೀಕ್ಷೆ ಇದೆಯೇ ಎಂದು ಮಾಧ್ಯಮ ಪ್ರತಿನಿಧಿಗಳುಪ್ರಶ್ನಿಸಿದಾಗ ಹಾಲಾಡಿ ಅವರಿಂದ ಬಂದ ಉತ್ತರವಿದು.

ರಾಜಕೀಯದಲ್ಲಿ ತಾನು ಸಮತೋಲನವನ್ನು ಕಳೆದುಕೊಳ್ಳಲಾರೆ. ಉಸಿರಿದ್ದರೆ ನಾನು ಸಚಿವ ಸ್ಥಾನ ಕೇಳಲು ಬೆಂಗಳೂರಿಗೆ ಹೋಗುವುದಿಲ್ಲ. ಮೂರು ದಶಕಗಳ ರಾಜಕೀಯ ಬದುಕಿನಲ್ಲಿ ನಾನು ಸ್ವಾಭಿಮಾನವನ್ನು ಬಿಟ್ಟುಕೊಟ್ಟಿಲ್ಲ ಎಂದ ಅವರು, ಈ ಹಿಂದೆ ಒಮ್ಮೆ ಸಚಿವ ಸ್ಥಾನ ಕೊಡುವುದಾಗಿ ಕರೆದು ತಪ್ಪು ಮಾಡಿದ್ದರು. ಆಗಲೂ ನಾು ಸಚಿವ ಸ್ಥಾನವನ್ನು ಕೇಳಿರಲಿಲ್ಲ. ಸಚಿವ ಸ್ಥಾನ ಕೊಡಿ ಎಂದು ಯಾವತ್ತೂ ನಾಯಕರ ಮುಂದೆ ಬೇಡಿಕೆ ಇಟ್ಟವನಲ್ಲ. ರಾಜಕೀಯ ಲಾಬಿ, ಜಾತಿವಾದತನ ಮಾಡಿರಲಿಲ್ಲ. ಸಚಿವ ಸ್ಥಾನಕ್ಕಾಗಿ ಯಾರ ಕಾಲಿಗೂ ಬಿದ್ದನಲ್ಲ. ನಾನು ಕೆಲಸ ತೆಗೆದುಕೊಳ್ಳುವುದಿಲ್ಲ. ಕೆಲಸ ಕೊಟ್ಟರೆ ಅದನ್ನು ಸಮರ್ಥವಾಗಿ ನಿಭಾಯಿಸುತ್ತೇನೆ ಎಂದವರು ಆತ್ಮವಿಶ್ವಾಸದಿಂದ ನುಡಿದರು.

ಕಾರು, ಎಸ್ಕಾರ್ಟ್ಸ್ ಬೇಡ

ಒಂದು ವೇಳೆ ನಾನು ಸಚಿವನಾದರೆ ಸರಕಾರಿ ಕಾರು ತೆಗೆದುಕೊಳ್ಳುವುದಿಲ್ಲ ಎಂದ ಅವರು, ನಾನು ಎಸ್ಕಾರ್ಟ್ ಸಹ ತೆಗೆದುಕೊಳ್ಳುವುದಿಲ್ಲ. ಗನ್‌ಮ್ಯಾನ್ ತೆಗೆದುಕೊಳ್ಳುವುದಿಲ್ಲ ಎಂದ ಅವರು, ಇದರೊಂದಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಈವರೆಗೆ ಯಾವುದೇ ಕರೆಗಳು, ಮಾಹಿತಿಗಳು ಬಂದಿಲ್ಲ ಎಂದೂ ಸೇರಿಸಿದರು. ಕರೆ ಬಂದರೆ ನಾನು ಇದನ್ನು ಹೇಳಲು ಸಿದ್ದನಿದ್ದೇನೆ ಎಂದರು.

ಹೆಡ್ಡ ರಾಜಕಾರಣಿಯಲ್ಲ: ನಾನು ಹೆಡ್ಡ ರಾಜಕಾರಣಿ ಅಲ್ಲ. ನನ್ನದು ನೇರನುಡಿಯ ರಾಜಕಾರಣ. ಹಾಗೆಂದು ಇದು ದುರಹಂಕಾರದ ಮಾತಲ್ಲ. ನಾನು ಯಾರ ಭಯದಲ್ಲೂ ಇಲ್ಲ ಮತದಾರರ ಮತ್ತು ಕಾರ್ಯಕರ್ತರ ಋಣದಲ್ಲಿ ಮಾತ್ರ ನಾನಿರೋದು. ಸಚಿವ ಸ್ಥಾನವನ್ನು ಕೇಳಿ ಪಡೆಯು ವುದು ಪ್ರಜಾಪ್ರಭುತ್ವ ವ್ಯವಸ್ಥೆ ಅಲ್ಲ ಎಂದ ಅವರು, ಕೇಳಿ ಅಧಿಕಾರವನ್ನು ಪಡೆಯು ವುದು ಸಹ ಪ್ರಜಾಪ್ರಭುತ್ವ ವ್ಯವಸ್ಥೆಯೇ ಅಲ್ಲ ಎಂದರು.

ಜಾತ್ಯಾತೀತ ರಾಜಕಾರಣಿ: ನಾನೊಬ್ಬ ಜಾತ್ಯಾತೀತ ರಾಜಕಾರಣಿ. ನನ್ನ ಹುಟ್ಟಿನಿಂದ ನಾನು ಜಾತಿ ಸಂಘಕ್ಕೆ ಹೋಗಿಲ್ಲ. ಪ್ರಬಲ ಜಾತಿಯಲ್ಲಿ ಹುಟ್ಟಿದ್ದು ಆಕಸ್ಮಿಕ. ಆದರೆ ಎಲ್ಲಾ ಜಾತಿಯವರು ಮತ ಹಾಕಿ ನನ್ನನ್ನು ಗೆಲ್ಲಿಸಿದ್ದಾರೆ. ಒಂದು ಜಾತಿಯ ಉದ್ದಾರಕ್ಕಾಗಿ ಜನ ನನ್ನನ್ನು ಗೆಲ್ಲಿಸಿದ್ದಲ್ಲ ಎಂದರು.

ಜಾತಿವಾದಿಗಳು ಯಾವುದೇ ಕಾರಣಕ್ಕೂ ಶಾಸಕರಾಗಬಾರದು. ಜಾತಿವಾದಿ ಗಳು ಸಾರ್ವತ್ರಿಕ ಚುನಾವಣೆಗೆ ಬರಬಾರದು. ಅವರು ಜಾತಿ ಸಂಘಕ್ಕೆ ಮಾತ್ರ ಸಚಿವರಾಗಬೇಕು ಎಂದ ಹಾಲಾಡಿ, ನನ್ನಲ್ಲಿ ಯಾವುದೇ ನಾಟಕೀಯ ಮಾತುಗಳು ಇಲ್ಲ. ಉಪಯೋಗಕ್ಕೆ ಇಲ್ಲದ್ದನ್ನ ಕೊಟ್ಟರೆ ಕಿಸೆಗೆ ಹಾಕಿಕೊಂಡು ಬರುವುದಿಲ್ಲ. ಶಾಸಕರು ಹೆರಿಗೆ ಕೋಣೆಯ ದಾದಿಯ ರೀತಿಯಲ್ಲಿ ಕೆಲಸ ಮಾಡಬೇಕು ಎಂದು ಒಮೆ ಪಕ್ಷೇತರರೂ ಆಗಿ ಸತತ ಐದು ಬಾರಿ ಗೆದ್ದಿರುವ ಹಾಲಾಡಿ ಶ್ರೀನಿವಾಸ ಶೆಟ್ಟಿ ಮನದಾಳದ ಮಾತನ್ನು ಬಿಚ್ಚಿಟ್ಟರು.

ಹಾಲಾಡಿ ಅವರಿಗೆ ಈ ಬಾರಿಯಾದರೂ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಸ್ಥಾನ ಸಿಗಬೇಕೆನ್ನುವುದು ಕ್ಷೇತ್ರ ಜನರ ಅವರು ಅಪಾರ ಅಭಿಮಾನಿಗಳ ಬೇಡಿಕೆ. ಈ ಬಗ್ಗೆ ಈಗಾಗಲೇ ಹಾಲಾಡಿ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳ ಮೂಲಕ ಅಭಿಯಾನವನ್ನು ಪ್ರಾರಂಭಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News