ಲೆಬನಾನ್‌ನಲ್ಲಿ ತೀವ್ರ ಆರ್ಥಿಕ ಬಿಕ್ಕಟ್ಟು ಸಾವಿರಾರು ಮಕ್ಕಳು ಹಸಿವಿನ ದವಡೆಯಲ್ಲಿ: ವರದಿಯಲ್ಲಿ ಉಲ್ಲೇಖ

Update: 2021-07-29 16:05 GMT
ಸಾಂದರ್ಭಿಕ ಚಿತ್ರ

ಬೆರೂತ್, ಜು.29: ಲೆಬನಾನ್ ರಾಜಧಾನಿ ಬೆರೂತ್ ಬಂದರಿನಲ್ಲಿ ಕಳೆದ ವರ್ಷ ಸಂಭವಿಸಿದ ಭೀಕರ ಸ್ಫೋಟ ಹಾಗೂ ದೇಶ ಈಗ ಎದುರಿಸುತ್ತಿರುವ ತೀವ್ರ ಆರ್ಥಿಕ ಬಿಕ್ಕಟ್ಟಿನಿಂದಾಗಿ ಸಾವಿರಾರು ಮಕ್ಕಳು ಹಸಿವಿನಿಂದ ಬಳಲುವ ಸಮಸ್ಯೆ ಮುಂದುವರಿದಿದೆ ಎಂದು ವರದಿ ಹೇಳಿದೆ.

ತೀವ್ರ ದಹನಕಾರಿ ಮತ್ತು ಸ್ಫೋಟಕ ವಸ್ತು ಅಮೋನಿಯಂ ನೈಟ್ರೇಟ್‌ನ ಸಾವಿರಾರು ಟನ್‌ಗಳಷ್ಟು ದಾಸ್ತಾನನ್ನು ನಿರ್ಲಕ್ಷ್ಯವಾಗಿ ಬಂದರಿನಲ್ಲಿ ಪೇರಿಸಿಟ್ಟಿದ್ದು , ಕಳೆದ ವರ್ಷದ ಆಗಸ್ಟ್ 4ರಂದು ಇದಕ್ಕೆ ಕಿಡಿ ತಗುಲಿ ಬೆಂಕಿ ಹತ್ತಿಕೊಂಡು ಭೀಕರ ಸ್ಪೋಟ ಸಂಭವಿಸಿತ್ತು. 200ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು 6,500ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ಇದರಿಂದ ದೇಶದ ಆರ್ಥಿಕತೆಯ ಮೇಲೆ ಮತ್ತಷ್ಟು ಹೊಡೆತ ಬಿದ್ದಿದ್ದು 2 ವರ್ಷದಲ್ಲಿ ಕರೆನ್ಸಿಯ ಮೌಲ್ಯ 90%ದಷ್ಟು ಕುಸಿದಿದೆ. ಗಾಯದ ಮೇಲೆ ಬರೆ ಎಳೆದಂತೆ ಕೊರೋನ ಸಾಂಕ್ರಾಮಿಕ ವ್ಯಾಪಿಸಿದ್ದು ದೇಶದ ಬಹುತೇಕ ಕುಟುಂಬಗಳ ತಲಾ ಆದಾಯದಲ್ಲಿ ಇಳಿಕೆಯಾಗಿದೆ. ದೇ ಶದಲ್ಲಿ ಕಡುಬಡತನ ಕುಟುಂಬಕ್ಕೆ ಅಗತ್ಯ ಆಹಾರವಸ್ತು ಪಡೆಯಲು ತಿಂಗಳಿಗೆ 4,050 ಡಾಲರ್ ಅಗತ್ಯವಿದೆ, ಆದರೆ ಈಗ ಆದಾಯ ಕೇವಲ 3,652 ಡಾಲರ್‌ನಷ್ಟಿದೆ ಎಂದು ವರದಿ ಹೇಳಿದೆ.

ಸರಕಾರದ ಖಜಾನೆಯೂ ಕಾಲಿಯಾಗಿರುವುದರಿಂದ ತೈಲ, ಔಷಧಿ ಹಾಗೂ ಅಗತ್ಯದ ವಸ್ತುಗಳ ಕೊರತೆ ಉಂಟಾಗಿ ಇವುಗಳ ಬೆಲೆ ಗಗನಕ್ಕೇರಿದೆ. ದೇಶದಲ್ಲಿ ದಿನಾ ಗಂಟೆಗಟ್ಟಲೆ ವಿದ್ಯುತ್ ಕಡಿತ ಮಾಡಲಾಗುತ್ತದೆ. ಜೊತೆಗೆ, ಶುದ್ಧ ನೀರಿನ ಲಭ್ಯತೆ ಬಹುತೇಕ ಕುಟುಂಬಗಳಿಗೆ ಗಗನ ಕುಸುಮವಾಗಿದೆ ಎಂದು ವಿಶ್ವಸಂಸ್ಥೆ ಹೇಳಿದೆ.

ದೇಶದಲ್ಲಿ ಸಾವಿರಾರು ಮಕ್ಕಳು ಒಂದು ಹೊತ್ತಿನ ಊಟವೂ ಇಲ್ಲದೆ ಕಾಲಿ ಹೊಟ್ಟೆಯಲ್ಲಿ ಮಲಗುವ ಸ್ಥಿತಿಯಿದೆ. ಅಸ್ವಸ್ಥರಾದವರಿಗೆ ಚಿಕಿತ್ಸೆ ಒದಗಿಸಲು ಔಷಧ ಖರೀದಿಸಲು ಹಣವಿಲ್ಲದ ಪರಿಸ್ಥಿತಿ ಇರುವುದರಿಂದ ಮಕ್ಕಳು ಅಪೌಷ್ಟಿಕತೆಯ ಸಮಸ್ಯೆಗೆ ಸಿಲುಕುವ ಅಪಾಯವಿದ್ದು ಇದು ಅಂತಿಮವಾಗಿ ಮಕ್ಕಳ ಅಕಾಲಿಕ ಮರಣಕ್ಕೆ ಕಾರಣವಾಗಬಹುದು ಎಂದು ‘ಸೇವ್ ದಿ ಚಿಲ್ಡ್ರನ್ಸ್’ನ ಸ್ಥಳೀಯ ನಿರ್ದೇಶಕಿ ಜೆನ್ನಿಫರ್ ಮೂರ್‌ಹೆಡ್ ಹೇಳಿದ್ದಾರೆ. ಆದಾಯ ಕುಸಿದಿರುವ ಹಿನ್ನೆಲೆಯಲ್ಲಿ ಆಹಾರ ವಸ್ತುಗಳ ಖರ್ಚು, ಶೈಕ್ಷಣಿಕ ವೆಚ್ಚ, ವೈದ್ಯಕೀಯ ವೆಚ್ಚ ಕಡಿಮೆಗೊಳಿಸಿ, ಮನೆಯಲ್ಲಿರುವ ಪೀಠೋಪಕರಣಗಳನ್ನು ಮಾರಾಟ ಮಾಡಿ ಅಥವಾ ಅಧಿಕ ಬಡ್ಡಿದರದ ಸಾಲ ಪಡೆಯುವ ಅನಿವಾರ್ಯತೆ ಎದುರಾಗಿದೆ. ದೇಶದ ಜನಸಂಖ್ಯೆಯ 47% ಮಂದಿಗೆ ದವಸ ಧಾನ್ಯ, ಖಾದ್ಯ ತೈಲ, ಡಯಾಪರ್‌ಗಳು, ಸ್ಯಾನಿಟರಿ ಪ್ಯಾಡ್‌ಗಳು ಮತ್ತು ಇಂಧನದಂತಹ ಅಗತ್ಯ ವಸ್ತುಗಳನ್ನು ಖರೀದಿಸಲು ಸಾಧ್ಯವಾಗುತ್ತಿಲ್ಲ. ಈ ಭೀಕರ ಪರಿಸ್ಥಿತಿಯ ಜೊತೆಗೆ, ಲೆಬನಾನ್‌ನಲ್ಲಿ ಆಶ್ರಯ ಕಂಡುಕೊಂಡಿರುವ ಸುಮಾರು 1.5 ಮಿಲಿಯನ್ ಸಿರಿಯಾದ ನಿರಾಶ್ರಿತರಲ್ಲಿ 90% ಜನ ಅಗತ್ಯದ ಆಹಾರ ವಸ್ತುಗಳನ್ನು ಖರೀದಿಸಲು ಅಸಮರ್ಥರಾಗಿದ್ದಾರೆ ಎಂದು ವರದಿ ಉಲ್ಲೇಖಿಸಿದೆ.

ಸ್ಫೋಟ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹ

ಬೆರೂತ್ ಬಂದರಿನಲ್ಲಿ ನಡೆದ ಭೀಕರ ಸ್ಫೋಟಕ್ಕೆ ಬಲಿಯಾದ ಹಾಗೂ ಗಾಯಗೊಂಡವರ ಕುಟುಂಬದವರು ಈ ದುರಂತಕ್ಕೆ ಸರಕಾರ ಹೊಣೆಯಾಗಿದ್ದು ಪರಿಹಾರ ನೀಡಬೇಕೆಂದು ಆಗ್ರಹಿಸುತ್ತಿದ್ದಾರೆ. ಆದರೆ ನಿಧಾನಗತಿಯ ತನಿಖೆಯಿಂದ ನ್ಯಾಯ ದಕ್ಕಲು ವಿಳಂಬವಾಗುತ್ತದೆ ಎಂಬ ಆತಂಕ ಇವರದ್ದು. ಹಲವು ಮಾಜಿ ಸಚಿವರ ವಿಚಾರಣೆ ಇನ್ನೂ ಬಾಕಿಯಿದೆ. ಕರ್ತವ್ಯಲೋಪದ ಆರೋಪ ಎದುರಿಸುತ್ತಿರುವ ಅಧಿಕಾರಿಗಳನ್ನು ಹಂಗಾಮಿ ಪ್ರಧಾನಿ ಹಸನ್ ಡಿಯಾಬ್ ಹಾಗೂ 4 ಮಾಜಿ ಸಚಿವರು ರಕ್ಷಿಸುತ್ತಿದ್ದಾರೆ ಎಂಬ ಟೀಕೆ ಕೇಳಿ ಬಂದಿದ್ದು ವಿಶೇಷ ನ್ಯಾಯಾಂಗ ಸಮಿತಿ ರಚಿಸಿ ಸ್ಫೋಟದ ಬಗ್ಗೆ ತನಿಖೆ ನಡೆಸುವಂತೆ ಸಂಸತ್ತಿನಲ್ಲಿ ನಿರ್ಣಯ ಮಂಡಿಸಲು ನಿರ್ಧರಿಸಲಾಗಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News