ಅಪಘಾನ್ ವಿಷಯದಲ್ಲಿ ಚೀನಾದ ಆಸಕ್ತಿ ಧನಾತ್ಮಕವಾಗಿರಲಿ: ಅಮೆರಿಕ

Update: 2021-07-29 17:05 GMT

 ನ್ಯೂಯಾರ್ಕ್, ಜು.29: ಅಪಘಾನ್ ವಿಷಯದಲ್ಲಿ ಚೀನಾದ ಸಂಭವನೀಯ ಒಳಗೊಳ್ಳುವಿಕೆ ಧನಾತ್ಮಕ ಅಂಶವಾಗಿರಬಹುದು ಎಂದು ಅಮೆರಿಕದ ವಿದೇಶ ವ್ಯವಹಾರ ಸಚಿವ ಅಂಟೋನಿ ಬ್ಲಿಂಕೆನ್ ಹೇಳಿದ್ದಾರೆ.

 ಅಪಘಾನ್ ಬಿಕ್ಕಟ್ಟಿಗೆ ಶಾಂತಿಯುತ ಪರಿಹಾರ ರೂಪಿಸುವ ಹಾಗೂ ಸರ್ವರನ್ನು ಒಳಗೊಂಡ ಪ್ರಾತಿನಿಧಿಕ ಸರಕಾರದ ರಚನೆಯ ಬಗ್ಗೆ ನಿಜವಾಗಿಯೂ ಚೀನಾಕ್ಕೆ ಆಸಕ್ತಿಯಿದ್ದರೆ ಇದು ಸಾಧ್ಯವಾಗಲಿದೆ. ಅಪಘಾನ್ ದೇಶವನ್ನು ತಾಲಿಬಾನ್ ಪಡೆಗಳು ಸ್ವಾಧೀಪಡಿಸಿಕೊಳ್ಳುವ, ಅಲ್ಲಿ ಇಸ್ಲಾಮಿಕ್ ಎಮಿರೇಟ್ಸ್ ಸ್ಥಾಪಿಸುವ ವಿಷಯದಲ್ಲಿ ಯಾವ ದೇಶವೂ ಆಸಕ್ತವಾಗಿಲ್ಲ ಎಂದವರು ಹೇಳಿದ್ದಾರೆ.

ಶಾಂತ ರೀತಿಯಲ್ಲಿ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಿ ಎಂದು ಇದೇ ವೇಳೆ ಅವರು ತಾಲಿಬಾನ್ ಮುಖಂಡರನ್ನು ಆಗ್ರಹಿಸಿದ್ದಾರೆ. ಈ ಮಧ್ಯೆ, ತಿಯಾಂಜಿನ್‌ನಲ್ಲಿ ನಡೆಯುವ ಶಾಂತಿ ಮಾತುಕತೆಯಲ್ಲಿ ಪಾಲ್ಗೊಳ್ಳಲು ತಾಲಿಬಾನ್‌ನ 9 ಪ್ರತಿನಿಧಿಗಳು ಬುಧವಾರ ಚೀನಾಕ್ಕೆ ಪ್ರಯಾಣಿಸಿದ್ದಾರೆ. ಅಪಘಾನ್‌ನೊಂದಿಗಿನ ಸಹಕಾರವನ್ನು ಮುಂದುವರಿಸುವ ಮತ್ತು ಅಪಘಾನ್‌ನ ಆಂತರಿಕ ವಿಷಯದಲ್ಲಿ ಹಸ್ತಕ್ಷೇಪ ಮಾಡದಿರಲು ಚೀನಾ ಬದ್ಧವಾಗಿದೆ. ಅಪಘಾನ್‌ನಲ್ಲಿನ ಸಮಸ್ಯೆ ಪರಿಹಾರಗೊಂಡು ಅಲ್ಲಿ ಶಾಂತಿ ನೆಲೆಸಲು ಅವರು ನೆರವಾಗುವುದಾಗಿ ಹೇಳಿದ್ದಾರೆ ಎಂದು ತಾಲಿಬಾನ್ ವಕ್ತಾರರು ಟ್ವೀಟ್ ಮಾಡಿದ್ದಾರೆ.

ಅಪಘಾನಿಸ್ತಾನದ ಆಂತರಿಕ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡದಿರುವ ಕಾರ್ಯನೀತಿ ನಮ್ಮದಾಗಿದೆ. ಅಪಘಾನಿಸ್ತಾನದಿಂದ ಅಮೆರಿಕ ಮತ್ತು ನೇಟೊ ಪಡೆಗಳನ್ನು ಆತುರದಿಂದ ಹಿಂದಕ್ಕೆ ಕರೆಸಿಕೊಂಡಿರುವುದು ಅಪಘಾನಿಸ್ತಾನದ ಕುರಿತ ಅಮೆರಿಕದ ಕಾರ್ಯನೀತಿಯ ವೈಫಲ್ಯವಾಗಿದೆ ಮತ್ತು ತಮ್ಮ ಸ್ವಂತ ದೇಶದ ಸ್ಥಿರತೆ ಮತ್ತು ಪ್ರಗತಿ ಬಗ್ಗೆ ಕಾರ್ಯನಿರ್ವಹಿಸಲು ಅಪಘಾನ್ ಪ್ರಜೆಗಳಿಗೆ ಉತ್ತಮ ಅವಕಾಶ ದೊರಕಿದೆ ಎಂದು ಚೀನಾದ ವಿದೇಶ ವ್ಯವಹಾರ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News