ಮೆಸ್ಕಾಂಗೆ ಕೋಟಿ ರೂ. ಬಿಲ್ ಬಾಕಿ: ದಾರಿದೀಪ ಇಲ್ಲದೆ ಕತ್ತಲಲ್ಲಿ ಉಪ್ಪಿನಂಗಡಿ ಗ್ರಾ.ಪಂ.

Update: 2021-07-29 17:08 GMT

ಉಪ್ಪಿನಂಗಡಿ: ಪುತ್ತೂರು ತಾಲೂಕಿನಲ್ಲಿಯೇ ಅತೀ ದೊಡ್ಡ ಪಟ್ಟಣವಾದ ಕೋಟಿ ಆದಾಯದ ಗ್ರಾ.ಪಂ. ಎಂದು ಪ್ರಸಿದ್ಧಿ ಪಡೆದಿರುವ ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ದಾರಿ ದೀಪಗಳ ಕೋಟಿಗಿಂತಲೂ ಅಧಿಕ ಬಿಲ್ ಪಾವತಿಸದ ಕಾರಣ ಮೆಸ್ಕಾಂ ಇಲಾಖೆ ದಾರಿದೀಪದ ಸಂಪರ್ಕವನ್ನು ಗುರುವಾರ ಕಡಿತಗೊಳಿಸಿದೆ.

ಉಪ್ಪಿನಂಗಡಿ ಗ್ರಾ.ಪಂ. ಕೋಟಿಗಿಂತಲೂ ಹೆಚ್ಚಿನ ಆದಾಯವಿರುವ ಗ್ರಾ.ಪಂ. ಆದರೆ  ಇದು ಮೆಸ್ಕಾಂಗೆ ಒಂದು ಕೋಟಿಯ ಹದಿನೆಂಟು ಲಕ್ಷದ ಎಂಬತ್ತನಾಲ್ಕು ಸಾವಿರದ ಒಂಬೈನೂರ ಆರು ರೂಪಾಯಿ (1,18,84,906) ಹಣವನ್ನು ಬಾಕಿ ಉಳಿಸಿಕೊಂಡಿದೆ. ಮೆಸ್ಕಾಂನವರು ಕೆಲವು ವರ್ಷದಿಂದ ಬಾಕಿ ಉಳಿಸಿರುವ ಬಿಲ್ ಕಟ್ಟಿ ಎಂದು ಮನವಿ ಮಾಡಿದ್ದರೂ, ಗ್ರಾ.ಪಂ. ಮಾತ್ರ ಸ್ಪಂದನೆ ನೀಡಿಲ್ಲ. ಕೊನೆಗೆ ಇಂದು  ಉಪ್ಪಿನಂಗಡಿ ಗ್ರಾ.ಪಂ. ವ್ಯಾಪ್ತಿಯ ಸುಮಾರು 28 ಪಾಯಿಂಟ್‍ಗಳ ಫ್ಯೂಸ್ ಅನ್ನು ಮೆಸ್ಕಾಂ ಇಲಾಖೆ ತೆಗೆದಿದೆ. ಆದ್ದರಿಂದ ದಾರಿದೀಪವಿಲ್ಲದೆ, ಉಪ್ಪಿನಂಗಡಿ ಪೇಟೆ ಸಹಿತ ಹಲವು ಗ್ರಾಮಾಂತರ ಪ್ರದೇಶ ಕತ್ತಲಿಂದ ಕೂಡಿದೆ.

ಎಸ್ಕ್ರೋ ಅನುದಾನ ಏನಾಯಿತು ? : ವಿದ್ಯುತ್ ಬಿಲ್ ಕಟ್ಟಲೆಂದೇ ಗ್ರಾ.ಪಂ.ಗಳಿಗೆ ಎಸ್ಕ್ರೋ ಅನುದಾನ ಬರುತ್ತದೆ. ಇದಲ್ಲದೆ, 15 ಹಣಕಾಸಿನಡಿ ಎಸ್ಕ್ರೋ ಬಿಲ್ ಕಟ್ಟಲು ಅವಕಾಶವಿದೆ. ಕುಡಿಯುವ ನೀರಿನ ಪಂಪ್ ಸ್ಥಾವರಗಳ ಬಿಲ್ ಅನ್ನು ಕುಡಿಯುವ ನೀರಿನ ಸಂಪರ್ಕದ ಬಿಲ್‍ಗಳಿಂದ ಕಟ್ಟಲು ಅವಕಾಶವಿದೆ. ಇದರೊಂದಿಗೆ ಸ್ವಂತ ನಿಧಿಯಿಂದಲೂ ಮೆಸ್ಕಾಂ ಬಿಲ್ ಅನ್ನು ಕಟ್ಟಬಹುದು. ಆದರೆ ಪುತ್ತೂರು ತಾಲೂಕಿನಲ್ಲಿಯೇ ಅತೀ ದೊಡ್ಡ ಆದಾಯವಿರುವ ಗ್ರಾ.ಪಂ. ಎಂದು ಕರೆಸಿಕೊಳ್ಳುವ ಉಪ್ಪಿನಂಗಡಿ ಗ್ರಾ.ಪಂ.ನಲ್ಲಿ ಇಷ್ಟೊಂದು ವಿದ್ಯುತ್ ಬಿಲ್ ಕಟ್ಟಲು ಬಾಕಿ ಯಾಕೆ ಎನ್ನುವುದು ಮಾತ್ರ ಸ್ಥಳೀಯರ ಪ್ರಶ್ನೆಯಾಗಿದೆ.

ಗ್ರಾ.ಪಂ. ಹಾಗೂ ಮೆಸ್ಕಾಂ ಎರಡೂ ಸಾರ್ವಜನಿಕ ಸಂಸ್ಥೆಗಳೇ. ಅಂದರೆ ಸಾರ್ವಜನಿಕ ಆಸ್ತಿಗಳು. ಎರಡಕ್ಕೂ ನಷ್ಟ ಬಂದರೆ ಪ್ರಜೆಗಳಿಗೆ ನಷ್ಟ. ಎರಡೂ ಸರಿಯಾಗಿ ಕಾರ್ಯನಿರ್ವಹಿಸಿದಾಗ ಮಾತ್ರ ವ್ಯವಸ್ಥೆ ಉತ್ತಮವಾಗಿ ಹೋಗಲು ಸಾಧ್ಯ. ಆದರೆ ಇಲ್ಲಿ ಸರಿಯಾದ ಕಾರ್ಯಯೋಜನೆ ಹಾಕಿಕೊಳ್ಳದೇ ಗ್ರಾ.ಪಂ. ಎಡವಿದ್ದು, ಈ ಸಂದರ್ಭ ಎಚ್ಚೆತ್ತುಕೊಂಡ ಮೆಸ್ಕಾಂ ಅಧಿಕಾರಿಗಳು ದಿಟ್ಟತನದಿಂದ ಉತ್ತಮ ನಿರ್ಧಾರವನ್ನೇ ಕೈಗೊಂಡಿದ್ದಾರೆ ಎಂದು ಸಾರ್ವಜನಿಕರು ಅಭಿಪ್ರಾಯ ಪಡುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News