ಕೊಯಿಲ-ಕೆಮ್ಮಾರದಲ್ಲಿ ಸಮಸ್ತ 'ಫಾಳಿಲಾ ಪರೀಕ್ಷೆ'

Update: 2021-07-30 10:28 GMT

ಪುತ್ತೂರು: ಇಸ್ಲಾಮಿಕ್ ಶಿಕ್ಷಣ ಮಂಡಳಿಯಾದ ಸಮಸ್ತ ಕೇರಳ ಇಸ್ಲಾಂ ಮತ ವಿದ್ಯಾಭ್ಯಾಸ ಬೋರ್ಡ್ ಅಧೀನದಲ್ಲಿ ಎಸ್ಸೆಸ್ಸೆಲ್ಸಿ ನಂತರದ ವಿದ್ಯಾರ್ಥಿನಿಯರಿಗೆ ಪಿಯುಸಿ. ಜೊತೆಗೆ ಧಾರ್ಮಿಕ ಸಮನ್ವಯ ಶಿಕ್ಷಣ ವ್ಯವಸ್ಥೆಯಾದ ಸಮಸ್ತ ವಿಮೆನ್ಸ್ ಇಸ್ಲಾಮಿಕ್ ಆರ್ಟ್ಸ್ ಕಾಲೇಜು "ಫಾಳಿಲ ಕೋರ್ಸ್" ಪ್ರಸಕ್ತ ಸಾಲಿನ ಪ್ರಥಮ ತಂಡದ ಹಾಗೂ ದ್ವಿತೀಯ ವರ್ಷದ ಫೈನಲ್ ಪಬ್ಲಿಕ್ ಪರೀಕ್ಷೆ ನಡೆಯುತ್ತಿದ್ದು, ಕೇರಳ ಕೇಂದ್ರ ಸ್ಥಾನವಾದ ಸಮಸ್ತದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರಾಜ್ಯದ ವಿದ್ಯಾರ್ಥಿನಿಗಳು ಮಾತೃ ಭಾಷೆಯಾದ ಕನ್ನಡದಲ್ಲಿ ಪರೀಕ್ಷೆ ಬರೆದಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಲವು ಕಡೆ ಪಾಳಿಲ ಕೋರ್ಸ್ ಕಲಿಸಲಾಗುತ್ತಿದೆಯಾದರೂ ಕಡಬ ತಾಲೂಕಿನ ಕೊಯಿಲ ಗ್ರಾಮದ ಕೆಮ್ಮಾರ ಶಕ್ತಿ ನಗರದ ಶಂಸುಲ್ ಉಲಮಾ ಮಹಿಳಾ ಕಾಲೇಜಿನಲ್ಲಿ ಮಾತ್ರ ಈ ವರ್ಷ ಪಬ್ಲಿಕ್ ಪರೀಕ್ಷಾ ಕೇಂದ್ರ ನಿಗಧಿಪಡಿಸಲಾಗಿದ್ದು, ಅದರಂತೆ ಜು. 26ರಂದು ಪರೀಕ್ಷೆ ಆರಂಭಗೊಂಡಿದ್ದು, ಜು.29ರಂದು ಮುಕ್ತಾಯಗೊಂಡಿತು. ಮುಫತ್ತಿಶ್ ಉಮರ್ ದಾರಿಮಿ ಸಾಲ್ಮರ ಪರೀಕ್ಷೆಯ ಮೇಲ್ವಿಚಾರಕರಾಗಿದ್ದರು.

ಕಡಬ, ಪುತ್ತೂರು, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳ ವಿದ್ಯಾರ್ಥಿನಿಯರು ಹಾಗೂ ಕೇರಳದ ಬೋರ್ಡಿಂಗ್ ಸ್ಥಾಪನೆಗಳಲ್ಲಿ ವ್ಯಾಸಂಗ ಮಾಡುತ್ತಿರುವ ಜಿಲ್ಲೆಯ ವಿದ್ಯಾರ್ಥಿನಿಯಲ್ಲಿ ಇಲ್ಲಿ ಪರೀಕ್ಷೆ ಬರೆದಿದ್ದು ಕೆಮ್ಮಾರ ಸಂಶುಲ್ ಉಲಮಾ ಕಾಲೇಜು ಸಮಿತಿ ಕೋವಿಡ್ ಮಾರ್ಗಸೂಚಿಯಂತೆ ಎಲ್ಲರಿಗೂ ಸಂಪೂರ್ಣ ಸೌಕರ್ಯಗಳ ವ್ಯವಸ್ಥೆಗಳೊಂದಿಗೆ ಪರೀಕ್ಷೆ ನಡೆಸಲಾಗಿದೆ ಎಂದು ಪರೀಕ್ಷಾ ಮೇಲ್ವಿಚಾರಕರಾದ ಮುಫತ್ತಿಸ್ ಉಮ್ಮರ್ ದಾರಿಮಿ ತಿಳಿಸಿದ್ದಾರೆ.

ಕೇರಳದ ಚೇಳಾರಿ ಕೇಂದ್ರವಾಗಿ ಕಾರ್ಯಾಚರಿಸುತ್ತಿರುವ ಸಮಸ್ತದ ಎಲ್ಲಾ ಪಬ್ಲಿಕ್ ಪರೀಕ್ಷೆಗಳು ಈ ತನಕ ಅರೇಬಿಕ್ ಮತ್ತು ಅರಬಿ ಮಲಯಾಳಂನಲ್ಲಿ ನಡೆಸಲಾಗುತ್ತಿತ್ತು. ಈ ವರ್ಷದಿಂದ ಪ್ರಾರಂಭಗೊಂಡ ಫಾಳಿಲ ಕನ್ನಡಿಗ ವಿದ್ಯಾರ್ಥಿಗಳಿಗೆ ಮಾತೃಭಾಷೆಯಾದ ಕನ್ನಡದಲ್ಲಿ ಬರೆಯುವ ಅವಕಾಶ ನೀಡಲಾಗಿತ್ತು.

''ಹತ್ತು ವರ್ಷಗಳಿಂದ ಸಮಸ್ತದ ಮದರಸಗಳಲ್ಲಿ ಪರೀಕ್ಷೆ ಬರೆದಿದ್ದೆ. ಈ ವರ್ಷ ಮೊದಲ ಬಾರಿಗೆ ಸಮಸ್ತದ ಫಾಳಿಲಾ ಪರೀಕ್ಷೆ ಕನ್ನಡದಲ್ಲಿ ಬರೆಯಲು ಅವಕಾಶ ಲಭ್ಯವಾಗಿರುವುದು ಅತೀವ ಸಂತಸ ತಂದಿದೆ. ಇದಕ್ಕೆ ಅನುವು ಮಾಡಿಕೊಟ್ಟ ಎಲ್ಲರಿಗೂ ಕೃತಜ್ಞತೆಗಳು''.
- ಆಯಿಷತ್ ರಾಹಿಲಾ, ಜೋಗಿಬೆಟ್ಟು, ಅಂತಿಮ ವರ್ಷದ ವಿದ್ಯಾರ್ಥಿನಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News