ಹಳಿಯಾಳದ ಅರಣ್ಯ ಸಿಬ್ಬಂದಿಗಳ ದೌರ್ಜನ್ಯ ಆರೋಪ: ಕ್ರಮಕ್ಕೆ ಒತ್ತಾಯ

Update: 2021-07-30 10:51 GMT

ಶಿರಸಿ: ಅರಣ್ಯ ಇಲಾಖೆಯ ಸಿಬ್ಬಂದಿಗಳು ಹಳಿಯಾಳ ತಾಲೂಕ, ಭಾಗಮತಿ ಗ್ರಾಮ ಪಂಚಾಯತ ವ್ಯಾಪ್ತಿಯ ಭೀಮನಳ್ಳಿ ಗ್ರಾಮದಲ್ಲಿ ಕಾನೂನಿನ ವಿಧಿ-ವಿಧಾನ ಅನುಸರಿಸದೇ, ಬಲಪ್ರಯೋಗ, ದೈಹಿಕ ಮತ್ತು ಮಾನಸಿಕ ಒತ್ತಡದ ಮೂಲಕ ಕಳೆದ ಏರಡು ದಿನಗಳ ಹಿಂದೆ ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಪ್ರಕ್ರಿಯೆಯು ಮಾನವ ಹಕ್ಕು ಉಲ್ಲಂಘನೆ ಆಗಿರುವುದಲ್ಲದೇ, ಅಮಾನವೀಯತೆ ಮತ್ತು ಖಂಡನಾರ್ಹ ಕ್ರತ್ಯ. ಅಲ್ಲದೇ, ಕ್ರತ್ಯದ ರೀತಿ ಅಪರಾಧ ಕ್ರಮ. ತಕ್ಷಣ ಜಿಲ್ಲಾಧಿಕಾರಿಗಳು ಸಮಗ್ರವಾಗಿ ಪ್ರಕರಣ ಪರಿಶೀಲಿಸಿ ಸೂಕ್ತ ಕ್ರಮ ಜರುಗಿಸಲು ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ರವೀಂದ್ರ ನಾಯ್ಕ ಅಗ್ರಹಿಸಿದ್ದಾರೆ.

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಭಾಗಮತಿ ಗ್ರಾಮ ಪಂಚಾಯಿತಿಯ ಭೀಮನಳ್ಳಿ ಗ್ರಾಮದಲ್ಲಿ ಅರಣ್ಯ ಅಧಿಕಾರಿಗಳು ಅರಣ್ಯವಾಸಿಗಳ ಮೇಲೆ ದೈಹಿಕ ಬಲಪ್ರಯೋಗ ಮೂಲಕ ಕಾನೂನು ವಿಧಿ-ವಿಧಾನ ಅನುಸರಿಸದೇ ಅರಣ್ಯವಾಸಿಗಳ ಮೇಲೆ ಕ್ರೂರ ವರ್ತನೆ, ಮಹಿಳೆಯರು ಧರಿಸಿದ ಬಟ್ಟೆ ಅಸ್ತವ್ಯಸ್ತಗೊಳಿಸಿ, ರಕ್ತ ಬರುವ ರೀತಿಯಲ್ಲಿ ಬಲಪ್ರಯೋಗ ಮೂಲಕ ಒಕ್ಕಲೆಬ್ಬಿಸುವಿಕೆ ಮಾಡಿರುವ ವಿಡಿಯೋವನ್ನು ಶಿರಸಿಯ ಜಿಲ್ಲಾ ಅರಣ್ಯ ಭೂಮಿ ಹಕ್ಕು ಹೋರಾಟಗಾರ ವೇದಿಕೆ ಕಾರ್ಯಾಲಯದಲ್ಲಿ ಪ್ರದರ್ಶಿಸುತ್ತಾ ಮೇಲಿನಂತೆ ಹೇಳಿದರು.

ಅರಣ್ಯ ಅವಲಂಬಿತರ ಮೇಲೆ ಅರಣ್ಯ ಇಲಾಖೆ ಸಿಬ್ಬಂದಿಗಳು ಜಿಲ್ಲೆಯಲ್ಲಿ ಪದೇ ಪದೇ ಅರಣ್ಯ ವಾಸಿಗಳೊಂದಿಗೆ ಸಂಘರ್ಷಕ್ಕೆ ಇಳಿಯುತ್ತಿರುವ ಘಟನೆ ಮತ್ತು ಅಮಾನವಿಯತೆಯಾಗಿ ಅರಣ್ಯವಾಸಿಗಳ ಮೇಲೆ ದೈಹಿಕ ಬಲಪ್ರಯೋಗದಿಂದ ಕ್ರಮ ಜರುಗಿಸುವ ವಿರುದ್ಧ ತೀವ್ರ ಹೋರಾಟ ಹಮ್ಮಿಕೊಳ್ಳಲಾಗುವುದೆಂದು ಅವರು ಹೇಳಿದರು.

ಕದ್ರಾ ಪವರ್ ಕೋರ್‍ಪರೆಶನ್ (ಕೆಪಿಸಿ) ಮತ್ತು ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ 160ಕ್ಕೂ ಮಿಕ್ಕಿ ಆರ್ಥಿಕವಾಗಿ ದುರ್ಬಲರಾಗಿರುವ ಗೌಳಿ ಸಮಾಜ ಅರಣ್ಯವಾಸಿ ಕುಟುಂಬವು ಅನೇಕ ವರ್ಷದಿಂದ ಭತ್ತ, ಗೊಂಜೋಳ, ಕಬ್ಬು ಮುಂತಾದ ಅಲ್ಪಾವಧಿ ಬೆಳೆ ಸಾಗುವಳಿ ಮಾಡುತ್ತಿದ್ದು, ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಅರ್ಜಿಸಲ್ಲಿಸಿದ್ದು ಅಸಮರ್ಪಕವಾದ ಜಿಪಿಎಸ್ ಕಾರ್ಯ ಜರುಗಿರುವ ಹಿನ್ನೆಲೆಯಲ್ಲಿ ಅರಣ್ಯ ಸಿಬ್ಬಂದಿಗಳು ಕಾನೂನಿನ ವಿಧಿ-ವಿಧಾನ ಅನುಸರಿಸದೇ ಅರಣ್ಯವಾಸಿಗಳ ಮೇಲೆ ಆಕ್ರಮಣಕಾರವಾಗಿ ಪುರುಷ ಅರಣ್ಯ ಸಿಬ್ಬಂದಿಗಳು ಅನಕ್ಷರಸ್ಥ ಮಹಿಳೆಯರ ಮೇಲೆ ದೈಹಿಕ ಬಲಪ್ರಯೋಗವಾಗಿ ವರ್ತಿಸಿರುವ ಘಟನೆ ವಿಡಿಯೋದಲ್ಲಿ ದಾಖಲಿಸಲ್ಪಟ್ಟಿರುವುದು ಆಘಾತಕರ ಎಂದು ರವೀಂದ್ರ ನಾಯ್ಕ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News