ಮಂಗಳೂರು: ಮರವೂರು ಸೇತುವೆಯಲ್ಲಿ ಸಂಚಾರ ಪುನರಾರಂಭ

Update: 2021-07-30 11:27 GMT

ಮಂಗಳೂರು, ಜು.30: ಮಂಗಳೂರು-ಅತ್ರಾಡಿ ರಾಜ್ಯ ಹೆದ್ದಾರಿಯ ಫಲ್ಗುಣಿ ನದಿಗೆ ಅಡ್ಡಲಾಗಿ ಕಟ್ಟಿದ ಮರವೂರು ಸೇತುವೆಯಲ್ಲಿ ಶುಕ್ರವಾರ ಅಪರಾಹ್ನದ ವೇಳೆಗೆ ವಾಹನಗಳ ಸಂಚಾರ ಪುನರಾರಂಭಗೊಂಡಿದೆ.

ಮುಲ್ಕಿ-ಮೂಡುಬಿದಿರೆ ಶಾಸಕ ಉಮನಾಥ ಕೋಟ್ಯಾನ್ ವಾಹನ ಮತ್ತು ಜನಸಂಚಾರಕ್ಕೆ ಚಾಲನೆ ನೀಡಿದ್ದಾರೆ.

ಜೂ.14ರ ತಡರಾತ್ರಿಯ ವೇಳೆ ಈ ಸೇತುವೆಯಲ್ಲಿ ಬಿರುಕು ಮೂಡಿತ್ತು. ಅಲ್ಲದೆ ಪಿಲ್ಲರ್ ಕುಸಿದಿತ್ತು. ಇದನ್ನು ಗಮನಿಸಿದ ಸ್ಥಳೀಯರೊಬ್ಬರು ಸಂಬಂಧಪಟ್ಟವರ ಗಮನ ಸೆಳೆದಿದ್ದರು. ಅದರಂತೆ ತಕ್ಷಣ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಅಲ್ಲದೆ ಪಿಡಬ್ಲ್ಯೂಡಿ ಇಲಾಖೆಯ ತಜ್ಞ ಇಂಜಿನಿಯರ್‌ಗಳು ಪರಿಶೀಲಿಸಿದ್ದರು. ಹಾಗಾಗಿ ಸುಮಾರು 45 ದಿನಗಳ ಕಾಲ ಈ ಸೇತುವೆಯಲ್ಲಿ ಸಂಚಾರ ಸ್ಥಗಿತಗೊಂಡಿತ್ತು. ಇದರಿಂದ ಮಂಗಳೂರು ವಿಮಾನ ನಿಲ್ದಾಣ, ಬಜ್ಪೆ, ಕಟೀಲು, ಅದ್ಯಪಾಡಿ ಕಡೆಗೆ ತೆರಳುವವರು ಸುತ್ತು ಬಳಸಿ ಹೋಗುವಂತಾಗಿತ್ತು.

ಸೇತುವೆಯ ಕುಸಿದ ಪಿಲ್ಲರ್‌ನ್ನು ಯಥಾಸ್ಥಿತಿಗೆ ತಂದ ಬಳಿಕ ಗುರುವಾರ ಸೇತುವೆ ಮೇಲೆ ಹೆವಿ ವೈಟ್ ಸ್ಟ್ರೈಸ್ ಟೆಸ್ಟ್ ಮಾಡಲಾಗಿತ್ತು. ಈ ಪರೀಕ್ಷೆ ಯಶಸ್ವಿಯಾಗಿದ್ದರಿಂದ ಶುಕ್ರವಾರ ಅಪರಾಹ್ನದಿಂದಲೇ ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲಾಯಿತು. ಜನರು, ವಾಹನಿಗರು ಭಾರೀ ಖುಷಿಯಿಂದ ಸೇತುವೆಯಲ್ಲಿ ಸಂಚರಿಸತೊಡಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News