ಕೋಟ್ಯಂತರ ರೂ. ಮೌಲ್ಯದ ಮನೆ ನಿರ್ಮಾಣ ಆರೋಪ: ಸಮಗ್ರ ತನಿಖೆಗಾಗಿ ಲೋಕಾಯುಕ್ತರಿಗೆ ಪತ್ರ ಬರೆದ ಕೋಟ ಶ್ರೀನಿವಾಸ ಪೂಜಾರಿ

Update: 2021-07-30 13:15 GMT
ಕೋಟ ಶ್ರೀನಿವಾಸ ಪೂಜಾರಿ

ಉಡುಪಿ, ಜು.30: ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ‘ಸರಳ, ಸಜ್ಜನ, ಪ್ರಾಮಾಣಿಕ ಸಚಿವ ಕೋಟ ಶ್ರೀನಿವಾಸ ಪೂಜಾರಿಯವರ ಆರು ಕೋಟಿ ರೂ. ವೆಚ್ಚದ ಗುಡಿಸಲು’ ಎಂಬ ಬರಹವು ಅವರ ಮನೆಯ ಫೋಟೋದೊಂದಿಗೆ ವೈರಲ್ ಆಗುತ್ತಿದ್ದು, ಈ ಹಿನ್ನೆಲೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ, ಈ ಆರೋಪಗಳ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಲೋಕಾಯುಕ್ತಕ್ಕೆ ಜು.30ರಂದು ಮನವಿ ಸಲ್ಲಿಸಿದ್ದಾರೆ.

‘ವಿಧಾನ ಪರಿಷತ್ ಸದಸ್ಯನಾಗಿ ಮೂರು ಬಾರಿ ಆಯ್ಕೆಯಾಗಿದ್ದು ಎರಡು ಬಾರಿ ಸಂಪುಟ ದರ್ಜೆಯ ಮಂತ್ರಿಯಾಗಿದ್ದೇನೆ. ಒಂದು ಬಾರಿ ವಿರೋಧ ಪಕ್ಷದ ನಾಯಕನಾಗಿರುತ್ತೇನೆ. ಶಾಸಕರಾದ ಹಿನ್ನೆಲೆಯಲ್ಲಿ ಪ್ರತಿವರ್ಷ ಲೋಕಾಯುಕ್ತರಿಗೆ ಆಸ್ತಿಪಾಸ್ತಿ ಮತ್ತು ಉತ್ತರದಾಯಿತ್ವ ವಿವರಗಳನ್ನೊಳಗೊಂಡ ನಿಯಮ-7ರಡಿ ಆಸ್ತಿಪಾಸ್ತಿಗಳ ವಿವರದ ಪಟ್ಟಿಯನ್ನು ಕೂಡ ಒದಗಿಸಿದ್ದೇನೆ. ಆದರೂ ಎರಡು ವರ್ಷಗಳಿಂದ ನಾನು ನಿರ್ಮಿಸುತ್ತಿರುವ ವಾಸ್ತವ್ಯದ ಮನೆ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅಪಪ್ರಚಾರ ನಡೆಯುತ್ತಿರುವುದು ನನಗೆ ನೋವುಂಟು ಮಾಡಿದೆ’ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ಗಿಳಿಯಾರು ಗ್ರಾಮದ ಸರ್ವೆ ನಂ.202/2ಡಿ 1ಸಿ 4ರ 13 ಸೆಂಟ್ಸ್ ಜಾಗವನ್ನು ಸ್ವಂತ ಆದಾಯದಿಂದ ಖರೀದಿಸಿದ್ದು, ಇಲ್ಲಿ ಗ್ರಾಪಂ ಪರವಾನಿಗೆ ಪಡೆದು ಮನೆ ಕಟ್ಟುತ್ತಿದ್ದೇನೆ. ನನ್ನ ಈಗಿನ ವಾಸ್ತವ್ಯದ ಮನೆ ಸರ್ವೋಚ್ಛ ನ್ಯಾಯಾಲಯದಲ್ಲಿ ಇತ್ಯರ್ಥಕ್ಕೆ ಬಾಕಿ ಉಳಿದಿದೆ. ಆದುದರಿಂದ ನನ್ನ ಕುಟುಂಬಕ್ಕಾಗಿ ಗಿಳಿಯಾರಿನಲ್ಲಿ ಜಾಗದಲ್ಲಿ ವಾಸ್ತವ್ಯದ ಮನೆಯನ್ನು ಕಟ್ಟುತ್ತಿದ್ದು, ಸುಮಾರು 60ಲಕ್ಷ ರೂ. ಮೌಲ್ಯದಾಗಿದೆ. ಇದಕ್ಕಾಗಿ ಅಪೆಕ್ಸ್ ಬ್ಯಾಂಕಿನಲ್ಲಿ 2 ವರ್ಷದ ಹಿಂದೆ 35ಲಕ್ಷ ರೂ. ಸಾಲ ಪಡೆದುಕೊಂಡು ಮನೆ ನಿರ್ಮಾಣಕ್ಕೆ ಬಳಿಸಿದ್ದೇವೆ. ಇತ್ತೀಚೆಗೆ ಈ ಸಾಲವನ್ನು ಚುಕ್ತ ಮಾಡಿದ್ದೇನೆ. ಈ ಹಣ ಕಡಿಮೆಯಾಗಿರುವುದರಿಂದ ಎಸ್‌ಬಿಐ ವಾರಂಬಳ್ಳಿ ಶಾಖೆಯಲ್ಲಿ 40ಲಕ್ಷ ರೂ. ಸಾಲದ ಮಂಜೂರಾತಿಗಾಗಿ ದಸ್ತಾವೇಜನನ್ನು ಸಲ್ಲಿಸಿದ್ದು, ಮಂಜೂರಾತಿ ಹಂತದಲ್ಲಿದೆ ಎಂದು ಅವರು ಮನವಿಯಲ್ಲಿ ತಿಳಿಸಿದ್ದಾರೆ.

‘ಆದುದರಿಂದ ನನಗೆ ದೊರೆಯುವ ಗೌರವಧನ, ಸಂಬಳ, ಸರಕಾರದ ಆರ್ಥಿಕ ನೆರವು ಮತ್ತು ಸವಲತ್ತು ಸೇರಿದಂತೆ ನನ್ನ ಮಗನ ಉದ್ದಿಮೆ ಆದಾಯವನ್ನು ಪರಿಗಣಿಸಿ ನನ್ನಲ್ಲಿರುವ ಒಟ್ಟು ಆದಾಯ ಮತ್ತು ನಾನು ನಿರ್ಮಿಸುತ್ತಿರುವ ಮನೆಯನ್ನು ಪರಿಶೀಲಿಸಬೇಕು. ನನ್ನ ಆದಾಯಕ್ಕಿಂತ ಮನೆ ನಿರ್ಮಾಣದ ವೆಚ್ಚ ಹೆಚ್ಚಾಗಿದ್ದರೆ ನನ್ನ ಮೇಲೆ ಕ್ರಮ ಕೈಗೊಳ್ಳುವ ಸೇರಿದಂತೆ ಸೂಕ್ತ ನಿರ್ಧಾರ ಕೈಗೊಳ್ಳಬೇಕು’ ‘ಒಂದು ವೇಳೆ ನನ್ನ ಆದಾಯದ ವ್ಯಾಪ್ತಿಯಲ್ಲಿಯೇ ಮನೆ ನಿರ್ಮಾಣವಾಗಿ ದ್ದರೆ ನನ್ನ ವಿರುದ್ಧ ವೃಥಾ ಆರೋಪ ಮಾಡಿ ಸಾರ್ವಜನಿಕ ಜೀವನದಲ್ಲಿರುವ ನನಗೆ ಇರಿಸು ಮುರಿಸು ತರುತ್ತಿರುವ ವ್ಯಕ್ತಿಗಳ ಮೇಲೆ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಕೋಟ ಶ್ರೀನಿವಾಸ ಪೂಜಾರಿ ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಸಲ್ಲಿಸಿರುವ ಮನವಿಯಲ್ಲಿ ಒತ್ತಾಯಿಸಿದ್ದಾರೆ.

ಪ್ರಚಲಿತ ದಿನದಲ್ಲಿ ರಾಜಕಾರಣದಲ್ಲಿ ಸಚಿವ ಸಂಪುಟದ ವಿಸ್ತರಣೆ ಸೇರಿದಂತೆ ಮಹತ್ತರ ವಿದ್ಯಾಮಾನಗಳು ನಡೆಯುತ್ತಿರುವ ಹಿನ್ನೆಲೆಯಲ್ಲಿ ಕೆಲವು ಮಂದಿ ನನ್ನ ಸಾರ್ವಜನಿಕ ಜೀವನವನ್ನು ವಿರೋಧಿಸುವವರು 10 ಸೆಂಟ್ಸ್‌ನಲ್ಲಿ ನಿರ್ಮಾಣವಾಗುತ್ತಿರುವ ಮನೆ ಆರು ಕೋಟಿ ಎಂದು ಮತ್ತು ಸರಳ ಸಜ್ಜನರಾದವರು ಆರು ಕೋಟಿ ರೂ. ವೆಚ್ಚದ ಗುಡಿಸಲನ್ನು ಕಟ್ಟುತ್ತಿದ್ದಾರೆಂದು ವ್ಯಂಗ್ಯವಾಡಿದ್ದಾರೆ. ಈ ಅಪಪ್ರಚಾರಕ್ಕೆ ಅಂತಿಮ ವಿದಾಯ ಹೇಳುವ ನಿಟ್ಟಿನಲ್ಲಿ ಈ ಮನವಿ ಸಲ್ಲಿಸಿದ್ದೇನೆ.

-ಕೋಟ ಶ್ರೀನಿವಾಸ ಪೂಜಾರಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News