ನಿರಂತರ ಕಲಿಕಾ ಮೌಲ್ಯಮಾಪನ ವಿದ್ಯಾಸಂಸ್ಥೆಗಳ ಬೆಳವಣಿಗೆಗೆ ಅಗತ್ಯ: ಕುಲಪತಿ ಪ್ರೊ.ಪಿ.ಈಶ್ವರ ಭಟ್

Update: 2021-07-30 13:26 GMT

ಉಡುಪಿ, ಜು.30: ಶಿಕ್ಷಣ ಸಂಸ್ಥೆಗಳು ಸಮಾಜದ ಒಂದು ಭಾಗವಾಗಿದ್ದು, ಸಮಾಜದಲ್ಲಿ ಆಗುತ್ತಿರುವ ಬದಲಾವಣೆ ಹಾಗೂ ಜಾಗತಿಕ ಸ್ಪರ್ಧೆಗಳಿಗೆ ಅನುಗುಣವಾಗಿ ನವೀನ ಸಂಶೋಧನಾ ಚಟುವಟಿಕೆಗಳು ಹಾಗೂ ನಿರಂತರ ಕಲಿಕಾ ಮೌಲ್ಯಮಾಪನದ ಮೂಲಕ ಶಿಕ್ಷಣ ಸಂಸ್ಥೆಗಳು ಬೆಳವಣಿಗೆ ಸಾಧಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ಕಾನೂನು ವಿಶ್ವವಿದ್ಯಾಲಯದ ಕುಲಪತಿ ಪ್ರೊ.(ಡಾ.)ಪಿ.ಈಶ್ವರ ಭಟ್ ಅಭಿಪ್ರಾಯಪಟ್ಟಿದ್ದಾರೆ.

ಉಡುಪಿಯ ವೈಕುಂಠ ಬಾಳಿಗಾ ಕಾನೂನು ಮಹಾವಿದ್ಯಾಲಯವು ರಾಷ್ಟ್ರೀಯ ಮೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿ (ನ್ಯಾಕ್) ಬೆಂಗಳೂರು ಇವರ ಸಹಯೋಗದಲ್ಲಿ ಹಮ್ಮಿಕೊಂಡ ‘ಉನ್ನತ ಶಿಕ್ಷಣ ಸಂಸ್ಥೆಗಳ ಭವಿಷ್ಯದ ನಿರೀಕ್ಷೆಗಳು ಮತ್ತು ಪರಿಷ್ಕೃತ ಮಾನ್ಯತೆ ಹಾಗೂ ಮೌಲ್ಯಮಾಪನ ಸೂಚಿ’ ಎಂಬ ವಿಷಯದ ಮೇಲಿನ ಒಂದು ದಿನದ ರಾಷ್ಟ್ರೀಯ ವಿಚಾರ ಸಂಕಿರಣವನ್ನು ಆನ್‌ಲೈನ್ ಮೂಲಕ ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಭಾರತದ ವಿಶ್ವವಿದ್ಯಾಲಯಗಳು, ಶಿಕ್ಷಣ ಮತ್ತು ಸಂಶೋಧನಾ ಸಂಸ್ಥೆಗಳು ಸಂಶೋಧನೆಯ ವಿಷಯದಲ್ಲಿ ತುಂಬಾ ಹಿಂದುಳಿದಿದ್ದು, ಕಲಿಕೆಯ ನವೀನ ವಿಧಾನಗಳು ಹಾಗೂ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳುವ ಮೂಲಕ ಸಾಂಸ್ಕೃತಿಕ ಹಾಗೂ ಸಾಮಾಜಿಕವಾಗಿ ಸ್ಪಂದಿಸುವ ಗುಣಮಟ್ಟದ ಶಿಕ್ಷಣವನ್ನು ನೀಡಬೇಕಾಗಿದೆ ಎಂದವರು ಹೇಳಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಸರಕಾರದ ಕಾನೂನು ಇಲಾಖೆಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ್ ನಾಯಕ್ ಟಿ. ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಾನೂನು ವಿದ್ಯಾರ್ಥಿಗಳು ಕಾನೂನುಗಳು, ಪ್ರಕ್ರಿಯಾ ಸಂಹಿತೆಗಳು ಹಾಗೂ ಸಂವಿಧಾನವನ್ನು ಸರಿಯಾದ ರೀತಿಯಲ್ಲಿ ಅಭ್ಯಸಿಸಬೇಕು ಹಾಗೂ ವೃತ್ತಿಗೆ ಅವಶ್ಯಕವಾಗಿರುವ ಶಿಷ್ಟಾಚಾರ ಮತ್ತು ಸಭ್ಯತೆಗಳನ್ನು ಬೆಳಸಿಕೊಳ್ಳಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಸಮ್ಮೇಳನದಲ್ಲಿ ನಿವೃತ್ತ ಪ್ರಾಂಶುಪಾಲರು ಹಾಗೂ ಶೈಕ್ಷಣಿಕ ಸಲಹೆಗಾರರಾದ ಡಾ.ಜಿ.ಎಸ್.ಮಲ್ಲಿಕಾರ್ಜುನಪ್ಪ ಅವರು ‘ರಾಷ್ಟ್ರೀಯ ಶಿಕ್ಷಣ ನೀತಿ ಮತ್ತು ಭಾರತದಲ್ಲಿ ಉನ್ನತ ಶಿಕ್ಷಣದ ಭವಿಷ’ ಎಂಬ ವಿಷಯದ ಬಗ್ಗೆ, ಬೆಂಗಳೂರು ರಾಷ್ಟ್ರೀಯ ವೌಲ್ಯಮಾಪನ ಮತ್ತು ಮಾನ್ಯತೆ ಮಂಡಳಿಯ ಸಲಹೆಗಾರರಾದ ಡಾ.ಸುಜಾತ ಪಿ.ಶಾನ್‌ಭಾಗ್ ‘ಪರಿಷ್ಕೃತ ಮಾರ್ಗಸೂಚಿಗಳು ಮತ್ತು ಎಸ್ಸೆಸ್ಸಾರ್ ಹಾಗೂ ಐಕ್ಯೂಎಸಿ ಆನ್‌ಲೈನ್ ಸಲ್ಲಿಕೆ’ ಎಂಬ ವಿಷಯದ ಬಗ್ಗೆ ಹಾಗೂ ಐಐಟಿ ಖರಗ್‌ಪುರದ ರಾಜೀವ್‌ಗಾಂಧಿ ಬೌದ್ದಿಕ ಸ್ವತ್ತಿನ ಹಕ್ಕುಗಳ ಶಾಲೆಯ ಪ್ರೊ. ಇಂದ್ರಜಿತ್ ದುಬೆ ‘ಉನ್ನತ ಶಿಕ್ಷಣದಲ್ಲಿ ಗುಣಮಟ್ಟವನ್ನು ಖಾತ್ರಿಪಡಿಸುವ ಅವಿಷ್ಕಾರಗಳು’ ಎಂಬ ವಿಷಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಿಷಯ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರೊ.(ಡಾ.) ನಿರ್ಮಲ ಹರಿಕೃಷ್ಣ ಅವರು ಅತಿಥಿಗಳನ್ನು ಸ್ವಾಗತಿಸಿದರು. ಪ್ರಾದ್ಯಾಪಕರುಗಳಾದ ಪ್ರೀತಿ ಹರೀಶ್‌ರಾಜ್ ಅತಿಥಿಗಳನ್ನು ಪರಿಚಯಿಸಿದರೆ, ಸುರೇಖಾ ಕೆ ವಂದಿಸಿದರು. ಜಯಮೋಲ್ ಪಿ.ಎಸ್ ಕಾರ್ಯಕ್ರಮವನ್ನು ನಿರೂಪಿಸಿ ರಘುನಾಥ್ ಕೆ.ಎಸ್ ಕಾರ್ಯಕ್ರಮ ಸಂಯೋಜಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News