ಉಡುಪಿ ಸರಕಾರಿ ತಾಯಿ-ಮಕ್ಕಳ ಆಸ್ಪತ್ರೆಯಲ್ಲಿ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಪ್ರತಿಭಟನೆ

Update: 2021-07-30 13:49 GMT

ಉಡುಪಿ, ಜು.30: ಅನಿವಾಸಿ ಉದ್ಯಮಿ ಬಿ.ಆರ್.ಶೆಟ್ಟಿ ಕಂಪೆನಿ ಮುನ್ನಡೆಸುತ್ತಿರುವ ಉಡುಪಿಯ ಸರಕಾರಿ ಕೂಸಮ್ಮ ಶಂಭು ಶೆಟ್ಟಿ ಸ್ಮಾರಕ ಹಾಜಿ ಅಬ್ದುಲ್ಲ ತಾಯಿ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ಬಾಣಂತಿಯರಿಗೆ ಚಿಕಿತ್ಸೆ ನಿರಾಕರಿಸಲಾಗುತ್ತಿದೆ ಎಂದು ಆರೋಪಿಸಿ ಉಡುಪಿ ಕಾಂಗ್ರೆಸ್ ನೇತೃತ್ವದಲ್ಲಿ ಶುಕ್ರವಾರ ಆಸ್ಪತ್ರೆ ಎದುರು ಪ್ರತಿಭಟನೆ ನಡೆಸಲಾಯಿತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಇಂದು ಆರೋಗ್ಯ ಎಂಬುದು ಅತೀ ಅಗತ್ಯವಾಗಿದೆ. ಇಂತಹ ಕಾಲಘಟ್ಟದಲ್ಲಿ ಎಲ್ಲ ರೀತಿಯ ವ್ಯವಸ್ಥೆ ಇರುವ ಈ ಆಸ್ಪತ್ರೆಯನ್ನು ಸರಕಾರಕ್ಕೆ ನಡೆಸಲು ಆಗುವುದಿಲ್ಲ ಎಂಬುದು ಬಹಳ ದೊಡ್ಡ ದುರಂತವಾಗಿದೆ. ಆದುದರಿಂದ ಸರಕಾರ ಕೂಡಲೇ ಈ 200 ಬೆಡ್‌ಗಳ ಆಸ್ಪತ್ರೆ ಸುಪರ್ದಿಗೆ ತೆಗೆದುಕೊಂಡು ಜನರಿಗೆ ಉತ್ತಮ ಆರೋಗ್ಯ ಸೇವೆ ನೀಡಬೇಕು ಎಂದು ಒತ್ತಾಯಿಸಿದರು.

ನಗರಸಭೆಯ ವಿಪಕ್ಷ ನಾಯಕ ರಮೇಶ್ ಕಾಂಚನ್ ಮಾತನಾಡಿ, ಹಿಂದಿನ ಸರಕಾರ ಬಡ ಜನರಿಗೆ ಸುಸಜ್ಜಿತ ಆಸ್ಪತ್ರೆಯನ್ನು ನಿರ್ಮಿಸಿದ್ದು ಅದರನ್ನು ನಿರ್ವಹಣೆ ಮಾಡುವಲ್ಲಿ ಈಗಿನ ಬಿಜೆಪಿ ಸರಕಾರ ವಿಫಲವಾಗಿದೆ. ಹೊಸ ಮುಖ್ಯಮಂತ್ರಿಗಳು ಆಸ್ಪತ್ರೆಯನ್ನು ನಿರ್ವಹಿಸಲು ಸೂಕ್ತ ವ್ಯವಸ್ಥೆ ಮಾಡಬೇಕು ಎಂದು ಆಗ್ರಹಿಸಿದರು.

ಕಾಂಗ್ರೆಸ್ ಮುಖಂಡ ಅಮೃತ್ ಶೆಣೈ ಮಾತನಾಡಿ, ಪ್ರಸ್ತುತ ಈ ಆಸ್ಪತ್ರೆಯಲ್ಲಿ ಸೂಕ್ತ ವ್ಯವಸ್ಥೆ ಇಲ್ಲದ ಕಾರಣ ರೋಗಿಗಳನ್ನು ವಾಪಾಸ್ಸು ಕಳುಹಿಸುತ್ತಿರುವ ಬಗ್ಗೆ ದೂರುಗಳು ಬರುತ್ತಿವೆ. ಜನರ ಕಷ್ಟಕಾಲದ ಸಂದರ್ಭದಲ್ಲಿ ಶಾಸಕರು ಹಡಿಲು ಭೂಮಿಗೆ ಕೋಟ್ಯಂತರ ರೂ.ವ್ಯಯಿಸುವ ಬದಲು ಜನರ ಚಿಕಿತ್ಸೆಗೆ ವ್ಯಯಿಸಿದ್ದರೆ ಅನುಕೂಲವಾಗುತ್ತಿತ್ತು. ಸರಕಾರ ಕೂಡಲೇ ಈ ಬಗ್ಗೆ ಗಮನವಹಿಸಿ ಸೂಕ್ತ ಕ್ರಮ ತೆಗೆದುಕೊಳ್ಳಬೇಕು. ಇಲ್ಲದಿದ್ದರೆ ತೀವ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಈ ಸಂದರ್ಭದಲ್ಲಿ ಕೆಪಿಸಿಸಿ ಪ್ಯಾನಲಿಸ್ಟ್ ವೆರೋನಿಕಾ ಕರ್ನೆಲಿಯೊ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಪ್ರಖ್ಯಾತ್ ಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಎಸ್ಸಿ-ಎಸ್ಟಿ ಘಟಕದ ಅಧ್ಯಕ್ಷ ಜಯರಾಮ್ ನಾಯಕ್, ಕಾರ್ಮಿಕ ಕಾಂಗ್ರೆಸ್ ಘಟಕದ ಅಧಕ್ಷ ಗಣೇಶ್ ಪೂಜಾರಿ, ನಾಯಕರಾದ ಯತೀಶ ಕರ್ಕೇರಾ, ಸಾಯಿರಾಜ್, ಗಣೇಶ ನೇರ್ಗಿ, ಹಮದ್, ಗಣೇಶ್ ದೇವಾಡಿಗ, ಸುಕೇಶ್, ಲಕ್ಷಣ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News