ಪಡುಬಿದ್ರಿ-ಕೋಟ ಸೊಸೈಟಿ ಸಹಕಾರಿಯಿಂದ ಚಿಂತನ-ಮಂಥನ ಕಾರ್ಯಕ್ರಮ

Update: 2021-07-30 14:44 GMT

ಪಡುಬಿದ್ರಿ: ಉಡುಪಿ ಜಿಲ್ಲೆಯ ಎರಡು ಪ್ರತಿಷ್ಠಿತ ಪಡುಬಿದ್ರಿ ಮತ್ತು ಕೋಟ ಸಹಕಾರಿ ವ್ಯವಸಾಯಿಕ ಸೊಸೈಟಿಗಳು ಶುಕ್ರವಾರ ಪಡುಬಿದ್ರಿಯ ಎಂಡ್ ಪಾಯಿಂಟ್‍ನಲ್ಲಿರುವ ಬ್ಲೂ ಫ್ಲ್ಯಾಗ್ ಬೀಚ್‍ನಲ್ಲಿ ಸಹಕಾರಿ ಚಿಂತನ-ಮಂಥನ ಕಾರ್ಯಕ್ರಮ ನಡೆಯಿತು. 

ಪಡುಬಿದ್ರಿ ಸೊಸೈಟಿಯ ಕೇಂದ್ರ ಕಛೇರಿಯಲ್ಲಿ ಸುಮಾರು 3 ಗಂಟೆಗಳ ಕಾಲ ವಿವಿಧ ಸವಲತ್ತುಗಳು, ಸಾಲ ವಸೂಲಾತಿ, ಸ್ವ ಸಹಾಯ ಗುಂಪುಗಳ ನಿರ್ವಹಣೆ, ಗುಂಪು ಸಾಲ ಹಾಗೂ ಜನೋಪಯೋಗಿ ಕಾರ್ಯಕ್ರಮಗಳ ಬಗ್ಗೆ ವಿಸ್ತೃತ ಚರ್ಚೆ ನಡೆಸಿದರು.

ಪಡುಬಿದ್ರಿ ಸೊಸೈಟಿಯ ಅಧ್ಯಕ್ಷ ವೈ.ಸುಧೀರ್ ಕುಮಾರ್, ಉಡುಪಿ ಜಿಲ್ಲೆಯ ಅತೀ ದೊಡ್ಡ ಸೊಸೈಟಿಯಾಗಿರುವ ಕೋಟ ಸೊಸೈಟಿಯ ಆಡಳಿತ ಮಂಡಳಿಯು ಪಡುಬಿದ್ರಿಗೆ ಭೇಟಿ ನೀಡಿ ವಿಚಾರ ವಿನಿಮಯ ಹಂಚಿಕೊಂಡಿದ್ದು, ಮುಂದಿನ ದಿನಗಳಲ್ಲಿ ಪಡುಬಿದ್ರಿ ಸೊಸೈಟಿಯು ಶಾಶ್ವತ ನಿಧಿ ಸಹಿತ ಕೋಟ ಸೊಸೈಟಿಯ ಜನಪರ ಯೋಜನೆಗಳನ್ನು ಕಾರ್ಯಗತಗೊಳಿಸಲಿದೆ ಎಂದರು. 

ಕೋಟ ಸೊಸೈಟಿಯ ಅಧ್ಯಕ್ಷ ತಿಮ್ಮಪ್ಪ ಪೂಜಾರಿ ಮಾತನಾಡಿ, ಪಡುಬಿದ್ರಿ ಸೊಸೈಟಿಯು ಸ್ವ ಉದ್ಯೋಗಿಗಳಿಗೆ ಹೆಚ್ಚು ನೆರವು ನೀಡುತ್ತಿರುವುದು ಗಮನ ಸೆಳೆದಿದೆ. ನಮ್ಮಲ್ಲೂ ಇದನ್ನು ಮುಂದುವರಿಸಲು ನಿರ್ಧರಿಸಲಾಗಿದೆ ಎಂದರು.

ಕೋಟ ಸೊಸೈಟಿಯಲ್ಲಿ 42 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ಪ್ರಸ್ತುತ ಕಾರ್ಯನಿರ್ವಹಣಾಧಿಕಾರಿಯಾಗಿ ಶನಿವಾರ ನಿವೃತ್ತಿ ಹೊಂದಲಿರುವ ಕೋಟ ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶೋಭಾರವರನ್ನು ಉಭಯ ಸಂಸ್ಥೆಗಳ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಕೋಟ ಸೊಸೈಟಿಯ ಉಪಾಧ್ಯಕ್ಷ ರಾಜೀವ ದೇವಾಡಿಗ, ಪಡುಬಿದ್ರಿ ಸೊಸೈಟಿಯ ಉಪಾಧ್ಯಕ್ಷ ಗುರುರಾಜ ಪೂಜಾರಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ನಿಶ್ಮಿತಾ ಪಿ.ಎಚ್., ಉಭಯ ಸಂಸ್ಥೆಗಳ ನಿರ್ದೇಶಕರು, ಮ್ಯಾನೇಜರ್‍ಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News