ಪಾಕಿಸ್ತಾನದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ಹಲ್ಲೆ ಪ್ರಕರಣ: ಮಾನವ ಹಕ್ಕು ಸಂಘಟನೆ ಎಚ್ಚರಿಕೆ

Update: 2021-07-30 15:41 GMT

ಇಸ್ಲಾಮಾಬಾದ್, ಜು.30: ಪಾಕಿಸ್ತಾನದಲ್ಲಿ ಮಹಿಳೆಯರ ಮೇಲಿನ ಹಲ್ಲೆ ಪ್ರಕರಣ ಹೆಚ್ಚುತ್ತಿದ್ದು , ಕಳೆದ ವರ್ಷದ ಜನವರಿಯಿಂದ ಮಾರ್ಚ್ ವರೆಗಿನ ಅವಧಿಯಲ್ಲಿ ಕೌಟುಂಬಿಕ ಹಿಂಸೆಯ ಪ್ರಕರಣದಲ್ಲಿ 200% ಏರಿಕೆಯಾಗಿದೆ ಎಂದು ಹ್ಯೂಮನ್ ರೈಟ್ಸ್ ವಾಚ್ ಸಂಸ್ಥೆಯ ವರದಿ ಹೇಳಿದೆ.

ಮಾರ್ಚ್ ನಲ್ಲಿ ಕೊರೋನ ಸೋಂಕಿನ ಕಾರಣದಿಂದ ದೇಶವ್ಯಾಪಿ ಲಾಕ್ಡೌನ್ ಜಾರಿಯಾದ ಬಳಿಕ ಕೌಟುಂಬಿಕ ಹಿಂಸೆ ಮತ್ತಷ್ಟು ಹೆಚ್ಚಿದೆ ಎಂದೂ ವರದಿ ಹೇಳಿದೆ. ಕಳೆದ ವಾರ , ರಾಜತಾಂತ್ರಿಕರೊಬ್ಬರ ಪುತ್ರಿ, 27 ವರ್ಷದ ನೂರ್ ಮುಕದಮ್ ರ ರುಂಡ ಕತ್ತರಿಸಿದ್ದ ಸ್ಥಿತಿಯಲ್ಲಿದ್ದ ಮೃತದೇಹ ಪತ್ತೆಯಾಗಿತ್ತು. ಈಕೆಯ ಬಾಲ್ಯಕಾಲದ ಸ್ನೇಹಿತನೊಬ್ಬ ಈ ಹತ್ಯೆ ಮಾಡಿರುವುದಾಗಿ ಪ್ರಕರಣ ದಾಖಲಾಗಿತ್ತು. ಆದರೆ ವಾಸ್ತವವಾಗಿ, ಮನೆಯಲ್ಲಿ ತನ್ನ ಮೇಲಾಗುತ್ತಿರುವ ಹಲ್ಲೆಯನ್ನು ಸಹಿಸಲಾಗದೆ ಮುಕದಮ್ ಕಿಟಕಿಯಿಂದ ಹೊರಗೆ ಜಿಗಿಯಲು ಪ್ರಯತ್ನಿಸಿದ್ದರು. ಆಕೆಯನ್ನು ಮತ್ತೆ ಒಳಗೆ ಎಳೆದುಕೊಂಡು ಮತ್ತಷ್ಟು ಹಲ್ಲೆ ನಡೆಸಿ, ರುಂಡ ಕತ್ತರಿಸಲಾಗಿದೆ ಎಂದು ಪಾಕಿಸ್ತಾನದ ಪ್ರಮುಖ ಮಾನವಹಕ್ಕು ಕಾಯಕರ್ತೆ ತಾಹಿರಾ ಅಬ್ದುಲ್ಲಾ ಹೇಳಿದ್ದಾರೆ.

ರಾಜತಾಂತ್ರಿಕರ ಪುತ್ರಿಗೇ ಈ ಗತಿಯಾದರೆ, ಇಲ್ಲಿರುವ ಸಾಮಾನ್ಯ ಜನರ ಪಾಡೇನು ಎಂದು ಪ್ರಶ್ನಿಸಿರುವ ಅವರು, ಲಿಂಗ ಆಧಾರಿತ ಹಲ್ಲೆ, ಹಿಂಸಾಚಾರ ಪ್ರಕರಣ ದೇಶದಲ್ಲಿ ಹೆಚ್ಚುತ್ತಿರುವುದು ದೇಶವು ಇನ್ನಷ್ಟು ಧಾರ್ಮಿಕ ಉಗ್ರವಾದದ ಕಡೆಗೆ ವಾಲುತ್ತಿರುವ ಸೂಚನೆಯಾಗಿದೆ ಎಂದಿದ್ದಾರೆ. ಪಾಕಿಸ್ತಾನದಲ್ಲಿ ಮಹಿಳೆಯರ ವಿರುದ್ಧದ ಲೈಂಗಿಕ ದೌರ್ಜನ್ಯ ಮತ್ತು ಹಿಂಸಾಚಾರವು ಮೌನ ಸಾಂಕ್ರಾಮಿಕವಾಗಿದ್ದು ಯಾರಿಗೂ ಇದು ಗೋಚರವಾಗುವುದಿಲ್ಲ ಮತ್ತು ಯಾರು ಕೂಡಾ ಈ ಬಗ್ಗೆ ಮಾತಾಡುವುದಿಲ್ಲ ಎಂದು ತಾಹಿರಾ ಹೇಳುತ್ತಾರೆ.

 ಕೌಟುಂಬಿಕ ಹಿಂಸೆಯಿಂದ ಸಂತ್ರಸ್ತರಾಗಿರುವ ಮಹಿಳೆಯರಲ್ಲಿ ಬಹುತೇಕ ಬಡ ಮತ್ತು ಮಧ್ಯಮವರ್ಗದವರಾಗಿದ್ದು ಹೆಚ್ಚಿನ ಸಂದರ್ಭದಲ್ಲಿ ಇಂತಹ ಸಾವಿನ ಪ್ರಕರಣ ವರದಿಯಾಗುವುದೇ ಇಲ್ಲ ಎಂದು ಮಾನವಹಕ್ಕು ಕಾರ್ಯಕರ್ತರು ಆರೋಪಿಸಿದ್ದಾರೆ.

ಹೀಗಿದ್ದರೂ, ಮಹಿಳೆಯರನ್ನು ಕೌಟುಂಬಿಕ ಹಿಂಸೆಯಿಂದ (ಪತಿಯಿಂದ ಹಲ್ಲೆ ಸೇರಿದಂತೆ) ರಕ್ಷಿಸುವ ನಿಟ್ಟಿನಲ್ಲಿ ಮಸೂದೆಯೊಂದನ್ನು ಅಂಗೀಕರಿಸಲು ಪಾಕ್ ಸಂಸತ್ತು ವಿಫಲವಾಗಿದೆ. ಬದಲು, ಈ ಬಗ್ಗೆ ಪರಿಶೀಲಿಸಲು ಇಸ್ಲಾಮಿಕ್ ಸೈದ್ಧಾಂತಿಕ ಸಮಿತಿಗೆ ಸೂಚಿಸಿದೆ. ವಿಪರ್ಯಾಸವೆಂದರೆ, ಇದೇ ಸಮಿತಿ ಈ ಹಿಂದೆ, ಪತ್ನಿಗೆ ಗಂಡ ಹೊಡೆಯುವುದರಲ್ಲಿ ತಪ್ಪೇನಿಲ್ಲ ಎಂದು ಸಲಹೆ ನೀಡಿತ್ತು.

2020ರಲ್ಲಿ ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಲಿಂಗ ಸಮಾನತೆ ಸೂಚ್ಯಂಕದಲ್ಲಿರುವ 156 ದೇಶಗಳಲ್ಲಿ ಪಾಕಿಸ್ತಾನ 153ನೇ ಸ್ಥಾನ ಪಡೆದಿತ್ತು. ಇರಾಕ್, ಯೆಮನ್ ಮತ್ತು ಅಪಘಾನಿಸ್ತಾನ ದೇಶಗಳು ಪಾಕಿಸ್ತಾನದ ನಂತರದ ಸ್ಥಾನದಲ್ಲಿದ್ದವು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News