ಇಪಿಎಫ್‌ಓ ಹೆಸರಿನಲ್ಲಿ ಹಣ ಪಡೆದು ವಂಚನೆ: ದೂರು

Update: 2021-07-30 16:48 GMT

ಉಡುಪಿ, ಜು.30: ಎಂಪ್ಲಾಯಿಸ್ ಪ್ರೊವಿಡೆಂಟ್ ಫಂಡ್ ಆರ್ಗನೈಝೇಶನ್ (ಇಪಿಎಫ್‌ಓ) ಹೆಸರಿನಲ್ಲಿ ಹಣ ಪಡೆದು ವಂಚನೆ ಎಸಗಿರುವ ಬಗ್ಗೆ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮಲ್ಪೆಯ ರತೀಶ್ ಶೆಟ್ಟಿ(46), ಅಂಬಲಪಾಡಿಯ ಪ್ರಕಾಶ್ ಅಡಿಗ(49), ಬೈಲಕೆರೆಯ ವಿಕ್ರಮ್ ರಾವ್(43) ಎಂಬವರು ಒಳಸಂಚು ನಡೆಸಿ ರತೀಶ್ ಶೆಟ್ಟಿ ಹೆಸರಿನಲ್ಲಿ ಉಡುಪಿ ನಗರಸಭೆ ಪೌರಾಯುಕ್ತರಿಂದ ಪರವಾನಿಗೆಯನ್ನು ಪಡೆದು ಇಪಿಎಫ್‌ಓನಿಂದ ಸಿಗುವ ಸವಲತ್ತುಗಳನ್ನು ಉಡುಪಿ ಪರಿಸರದ ಅಸಂಘಟಿತ ವಲಯದ ಆಟೋ ಚಾಲಕರಿಗೆ ಮತ್ತು ಇತರರಿಗೆ ದೊರಕಿಸಿ ಕೊಡುವುದಾಗಿ ನಂಬಿಸಿ, ಉಡುಪಿ ಟ್ಯಾಕ್ಸಿ ಪ್ರೈವೇಟ್ ಲಿಮಿಟೆಡ್ ಎಂಬ ಸಂಸ್ಥೆಯನ್ನು ಸ್ಥಾಪಿಸಿದ್ದರು. ಇದರಲ್ಲಿ 29 ಜನ ನೌಕರರು ಉದ್ಯೋಗದಲ್ಲಿದ್ದಾರೆಂದು ನಂಬಿಸಿ, ಆನ್‌ಲೈನ್ ಮೂಲಕ ಅಪ್‌ಲೋಡ್ ಮಾಡಿ ನೊಂದಣಿ ಮಾಡಿಕೊಂಡಿದ್ದರು. ಅಲ್ಲದೆ ಈ ಸಂಸ್ಥೆಯು ಇಪಿಎಫ್‌ಓನ ಅಧಿಕೃತ ಪ್ರತಿನಿಧಿತವಾಗಿದ್ದು ಎಂದು ಜನರಲ್ಲಿ ತಪ್ಪಾಗಿ ನಂಬಿಕೆ ಮೂಡಿಸಿದ್ದರು. ಹೀಗೆ ಆರೋಪಿಗಳು 2018 ರಿಂದ 2019ರ ಅಕ್ಟೋಬರ್ ತಿಂಗಳವರೆಗೆ ಪ್ರಧಾನ ಮಂತ್ರಿ ರೋಜ್‌ಗಾರ್ ಪ್ರೋತ್ಸಾಹ ಯೋಜನೆಯ ಹಣ ಸುಮಾರು 64,952ರೂ.ವನ್ನು ಸದಸ್ಯರಿಂದ ಪಡೆದು ಇಪಿಎಫ್‌ಓ ಹೆಸರಿನಲ್ಲಿ ವಂಚಿಸಿ, ಇಪಿಎಫ್‌ಓ ಸಂಸ್ಥೆಗೆ ಮೋಸ ಮಾಡಿದ್ದಾರೆ ಎಂದು ಇಪಿಎಫ್‌ಓ ಎನ್ಫಾರ್ಸ್‌ಮೆಂಟ್ ಆಫೀಸರ್ ಮಲ್ಲಿಕಾರ್ಜುನ ರೆಡ್ಡಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News