ಭೂಗರ್ಭದಲ್ಲಿ ಅಣ್ವಸ್ತ್ರ ಕ್ಷಿಪಣಿ ಬಂಕರ್ ಗಳ ನಿರ್ಮಾಣ ಹೆಚ್ಚಿಸಿರುವ ಚೀನಾ: ಅಮೆರಿಕ ಎಚ್ಚರಿಕೆ

Update: 2021-07-30 17:28 GMT

ತೈಪೆ (ತೈವಾನ್) ಜು. 30:ವಾಷಿಂಗ್ಟನ್ ಗೂ ಬೀಜಿಂಗ್ ನಡುವೆ ಉದ್ವಿಗ್ನತೆ ಹೆಚ್ಚುತ್ತಿರುವಂತೆಯೇ, ಚೀನಾ ಭೂಗರ್ಭದಲ್ಲಿ ಪ್ರಮುಖ ಅಣ್ವಸ್ತ್ರ ಕ್ಷಿಪಣಿಗಳ ಬಂಕರ್ಗಳನ್ನು ವಿಸ್ತರಿಸುತ್ತಿರುವುದಾಗಿ ಅಮೆರಿಕದ ಸೇನೆ ಎಚ್ಚರಿಕೆ ನೀಡಿದೆ. ಭೂಗರ್ಭದಲ್ಲಿ ಸರಿಸುಮಾರು 250ಕ್ಕೂ ಅಧಿಕ ಅಣ್ವಸ್ತ್ರ ಬಂಕರ್ಗಳನ್ನು ನಿರ್ಮಿಸುತ್ತಿದೆ ಎಂದು ಫೆಡರೇಶನ್ ಆಫ್ ಅಮೆರಿಕನ್ ಸೈಂಟಿಸ್ಟ್ ನ ಸಂಶೋಧರು ಅಂದಾಜಿಸಿದ್ದಾರೆ. ಈ ವಾರ ಪ್ರಕಟವಾದ ಫೆಡರೇಶನ್ ನ ಸಂಶೋದನೆಯ ಕುರಿತು ‘ದಿ ನ್ಯೂಯಾರ್ಕ್ ಟೈಮ್ಸ್’ ಮಾಡಿದ ವರದಿಯ ಲಿಂಕ್ ಅನ್ನು ಅಮೆರಿಕದ ವ್ಯೆಹಾತ್ಮಕ ಕಮಾಂಡ್ ಟ್ವೀಟ್ ಮಾಡಿದೆ.

‘‘ಜಗತ್ತು ಎದುರಿಸುತ್ತಿರುವ ಬೆದರಿಕೆ ಹೆಚ್ಚುತ್ತಿರುವ ಕುರಿತು ನಾವು ಏನು ಹೇಳುತ್ತಿದ್ದೆವೋ ಅದು ಈಗ ಜನರಿಗೆ ಅರಿವಾಗಿದೆ. ಅದರ ಸುತ್ತು ಸುತ್ತವರಿದಿರುವ ರಹಸ್ಯದ ಬಗ್ಗೆ ಅವರಿಗೆ ತಿಳಿಯುತ್ತಿದೆ’’ ಎಂದು ಅಮೆರಿಕದ ಅಣ್ವಸ್ತ್ರಗಳ ಶಸ್ತ್ರಾಗಾರದ ಮೇಲ್ವಿಚಾರಣೆ ನಡೆಸುತ್ತಿರುವ ವ್ಯೆಹಾತ್ಮಕ ಕಮಾಂಡ್ ಹೇಳಿದೆ.

ಕ್ಸಿನ್ಜಿಯಾಂಗ್ ವಲಯದಲ್ಲಿ ಚೀನಾ ಎರಡನೇ ಅಣ್ವಸ್ತ್ರ ಕ್ಷೇತ್ರ ನಿರ್ಮಿಸುತ್ತಿರುವುದು ಕಳೆದ ವಾರ ವರದಿಯಾಗಿತ್ತು. ಜೂನ್ ನಲ್ಲಿ ಕ್ಯಾಲಿಫೋರ್ನಿಯಾದ ನಾನ್ಪ್ರಾಲಿಫೆರೇಶನ್ ಸ್ಟಡೀಸ್ ನ ಜೇಮ್ಸ್ ಮಾರ್ಟಿನ್ ನೆರೆಯ ಗನ್ಸು ಪ್ರಾಂತ್ಯದಲ್ಲಿ ಇನ್ನೊಂದು ಅಣ್ವಸ್ತ ಬಂಕರ್ ಅನ್ನು ಪತ್ತೆ ಮಾಡಿದ್ದರು.

ವರದಿಯ ಕುರಿತು ಚೀನಾ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇತ್ತೀಚೆಗಿನ ಅಣ್ವಸ್ತ್ರ ಬಂಕರ್ಗಳ ಬಗ್ಗೆ ಪ್ರಶ್ನಿಸಿದಾಗ ಚೀನಾದ ವಿದೇಶಾಂಗ ಸಚಿವಾಲಯ ಶುಕ್ರವಾರ, ಈ ಬಗ್ಗೆ ತನಗೇನೂ ತಿಳಿದಿಲ್ಲ ಎಂದು ಹೇಳಿತ್ತು. ಅಮೆರಿಕ ಹಾಗೂ ಚೀನಾದ ನಡುವಿನ ಬಾಂಧವ್ಯ ಈ ದಶಕದಲ್ಲೇ ಅತ್ಯಂತ ಹದಗೆಟ್ಟಿರುವ ಸಂದರ್ಭ ಈ ವರದಿ ಪ್ರಕಟವಾಗಿದೆ. ವ್ಯಾಪಾರ, ತಂತ್ರಜ್ಞಾನ, ಸೈಬರ್ ಸೆಕ್ಯುರಿಟಿ, ಮಾನವ ಹಕ್ಕು ಸೇರಿದಂತೆ ಹಲವು ವಿಷಯಗಳ ಕುರಿತಂತೆ ಉಭಯ ರಾಷ್ಟ್ರಗಳು ಅಸಮಾಧಾನ ಹೊಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News