ಇಂದಿನ ಮಾಧ್ಯಮಗಳಿಗೆ ಜನಿವಾರ ಹಾಕಲಾಗಿದೆ: ಶಶಿಧರ್ ಭಟ್ ಆರೋಪ

Update: 2021-07-31 16:55 GMT

ಭಟ್ಕಳ : ಮಾಧ್ಯಮ ಕ್ಷೇತ್ರವು ಅಲ್ಪಸಂಖ್ಯಾತ, ದಲಿತ ಮತ್ತು ಹಿಂದುಳಿದ ವರ್ಗದ ವಿರೋಧಿಯಾಗಿದ್ದು ಇಂದಿನ ಮಾಧ್ಯಮಗಳಿಗೆ ಜನಿವಾರ ತೊಡಿಸಲಾಗಿದೆ ಎಂದು ಬಾಲಾಜಿ ಮಿಡಿಯಾ ಗ್ರೂಪ್ ಸಂಪಾದಕ ಪ್ರಗತಿಪರ ಚಿಂತಕ ಶಶಿಧರ್ ಭಟ್ ಹೇಳಿದರು.

ಅವರು ಶನಿವಾರ ಇಲ್ಲಿನ ಕಮಲಾವತಿ ರಾಮನಾಥ್ ಶಾನುಭಾಗ ಸಭಾಂಗಣದಲ್ಲಿ ಕರ್ನಾಟಕ ಜರ್ನಲಿಸ್ಟ್ ಯುನಿಯನ್ ವತಿಯಿಂದ ನೀಡಲ್ಪಟ್ಟ ರಾಜ್ಯಮಟ್ಟದ ಹರ್ಮನ್ ಮೋಗ್ಲಂಗ್ ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದರು.

ಸಮಾಜವನ್ನು ಒಡೆಯುವಂತಹ, ಸಮಾದಲ್ಲಿ ಆತಂಕ ಮೂಡಿವಂತಹ ಕೆಲಸ ಮಾದ್ಯಮಗಳಿಂದ ಆಗುತ್ತಿದ್ದು ಸಂಕುಚಿತ ಮನೋಭಾವದ ಜನರು ಮಾದ್ಯಮ ಕ್ಷೇತ್ರವನ್ನು ಆಳುತ್ತಿದ್ದಾರೆ ಎಂದ ಅವರು, ಸಮಾಜದ ತುಳಿತಕ್ಕೊಳಗಾದವರ ಪರವಾಗಿ ನಿಲ್ಲಬೇಕಾದ ಮಾಧ್ಯಮಗಳು ಇಂದು ಜನಿವಾರಧಾರಿಗಳಾಗಿವೆ ಎಂದು ಆರೋಪಿಸಿದರು.

ಭಾರತ ಎಂದರೆ ಬಹುತ್ವದ ದೇಶವಾಗಿದೆ. ಇಲ್ಲಿ ನಾವು ಏನನ್ನು ತೊಡಬೇಕು, ಏನನ್ನು ಏನನ್ನು ತಿನ್ನಬೇಕು ಎನ್ನುವುದು ಅವರವರ ಭಾವಕ್ಕೆ ಬಿಟ್ಟಿದ್ದು, ನಮ್ಮಲ್ಲಿ ಮೊದಲು ಸಾಮಾಜಿಕ ಬದ್ಧತೆ ಬೇಕಿದೆ. ಜಾತಿ ಕೋಮಿನ ಅನುಗುಣವಾಗಿ ಸಮಾಜ ಒಡೆಯುತ್ತಿದೆ. ಮಾಧ್ಯಮದವರೇ ಕೋಮುವಾದಿಗಳಾಗಿದ್ದಾರೆ ಎಂದರು.

ಜಿಲ್ಲಾ ಮಟ್ಟದ ಪತ್ರಿಕಾ ದಿನಾಚರಣೆ ಹಾಗೂ ರಾಜ್ಯ ಮಟ್ಟದ ಹರ್ಮನ್ ಮೊಗ್ಲಿಂಗ್ ಪ್ರಶಸ್ತಿ ಪ್ರಧಾನ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ಸುನಿಲ್ ನಾಯ್ಕ, ಮಾದ್ಯಮಗಳು ತನ್ನ ಗಟ್ಟಿತನವನ್ನು ಉಳಿಸಿಕೊಂಡು ಹೋಗಬೇಕು, ಸಮಾಜಕ್ಕೆ ಮೌಲ್ಯಗಳನ್ನು ತಲುಪಿಸುವ ಕೆಲಸ ಪತ್ರಕರ್ತರಿಂದ ಆಗಬೇಕಾಗಿದೆ ಎಂದರು. 

ಕರ್ನಾಟಕ ಜರ್ನಲಿಸ್ಟ್ ಯೂನಿಯನ್ ಜಿಲ್ಲಾಧ್ಯಕ್ಷ ಮೋಹನ್ ನಾಯ್ಕ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಸಂಘದ ಹಿರಿಯ ಉಪಾಧ್ಯಕ್ಷ ದೀಪಕಕುಮಾರ ಶೇಣ್ವಿ ಪ್ರಾಸ್ತಾವಿಕ ಮಾತನ್ನಾಡಿದರು.

ಕಾರ್ಯಕ್ರಮದಲ್ಲಿ ಉದ್ಯಮಿ ರಾಜೇಶ ನಾಯ್ಕ, ಭಟ್ಕಳ ಉಪವಿಭಾಗದ ಸಹಾಯಕ ಆಯುಕ್ತೆ ಮಮತಾದೇವಿ, ಬಿಜೆಪಿ ಮಹಿಳಾ ಮುಖಂಡೆ ಶಿವಾನಿ ಶಾಂತರಾಮ ವೇದಿಕೆಯಲ್ಲಿ ಉಪಸ್ಥಿತಿತರಿದ್ದರು. ಈಲ್ಲಾ ಪ್ರಧಾನ ಕಾರ್ಯದರ್ಶಿ ಸುಬ್ರಮಣ್ಯ ದಾಸನಕುಡಿಕೆ ಧನ್ಯವಾದ ಅರ್ಪಿಸಿದರು. ಶಿಕ್ಷಕ ಗಂಗಾಧರ್ ನಾಯ್ಕ ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News