ಪಾದೂರು; ಐಎಸ್‍ಪಿಆರ್ ಎಲ್ ಯೋಜನೆ: ಸಂತ್ರಸ್ಥರ ಸಭೆ

Update: 2021-07-31 17:18 GMT

ಕಾಪು : ಪಾದೂರು, ಕಳತ್ತೂರು ಗ್ರಾಮದಲ್ಲಿ ಐಎಸ್‍ಪಿಆರ್‍ಎಲ್ ನ 2 ನೇ ಹಂತದ ಯೋಜನೆಯಲ್ಲಿ ಭೂಮಿ ಕಳೆದುಕೊಳ್ಳುವ ಕುಟುಂಬಗಳಿಗೆ ಪುನರ್ವಸತಿ ಮತ್ತು ಪುನನಿರ್ಮಾಣ ಒದಗಿಸುವ ಮತ್ತು ಭೂಸ್ವಾಧೀನತೆ ವಿಚಾರದಲ್ಲಿ ಮಾಹಿತಿ ಮತ್ತು ಒದಗಿಸಲಾಗುವ ಸೌಲಭ್ಯಗಳ ಕುರಿತು ಕಳತ್ತೂರು ಕುಶಲ ಶೇಖರ ಶೆಟ್ಟಿ ಸಭಾ ಭವನದಲ್ಲಿ ಶನಿವಾರ ನಡೆದ ಸಂತ್ರಸ್ತರ ಸಭೆ ನಡೆಯಿತು. 

ಸಭೆಯಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ಜಿ. ಜಗದೀಶ್, ಐಎಸ್‍ಪಿಆರ್‍ಎಲ್‍ನ 2 ನೇ ಹಂತದ ಯೋಜನೆಯಲ್ಲಿ  ಭೂಮಿ ಕಳೆದುಕೊಂಡವರಿಗೆ ಉತ್ತಮವಾದ ಪುನರ್ವಸತಿ ಕಾಲನಿ ನಿರ್ಮಿಸಲಾಗುವುದು.  ಭೂ ದರ ನಿಗದಿ ಪರೀಶಿಲನೆ ಬಗ್ಗೆ ಜಿಲ್ಲಾಧಿಕಾರಿ ನೇತೃತ್ವದ ಕಮಿಟಿಯಲ್ಲಿ ಚರ್ಚಿಸಿ ಸೂಕ್ತ ನ್ಯಾಯ ಒದಗಿಸಿಕೊಡಲಾಗುವುದು ಎಂದ ಅವರು, ಪುನರ್ವಸತಿ ಕಮೀಟಿಯಲ್ಲಿ ಎರಡು ಗ್ರಾಮ ಪಂಚಾಯತ್ ಅಧ್ಯಕ್ಷರುಗಳನ್ನು ಹಾಗೂ ಸಂತ್ರಸ್ಥರ ಪರವಾಗಿ ಒಬ್ಬರನ್ನು ಸೇರಿಸಿಕೊಳ್ಳುವ ಬಗ್ಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ನುಡಿದರು.  

ಈ ಯೋಜನೆಯಲ್ಲಿ ಖಾಯಂ ಉದ್ಯೋಗ ನೀಡುವ ಅವಕಾಶ ಇಲ್ಲದೇ ಇರುವುದರಿಂದ ಉದ್ಯೋಗದ ಬಗ್ಗೆ ಪರಿಹಾರ ಧನಕ್ಕೆ ಸಂಬಂಧಿಸಿ ಮುಂದಿನ ದಿನದಲ್ಲಿ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು. ಸಿಎಸ್‍ಆರ್ ಫಂಡ್‍ಗೆ ಸಂಬಂದಿಸಿದಂತೆ  ಯೋಜನೆ ದೇಶದ ಭದ್ರತೆಯ ದೃಷ್ಟಿ ಯಿಂದ ಕಚ್ಚಾ ತೈಲ ಸಂಗ್ರಹಣಾ ಘಟಕವಾಗಿರುವುದರಿಂದ ಇಲ್ಲಿ ಯಾವುದೇ ಲಾಭಾಂಶವಿರುವುದಿಲ್ಲ. ಈ ಬಗ್ಗೆ ಅವರ ಲೆಕ್ಕಪತ್ರವನ್ನು ಪರಿಶೀಲನೆ ನಡೆಸಲಾಗುವುದು ಹೇಳಿದರು.

ಸಂತ್ರಸ್ಥರ ಬೇಡಿಕೆ: ಮಜೂರು ಗ್ರಾಮದಲ್ಲಿ ಈ ಮೊದಲು ಒಂದು ಸೆಂಟ್ಸ್ ಜಾಗಕ್ಕೆ 6,600 ರಿಂದ 40,000/- ಕ್ಕೆ ನಿಗದಿ ಪಡಿಸಲಾಗಿದೆ. ಹೇರೂರು ಗ್ರಾಮದಲ್ಲಿ 6,600 ರಿಂದ 22,000/- ಕ್ಕೆ ಹಾಗೂ ಪಾದೂರು ಗ್ರಾಮದಲ್ಲಿ 9,340 ರಿಂದ ಕೇವಲ 10,270ಕ್ಕೆ ನಿಗದಿ ಪಡಿಸಲಾ ಗಿದೆ. ಜಮೀನಿಗೆ ನಿಗದಿ ಮಾಡಿರುವ ಮೌಲ್ಯಮಾಪನದಲ್ಲಿ ಗೊಂದಲವಿದೆ ಎಂದು ಸಂತ್ರಸ್ಥರು ದೂರಿದರು. 

ಯೋಜನೆಗೆ ಸಂಬಂಧಿಸಿದಂತೆ ಜಾಗ ಕಳೆದುಕೊಳ್ಳುವವರು ಎಲ್ಲರೂ ಕೃಷಿಯನ್ನು ಅವಲಂಬಿತರಾಗಿದ್ದು, ಅವರು ಕಡಿಮೆ ಹಣಕ್ಕೆ ಜಾಗ ಮಾರಾಟ ಮಾಡಿ ಪಕ್ಕದ ಗ್ರಾಮದಲ್ಲಿ 10 ಪಟ್ಟು ಹೆಚ್ಚಿನ ದರಕ್ಕೆ ಖರೀದಿಸಲು ಸಾಧ್ಯವಿಲ್ಲ. ಭೂಮಿ, ಮನೆ ಕಳೆದುಕೊಳ್ಳುವವರಿಗೆ ಸೂಕ್ತ ಪುನರ್ವಸತಿ ಹಾಗೂ ಉದ್ಯೋಗಾವಕಾಶ ನೀಡಬೇಕು ಎಂದು ಆಗ್ರಹಿಸಿದರು.

ಕಂಪೆನಿಯ ಸಿಎಸ್‍ಆರ್ ಫಂಡ್ ಅನ್ನು ಈ ಭಾಗದ ಪ್ರದೇಶದ ಅಭಿವೃದ್ಧಿಗೆ ಉಪಯೋಗಿಸಬೇಕು. ಜೆಎಂಸಿ ಸರ್ವೇ ಮಾಡುವ ಮೊದಲು ದರ ನಿಗದಿ ಮಾಡಬೇಕು. ಯೋಜನೆಗೆ ಸಂಬಂದಿಸಿದ ಪುನರ್ವಸತಿ ಸಮಿತಿಯಲ್ಲಿ ಸ್ಥಳಿಯ ಎರಡು ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನು ಹಾಗೂ ಸಂತ್ರಸ್ಥರ ಪರವಾಗಿ ಓರ್ವರನ್ನು ಸೇರಿಸಬೇಕು ಎಂದು ಒತ್ತಾಯಿಸಿದರು.

ಸಭೆಯಲ್ಲಿ ಸುಮಾರು 150 ಮಂದಿ ಭಾಗವಹಿಸಿದ್ದು, ಸಂತ್ರಸ್ಥರಾದ ಸುರೇಂದ್ರ ಜೈನ್ ಹಾಗೂ ಸ್ಥಳಿಯ ಹೋರಾಟ ಸಮಿತಿಯ ಅರುಣ್ ಶೆಟ್ಟಿ ಪಾದೂರು, ಶಿವರಾಮ ಶೆಟ್ಟಿ ಮಾತನಾಡಿದರು. 

ಶಾಸಕ ಲಾಲಾಜಿ ಆರ್ ಮೆಂಡನ್, ಕಾಪು ತಹಸೀಲ್ದಾರ್ ಪ್ರದೀಪ್ ಹುರ್ಡೇಕರ್, ಅಪರ ಜಿಲ್ಲಾಧಿಕಾರಿ  ಸದಾಶಿವ ಪ್ರಭು, ಮಜೂರು ಗ್ರಾಮ ಪಂಚಾಯಿತಿ ಅಧ್ಯಕ್ಷೆ  ಶರ್ಮಿಳ ಆಚಾರ್ಯ, ಕುತ್ಯಾರು ಗ್ರಾಮ ಪಂಚಾಯಿತಿ ಅಧ್ಯಕ್ಷೆ ಲತಾ ಆಚಾರ್ಯ, ಕೆಐಎಡಿಬಿ ವಿಶೇಷ ಭೂಸ್ವಾಧೀನಾ ಧಿಕಾರಿ ಬಿನೋಯ, ಐಎಸ್‍ಪಿಆರ್‍ಎಲ್‍ನ ಮುಖ್ಯಸ್ಥ ರಾಜಶೇಖರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News