ಒಂದು ಕುಟುಂಬದಿಂದ ಒಬ್ಬ ಯೋಧ: ಸೇನೆಗೆ ಟಿಬೆಟಿಯನ್ನರನ್ನು ನೇಮಕಾತಿ ಮಾಡಿಕೊಳ್ಳುತ್ತಿರುವ ಚೀನಾ

Update: 2021-07-31 17:23 GMT

ಬೀಜಿಂಗ್, ಜು.31: ಭಾರತದೊಂದಿಗಿನ ವಾಸ್ತವಿಕ ನಿಯಂತ್ರಣ ರೇಖೆ(ಎಲ್ಎಸಿ)‌ ಯುದ್ದಕ್ಕೂ ನಿಯೋಜಿಸುವ ಉದ್ದೇಶದಿಂದ ಚೀನಾವು ಪ್ರತೀ ಟಿಬೆಟನ್ ಕುಟುಂಬದಿಂದ ಒಬ್ಬ ಸದಸ್ಯನನ್ನು ಸೇನೆಗೆ ಸೇರಿಸುವುದನ್ನು ಕಡ್ಡಾಯುಗೊಳಿಸಿದೆ ಎಂದು ಮೂಲಗಳನ್ನು ಉಲ್ಲೇಖಿಸಿ ‘ಎನ್ಡಿ ಟಿವಿ’ ವರದಿ ಮಾಡಿದೆ. 

ಟಿಬೆಟ್ ಯುವಕರ ನಿಷ್ಟೆಯ ಪರೀಕ್ಷೆ ನಡೆಸಿದ ಬಳಿಕ ಅವರನ್ನು ಸೇನೆಗೆ ಸೇರ್ಪಡೆಗೊಳಿಸಲಾಗುತ್ತಿದೆ. ಲಡಾಕ್ ಮತ್ತು ಅರುಣಾಚಲ ಪ್ರದೇಶದಲ್ಲಿನ ವಿಪರೀತ ಹವಾಮಾನ ಪರಿಸ್ಥಿತಿಗೆ ಹೊಂದಿಕೊಳ್ಳುವ ವ್ಯಕ್ತಿಗಳನ್ನು ಸೇನೆಗೆ ಆಯ್ಕೆ ಮಾಡುವ ಮೂಲಕ ಎಲ್ಎಸಿಯಲ್ಲಿ ತನ್ನ ಸೇನೆಯನ್ನು ಬಲಿಷ್ಟಗೊಳಿಸುವುದು ಚೀನಾದ ಉದ್ದೇಶವಾಗಿದೆ. 

ಟಿಬೆಟ್ ಯುವಕರಿಗೆ ತರಬೇತಿ ನೀಡಿ ಎಲ್ಎಸಿಯಲ್ಲಿ ಶಾಶಸ್ವತವಾಗಿ ನಿಯೋಜಿಸುವ ಉದ್ದೇಶವಿದೆ ಎಂದು ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿವೆ. ಚೀನಾದ ಅಧಿಕೃತ ಭಾಷೆ ಕಲಿಯುವುದು, ಚೀನಾ ಕಮ್ಯುನಿಸ್ಟ್ ಪಾರ್ಟಿಯ ಸಾರ್ವಭೌಮತ್ವವನ್ನು ಒಪ್ಪಿಕೊಳ್ಳುವುದು ಮುಂತಾದ ನಿಷ್ಟೆ ಪರೀಕ್ಷೆಗೆ ಟಬೆಟ್ ಯುವಜನತೆ ಒಳಪಡುತ್ತಾರೆ. 

ಭಾರತದ ಸೇನೆಯ ವಿಶೇಷ ಮುಂಚೂಣಿ ಪಡೆಯಲ್ಲಿರುವ ಟಿಬೆಟನ್ ತುಕಡಿಯ ನಿರ್ವಹಣೆಯನ್ನು ಗಮನಿಸಿದ ಬಳಿಕ ಈ ವರ್ಷದ ಜನವರಿ-ಫೆಬ್ರವರಿಯಲ್ಲಿ ಈ ನೇಮಕಾತಿ ನಡೆದಿದೆ ಎಂದು ಮೂಲಗಳು ಹೇಳಿವೆ. ಟಿಬೆಟ್ ಯುವಜನರನ್ನು ಸೇನೆಗೆ ನಿಯೋಜಿಸುವ ಮೂಲಕ 2 ಲಾಭ ಪಡೆಯಲು ಚೀನಾ ನಿರ್ಧರಿಸಿದೆ. ಟಿಬೆಟ್ ಸ್ವಾಯತ್ತ ಪ್ರದೇಶದಲ್ಲಿ ಚೀನಾದ ಆಡಳಿತಕ್ಕೆ ಹೆಚ್ಚಿನ ಮನ್ನಣೆ ಲಭ್ಯವಾಗಿಸುವುದು ಹಾಗೂ ಲಡಾಕ್ನಂತಹ ಬೆಟ್ಟಪ್ರದೇಶಗಳಲ್ಲಿ ಚೀನಾದ ಯೋಧರನ್ನು ನಿಯೋಜಿಸುವ ಒತ್ತಡ ಕಡಿಮೆಗೊಳಿಸುವುದು ಚೀನಾದ ತಂತ್ರವಾಗಿದೆ ಎಂದು ವರದಿ ಹೇಳಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News