ಅಪಘಾನಿಸ್ತಾನ: ವಿಶ್ವಸಂಸ್ಥೆ ಕಚೇರಿ ಕಟ್ಟಡದ ಮೇಲೆ ಗ್ರೆನೇಡ್ ದಾಳಿ; ಭದ್ರತಾ ಸಿಬಂದಿ ಮೃತ್ಯು

Update: 2021-07-31 17:31 GMT

ಕಾಬೂಲ್, ಜು.31: ಅಪಘಾನ್ ಸೇನಾಪಡೆ ಹಾಗೂ ತಾಲಿಬಾನ್ ಗಳ ನಡುವೆ ಪೂರ್ವ ಅಪಘಾನಿಸ್ತಾನದ ಹೊರವಲಯದಲ್ಲಿ ತೀವ್ರ ಸಂಘರ್ಷ ನಡೆಯುತ್ತಿರುವಂತೆಯೇ, ಹೆರಾತ್ ನಗರದಲ್ಲಿರುವ ವಿಶ್ವಸಂಸ್ಥೆ ಕಚೇರಿ ಕಟ್ಟಡದ ಮೇಲೆ ನಡೆದ ದಾಳಿಯಲ್ಲಿ ಭದ್ರತಾ ಸಿಬಂದಿ ಮೃತನಾಗಿರುವುದಾಗಿ ವರದಿಯಾಗಿದೆ. ಹೆರಾತ್ನಲ್ಲಿರುವ ವಿಶ್ವಸಂಸ್ಥೆಯ ಕಚೇರಿಯ ಮೇಲೆ ರಾಕೆಟ್ನಿಂದ ಪ್ರಯೋಗಿಸಿದ ಗ್ರೆನೇಡ್ ಹಾಗೂ ಗುಂಡಿನ ದಾಳಿ ನಡೆದಿದ್ದು, ವಿಶ್ವಸಂಸ್ಥೆಯ ಸಿಬಂದಿಗಳಿಗೆ ಯಾವುದೇ ಗಾಯಗಳಾಗಿಲ್ಲ. 

ಸರಕಾರಿ ವಿರೋಧಿ ಶಕ್ತಿಗಳು ನಡೆಸಿದ ಈ ದಾಳಿಯನ್ನು ಕಠಿಣ ಶಬ್ದಗಳಿಂದ ಖಂಡಿಸಲಾಗಿದೆ ಎಂದು ಅಪಘಾನಿಸ್ತಾನದಲ್ಲಿರುವ ವಿಶ್ವಸಂಸ್ಥೆಯ ನೆರವು ತಂಡದ ಹೇಳಿಕೆ ತಿಳಿಸಿದೆ. ಈ ದಾಳಿಗೆ ಕಾರಣರಾದವರನ್ನು ಗುರುತಿಸಿ ಕಠಿಣ ಕ್ರಮ ಕೈಗೊಳ್ಳಬೇಕಿದೆ ಎಂದು ಅಪಘಾನಿಸ್ತಾನಕ್ಕೆ ವಿಶ್ವಸಂಸ್ಥೆಯ ವಿಶೇಷ ಪ್ರತಿನಿಧಿಯಾಗಿರುವ ಡೆಬೋರ ಲಿಯೊನ್ಸ್ ಹೇಳಿದ್ದಾರೆ. ಘಟನೆಯನ್ನು ಅಮೆರಿಕವೂ ಖಂಡಿಸಿದೆ. 

ಸಂಘರ್ಷ ನಡೆದ ಸ್ಥಳಕ್ಕೆ ಅತೀ ಹತ್ತಿರದಲ್ಲಿ ವಿಶ್ವಸಂಸ್ಥೆ ಕಚೇರಿ ಇರುವುದರಿಂದ ಎರಡೂ ಕಡೆಯ ಗುಂಡುಹಾರಾಟ ಭದ್ರತಾ ಸಿಬಂದಿಯ ಸಾವಿಗೆ ಕಾರಣವಾಗಿರಬಹುದು ಎಂದು ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್ ಹೇಳಿದ್ದಾರೆ. ಇರಾನ್ ಮತ್ತು ಟರ್ಕ್ಮೆನಿಸ್ತಾನ್ ಗಡಿಗೆ ಹತ್ತಿರದ ಹೆರಾತ್ ನಗರದ ಹೊರವಲಯದ ಹಲವು ಜಿಲ್ಲೆಗಳು ಹಾಗೂ ಎರಡು ಗಡಿದಾಟುಗಳು ಈಗಾಗಲೇ ತಾಲಿಬಾನ್ ನಿಯಂತ್ರಣದಲ್ಲಿದೆ. ಉಳಿದ ಪ್ರದೇಶಗಳ ಮೇಲೆಯೂ ನಿಯಂತ್ರಣ ಸಾಧಿಸುವತ್ತ ತಾಲಿಬಾನ್ ಮುನ್ನಡೆದಿದೆ. ಶುಕ್ರವಾರ ಅಪಘಾನ್ ಸೇನೆ- ತಾಲಿಬಾನ್ ಮಧ್ಯೆ ನಗರದ ಹೊರವಲಯದಲ್ಲಿ ಭೀಕರ ಸಂಘರ್ಷದ ಬಳಿಕ ಹಲವು ಕುಟುಂಬಗಳು ಇಲ್ಲಿಂದ ವಲಸೆ ಹೋಗಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News