ಮಹಾರಾಷ್ಟ್ರದಲ್ಲಿ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಪತ್ತೆ

Update: 2021-08-01 03:33 GMT

ಪುಣೆ: ಜಿಲ್ಲೆಯ ಬೆಲ್ಸರ್ ಗ್ರಾಮದಲ್ಲಿ ರಾಜ್ಯದ ಮೊಟ್ಟಮೊದಲ ಝೀಕಾ ವೈರಸ್ ಪ್ರಕರಣ ಶನಿವಾರ ಪತ್ತೆಯಾಗಿದೆ. ಇದರೊಂದಿಗೆ ಕೇರಳ ಬಳಿಕ ಝೀಕಾ ವೈರಸ್ ಪತ್ತೆಯಾದ ಎರಡನೇ ರಾಜ್ಯವಾಗಿದೆ ಮಹಾರಾಷ್ಟ್ರ.

ಪುಣೆಯ ಪುರಂದರ್ ತಾಲೂಕಿನಲ್ಲಿ ಶುಕ್ರವಾರ ಝೀಕಾ ವೈರಸ್ ಪರೀಕ್ಷೆಯಲ್ಲಿ 50 ವರ್ಷದ ಮಹಿಳೆಗೆ ಪಾಸಿಟಿವ್ ಫಲಿತಾಂಶ ಬಂದಿದೆ ಎಂದು ಸಾರ್ವಜನಿಕ ಆರೋಗ್ಯ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ. ಮಹಿಳೆಗೆ ಚಿಕೂನ್‌ ಗುನ್ಯಾ ಸೋಂಕು ಕೂಡಾ ತಗುಲಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಆರೋಗ್ಯ ಇಲಾಖೆ ತಜ್ಞರ ತಂಡ ಬೆಲ್ಸರ್ ಗ್ರಾಮಕ್ಕೆ ಭೇಟಿ ನೀಡಿ ತಪಾಸಣೆ ನಡೆಸಿದೆ. "ಬೆಲ್ಸರ್ ಗ್ರಾಮದ ಝೀಕಾ ವೈರಸ್ ಸೋಂಕಿತ ಮಹಿಳೆ ಸಂಪೂರ್ಣ ಗುಣಮುಖರಾಗಿದ್ದಾರೆ. ಇದೀಗ ಯಾವುದೇ ರೋಗಲಕ್ಷಣ ಇಲ್ಲ. ರಾಜ್ಯದ ಕ್ಷಿಪ್ರಸ್ಪಂದನೆ ತಂಡ ಕೂಡಾ ಗ್ರಾಮದಲ್ಲಿ ತಪಾಸಣೆ ನಡೆಸಿದ್ದು, ಸ್ಥಳೀಯ ಆಡಳಿತದ ಜತೆ ಹಾಗೂ ಆರೋಗ್ಯ ಸಿಬ್ಬಂದಿ ಜತೆ ಸಭೆ ನಡೆಸಿ, ಮಾರ್ಗಸೂಚಿಯ ಬಗ್ಗೆ ಮಾಹಿತಿ ನೀಡಲಾಗಿದೆ" ಎಂದು ರಾಜ್ಯ ಸರ್ವೇಕ್ಷಣಾ ಅಧಿಕಾರಿ ಡಾ.ಪ್ರದೀಪ್ ಅವಟೆ ಹೇಳಿದ್ದಾರೆ.

ಝೀಕಾ ವೈರಸ್ ಸೋಂಕು ಸೊಳ್ಳೆಗಳಿಂದ ಹರಡುವ ಸಾಂಕ್ರಾಮಿಕವಾಗಿದ್ದು, ಈಡಿಸ್ ಪ್ರಬೇಧದ ಸೊಳ್ಳೆಗಳಿಂದ ಪ್ರಮುಖವಾಗಿ ಹರಡುತ್ತದೆ. ಇವು ಸಾಮಾನ್ಯವಾಗಿ ಮುಂಜಾನೆ ಮತ್ತು ಮುಸ್ಸಂಜೆಯ ವೇಳೆ ಹೆಚ್ಚಾಗಿ ಕಂಡು ಬರುತ್ತವೆ. ಜ್ವರ, ಗುಳ್ಳೆಗಳು, ಕೆಂಗಣ್ಣು, ಮಾಂಸಂಖಂಡ ಮತ್ತು ಕೀಲು ನೋವು, ಆಲಸ್ಯ, ತಲೆನೋವಿನಂಥ ರೋಗಲಕ್ಷಣಗಳಿರುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News