ಭಾರತೀಯ ಆರ್ಥಿಕ ಸೇವೆಗಳ ಪರೀಕ್ಷೆಯಲ್ಲಿ ಜಮ್ಮು-ಕಾಶ್ಮೀರದ ರೈತನ ಮಗನಿಗೆ 2 ನೇ ಶ್ರೇಯಾಂಕ

Update: 2021-08-01 09:24 GMT
photo: twitter

ಶ್ರೀನಗರ: ಜಮ್ಮು-ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ರೈತನ ಪುತ್ರ ತನ್ವೀರ್ ಅಹ್ಮದ್ ಖಾನ್, ಕೇಂದ್ರ ಲೋಕ  ಸೇವಾ ಆಯೋಗ (ಯುಪಿಎಸ್ ಸಿ) ನಡೆಸಿದ ಪ್ರತಿಷ್ಠಿತ ಭಾರತೀಯ ಆರ್ಥಿಕ ಸೇವೆಗಳ (ಐಇಎಸ್) ಪರೀಕ್ಷೆಯಲ್ಲಿ ಎರಡನೇ ಶ್ರೇಯಾಂಕ ಪಡೆಯುವ ಮೂಲಕ ಕೇಂದ್ರಾಡಳಿತ ಪ್ರದೇಶಕ್ಕೆ ಗೌರವ ತಂದುಕೊಟ್ಟಿದ್ದಾರೆ. ಖಾನ್ ತನ್ನ ಮೊದಲ ಪ್ರಯತ್ನದಲ್ಲೇ ಈ ಸಾಧನೆ ಮಾಡಿದ್ದಾರೆ.

ದಕ್ಷಿಣ ಕಾಶ್ಮೀರದ ಶ್ರೀನಗರದಿಂದ ಸುಮಾರು 80 ಕಿ.ಮೀ. ದೂರದಲ್ಲಿರುವ ನೈಜೀನ್‌ಪೋರಾ ಕುಂಡ್ ಹಳ್ಳಿಯಿಂದ ಬಂದಿರುವ ಖಾನ್ ಕುಂಡ್ ನ ಸರಕಾರಿ ಪ್ರಾಥಮಿಕ ಶಾಲೆಯಿಂದ ಪ್ರಾಥಮಿಕ ಶಿಕ್ಷಣ ಪಡೆದರು.  ನಂತರ ವಾಲ್ಟೆಂಗೂದ ಸರಕಾರಿ ಪ್ರೌಢಶಾಲೆಯಲ್ಲಿ ಶಿಕ್ಷಣ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಖಾನ್ ಅವರು ರಜ್ಲೂ ಕುಂಡ್ ಸರಕಾರಿ ಹೈಯರ್ ಸೆಕೆಂಡರಿ ಸ್ಕೂಲ್ ನಲ್ಲಿ  12 ನೇ ತರಗತಿಯಲ್ಲಿ ಉತ್ತೀರ್ಣರಾದರು ಹಾಗೂ 2016 ರಲ್ಲಿ ಸರಕಾರಿ ಪದವಿ ಕಾಲೇಜು ಅನಂತನಾಗ್ ನಿಂದ ಬ್ಯಾಚುಲರ್ ಆಫ್ ಆರ್ಟ್ಸ್ ಪದವಿ ಪಡೆದಿದ್ದಾರೆ ಎಂದು ಅವರು ಹೇಳಿದರು.

ಖಾನ್ ಮೊದಲಿನಿಂದಲೂ ಪ್ರತಿಭಾವಂತ ವಿದ್ಯಾರ್ಥಿಯಾಗಿದ್ದು, ಕಾಶ್ಮೀರ ವಿಶ್ವವಿದ್ಯಾಲಯದ ಪ್ರವೇಶ ಪರೀಕ್ಷೆಯಲ್ಲಿ ಮೂರನೇ ಶ್ರೇಣಿಯನ್ನು ಗಳಿಸಿದ್ದಾರೆ ಹಾಗೂ  ಕಾಶ್ಮೀರ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಕೋರ್ಸ್‌ಗೆ ಪ್ರವೇಶ ಪಡೆದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅವರು ಸ್ನಾತಕೋತ್ತರ ಕಾರ್ಯಕ್ರಮದ ಕೊನೆಯ ವರ್ಷದಲ್ಲಿ ಜೂನಿಯರ್ ರಿಸರ್ಚ್ ಫೆಲೋಶಿಪ್ (JRF) ಅನ್ನು ಪಡೆಯುವ ಮೂಲಕ ಮತ್ತೊಂದು ಸಾಧನೆಯನ್ನು ಮಾಡಿದ್ದರು ಎಂದು ಅವರು ಹೇಳಿದರು.

ಜೆಆರ್‌ಎಫ್ ಫೆಲೋ ಆಗಿದ್ದ ಅವರು, ಕೋಲ್ಕತ್ತಾದ ಇನ್ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಸ್ಟಡೀಸ್, ಮಾಸ್ಟರ್ಸ್ ಇನ್ ಫಿಲಾಸಫಿ (ಎಂ.ಫಿಲ್) ಗೆ ಅಭಿವೃದ್ಧಿ ಅಧ್ಯಯನಕ್ಕೆ ಕೋಲ್ಕತಾಗೆ ಹೋದರು.

"ಕೋವಿಡ್ ಅವಧಿಯಲ್ಲಿ, ನಾನು ನನ್ನ ಕೋಣೆಯ ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದೆ. ನನ್ನ ಎಂ.ಫಿಲ್ ಮಾಡುವಾಗ ಐಇಎಸ್ ಪರೀಕ್ಷೆಗೆ ತಯಾರಿ ಆರಂಭಿಸಿದೆ. ಕೋವಿಡ್ ನನ್ನ ಅಧ್ಯಯನದ ವೇಳಾಪಟ್ಟಿ ಮೇಲೆ ಪ್ರಭಾವ ಬೀರಲು ನಾನು ಎಂದಿಗೂ ಬಿಡಲಿಲ್ಲ" ಎಂದು ಖಾನ್ ಹೇಳಿದರು.

“ನಾನು ತುಂಬಾ ಕಷ್ಟಪಟ್ಟು ಕೆಲಸ ಮಾಡಿದೆ ಹಾಗೂ ನನ್ನ ಮೊದಲ ಪ್ರಯತ್ನವನ್ನು ನನ್ನ ಕೊನೆಯ ಪ್ರಯತ್ನವೆಂದು ಪರಿಗಣಿಸಿದೆ ಅಂತಿಮವಾಗಿ  ನಾನು ಈ ಸಾಧನೆಯನ್ನು ಮಾಡಿದೆ" ಎಂದು ಅಹ್ಮದ್ ಖಾನ್  ಹೇಳಿದರು.

ಜಮ್ಮು ಹಾಗೂ ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಐಇಎಸ್ 2020 ಪರೀಕ್ಷೆಯಲ್ಲಿ ಎರಡನೇ ಶ್ರೇಣಿಯನ್ನು ಗಳಿಸಿದ್ದಕ್ಕಾಗಿ ಅಹ್ಮದ್ ಖಾನ್ ಅವರನ್ನು ಅಭಿನಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News