ಆ.15ರೊಳಗೆ ದ.ಕ.ಜಿಲ್ಲೆಗೆ ಕೋವಿಡ್ ಲಸಿಕೆ ಪೂರೈಸಿ: ದ.ಕ.ಜಿಲ್ಲಾ ಕಾಂಗ್ರೆಸ್ ಒತ್ತಾಯ

Update: 2021-08-01 06:43 GMT

ಮಂಗಳೂರು, ಆ.1: ದ.ಕ.ಜಿಲ್ಲೆಗೆ ಬೇಡಿಕೆಗೆ ತಕ್ಕಷ್ಟು ಕೋವಿಡ್-19 ನಿರೋಧಕ ಲಸಿಕೆಯನ್ನು ಪೂರೈಸಲು ರಾಜ್ಯ ಸರಕಾರಕ್ಕೆ ಆ.15ರವರೆಗೆ ಗಡುವು ನೀಡುವೆವು. ಅದರೊಳಗೆ ಪೂರೈಸದಿದ್ದರೆ ರಾಜ್ಯ ಸರಕಾರದ ವಿರುದ್ಧ ತೀವ್ರ ಪ್ರತಿಭಟನೆ ನಡೆಸಲಾಗುವುದು ಎಂದು ದ.ಕ.ಜಿಲ್ಲಾ ಕಾಂಗ್ರೆಸ್ ಎಚ್ಚರಿಕೆ ನೀಡಿದೆ.

ನಗರದ ಮಲ್ಲಿಕಟ್ಟೆಯಲ್ಲಿರುವ ಕಾಂಗ್ರೆಸ್ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಿಸಿಸಿ ಅಧ್ಯಕ್ಷ, ವಿಧಾನ ಪರಿಷತ್ ಸದಸ್ಯ ಹರೀಶ್ ಕುಮಾರ್ ದ.ಕ.ಜಿಲ್ಲೆಯಲ್ಲಿ ಕೊರೋನ ನಿಯಂತ್ರಿಸಲು ಬೇಕಾದ ಲಸಿಕೆಯು ಬೇಡಿಕೆಗೆ ತಕ್ಕಷ್ಟು ಸಿಗುತ್ತಿಲ್ಲ. ಜನರು ಲಸಿಕೆಗಾಗಿ ಅಲೆದಾಡುತ್ತಿದ್ದಾರೆ. ದ.ಕ.ಜಿಲ್ಲಾಧಿಕಾರಿಯ ಬಳಿ ಕಾಂಗ್ರೆಸ್ ನಿಯೋಗ ತೆರಳಿ ಈ ಬಗ್ಗೆ ಸಮಾಲೋಚನೆ ನಡೆಸಿದಾಗ ಅಗತ್ಯವಿರುವಷ್ಟು ಲಸಿಕೆಯು ಬರುತ್ತಿಲ್ಲ ಎಂಬ ಉತ್ತರ ನೀಡಿದ್ದಾರೆ. ರಾಜ್ಯ ಸರಕಾರಕ್ಕೆ ದ.ಕ.ಜಿಲ್ಲೆಯ ಜನತೆಯ ಮೇಲೆ ಎಷ್ಟು ಕಾಳಜಿ ಇದೆ ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಹಾಗಾಗಿ ಆಗಸ್ಟ್ 15ರೊಳಗೆ ಬೇಡಿಕೆಗೆ ಅನುಗುಣವಾಗಿ ಕೋವಿಡ್ ಲಸಿಕೆಯನ್ನು ಪೂರೈಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದು ಅನಿವಾರ್ಯ ಎಂದರು.

ಕೊರೋನ ಮೊದಲ ಅಲೆಯು ಸರಕಾರಕ್ಕೆ ದೊಡ್ಡ ಪಾಠವಾಗಬೇಕಿತ್ತು. ಆದರೆ ಎರಡನೆ ಅಲೆ ಬಂದ ಬಳಿಕವೂ ಸರಕಾರ ಎಚ್ಚೆತ್ತುಕೊಂಡಿಲ್ಲ. ಮೂರನೆ ಅಲೆಯ ಭೀತಿಯಲ್ಲಿ ಜನರಿದ್ದರೂ ಕೂಡ ರಾಜ್ಯ ಸರಕಾರ ಆಂತರಿಕ ಕಚ್ಚಾಟದಲ್ಲಿ ಮುಳುಗಿದೆ. ಬೆಂಗಳೂರಿನ ಬಳಿಕ ಮಂಗಳೂರು ರಾಜ್ಯದಲ್ಲೇ ಕೋವಿಡ್ ಸೋಂಕಿನ ಪ್ರಮಾಣದಲ್ಲಿ ಎರಡನೆ ಸ್ಥಾನದಲ್ಲಿದೆ. ರಾಜ್ಯದಲ್ಲಿ ಮುಖ್ಯಮಂತ್ರಿಯ ಬದಲಾವಣೆಯಾಗಿದೆಯೇ ವಿನಃ ಆಡಳಿತ ಯಂತ್ರದಲ್ಲಿ ಯಾವುದೇ ಬದಲಾವಣೆ ಕಂಡು ಬಂದಿಲ್ಲ. ಕೋವಿಡ್‌ನಿಂದ ಜನರ ಸಾವು ಮತ್ತು ಸೋಂಕಿನ ಪ್ರಮಾಣದಲ್ಲಿ ಹೆಚ್ಚಳ ಕಂಡು ಬಂದಿದೆ. ಆದರೆ ಅದನ್ನು ನಿಯಂತ್ರಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ಇದರ ಹೊಣೆಯನ್ನು ರಾಜ್ಯ ಸರಕಾರ ಹೊರಬೇಕಾಗಿದೆ ಎಂದು ಹರೀಶ್ ಕುಮಾರ್ ನುಡಿದರು.

ಭ್ರಷ್ಟ ಸರಕಾರ: ಕೇಂದ್ರ ಮತ್ತು ರಾಜ್ಯದಲ್ಲಿ ಭ್ರಷ್ಟ ಬಿಜೆಪಿ ಸರಕಾರವಿದೆ. ಎಷ್ಟೇ ಆರೋಪ ಬಂದರೂ ಕೂಡ ತನಿಖೆಗೊಳಗಾಗುವ ನೈತಿಕ ಧೈರ್ಯವು ಈ ಸರಕಾರಕ್ಕಿಲ್ಲ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪರ ಪುತ್ರ ವಿಜಯೇಂದ್ರ 20 ಸಾವಿರ ಕೋ.ರೂ. ಭ್ರಷ್ಟಾಚಾರ ಎಸಗಿದ್ದಾರೆ ಎಂದು ಸ್ವತಃ ಬಿಜೆಪಿಗರೇ ಆರೋಪಿಸುತ್ತಿದ್ದಾರೆ. ಆದಾಗ್ಯೂ ಬಿಜೆಪಿ ಹೈಕಮಾಂಡ್ ಸುಮ್ಮನಿವೆ ಎಂದು ಹರೀಶ್ ಕುಮಾರ್ ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿಸೋಜ, ಪಕ್ಷದ ಮುಖಂಡರಾದ ಸದಾಶಿವ ಉಳ್ಳಾಲ್, ಎಂ.ಎಸ್.ಮುಹಮ್ಮದ್, ಶಶಿಧರ ಹೆಗ್ಡೆ, ಶಾಲೆಟ್ ಪಿಂಟೋ, ಸದಾಶಿವ ಶೆಟ್ಟಿ, ಮಮತಾ ಗಟ್ಟಿ, ಲಾರೆನ್ಸ್ ಡಿಸೋಜ, ಜೆ. ಅಬ್ದುಲ್ ಸಲೀಂ, ರಾಜಶೇಖರ ಕೋಟ್ಯಾನ್, ಶುಭೋದಯ ಆಳ್ವ, ಜೋಕಿಂ ಡಿಸೋಜ, ನಝೀರ್ ಬಜಾಲ್, ಗಣೇಶ್ ಪೂಜಾರಿ, ಶೋಭಾ ಕೇಶವ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News