​ಉಡುಪಿ : 162 ಮಂದಿ ಕೋವಿಡ್‌ಗೆ ಪಾಸಿಟಿವ್, ಓರ್ವ ಬಲಿ

Update: 2021-08-01 14:03 GMT

ಉಡುಪಿ, ಆ.1: ಜಿಲ್ಲೆಯಲ್ಲಿ ರವಿವಾರ ಒಟ್ಟು 162 ಮಂದಿ ಕೋವಿಡ್‌ಗೆ ಪಾಸಿಟಿವ್ ಬಂದಿದ್ದಾರೆ. ದಿನದಲ್ಲಿ 56ರ ಹರೆಯದ ಪುರುಷರೊಬ್ಬರು ಮೃತಪಟ್ಟರೆ, 66 ಮಂದಿ ಚಿಕಿತ್ಸೆಯ ಬಳಿಕ ಸೋಂಕಿನಿಂದ ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲೀಗ 1200 ಮಂದಿ ಸೋಂಕಿಗೆ ಸಕ್ರಿಯರಿದ್ದಾರೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

ಉಡುಪಿಯ 56 ವರ್ಷ ಪ್ರಾಯದ ಪುರುಷರೊಬ್ಬರು ಶನಿವಾರ ಸರಕಾರಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ನ್ಯುಮೋನಿಯಾ, ತೀವ್ರ ಉಸಿರಾಟ ತೊಂದರೆ ಹಾಗೂ ಕೋವಿಡ್ ಗುಣಲಕ್ಷಣದೊಂದಿಗೆ ಜು.30ರಂದು ಆಸ್ಪತ್ರೆಗೆ ದಾಖಲಾದ ಇವರು ಮರುದಿನ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಕೋವಿಡ್ ಗೆ ಬಲಿಯಾದವರ ಸಂಖ್ಯೆ 417ಕ್ಕೇರಿದೆ.

ದಿನದಲ್ಲಿ ಕೊರೋನ ಪಾಸಿಟಿವ್ ದೃಢಪಟ್ಟ 162 ಮಂದಿಯಲ್ಲಿ 73 ಮಂದಿ ಪುರುಷರು ಹಾಗೂ 89 ಮಂದಿ ಮಹಿಳೆಯರು. ಇವರಲ್ಲಿ 86 ಮಂದಿ ಉಡುಪಿ ತಾಲೂಕು, 41 ಮಂದಿ ಕುಂದಾಪುರ ಹಾಗೂ 33 ಮಂದಿ ಕಾರ್ಕಳ ತಾಲೂಕಿ ನವರು. ಹೊರಜಿಲ್ಲೆಯ ಇಬ್ಬರೂ ಸೋಂಕಿಗೆ ಪಾಸಿಟಿವ್ ಬಂದಿದ್ದಾರೆ. ಇಂದು 15 ಮಂದಿಯನ್ನು ಕೋವಿಡ್ ಆಸ್ಪತ್ರೆ ಹಾಗೂ 147 ಮಂದಿಯನ್ನು ವುನೆಯಲ್ಲಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಶನಿವಾರ 66 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಜಿಲ್ಲೆಯಲ್ಲಿ ಕೊರೋನದಿಂದ ಚೇತರಿಸಿಕೊಂಡವರ ಸಂಖ್ಯೆ ಈಗ 68,321ಕ್ಕೇರಿದೆ. ನಿನ್ನೆ ಜಿಲ್ಲೆಯಲ್ಲಿ 2910 ಮಂದಿಗೆ ಕೋವಿಡ್ ಪರೀಕ್ಷೆ ನಡೆಸಲಾಗಿದ್ದು, ಜಿಲ್ಲೆಯಲ್ಲಿ ಈವರೆಗೆ ಸೋಂಕಿಗೆ ಪಾಸಿಟಿವ್ ಬಂದವರ ಸಂಖ್ಯೆ 69,938ಕ್ಕೇರಿದೆ ಎಂದು ಡಾ.ಉಡುಪ ತಿಳಿಸಿದರು. ಉಡುಪಿ ಜಿಲ್ಲೆಯಲ್ಲಿ ಈವರೆಗೆ ಒಟ್ಟು 7,85,780 ಮಂದಿಯನ್ನು ಕೋವಿಡ್ ಪರೀಕ್ಷೆಗೊಳಪಡಿಸಲಾಗಿದೆ.

ರವಿವಾರ ಜಿಲ್ಲೆ ಅಥವಾ ಹೊರಜಿಲ್ಲೆಯ ಯಾರಲ್ಲೂ ಬ್ಲ್ಯಾಕ್ ಫಂಗಸ್ ಸೋಂಕು ಪತ್ತೆಯಾಗಿಲ್ಲ. ಹೀಗಾಗಿ ಸದ್ಯ ಏಳು ಮಂದಿ ಮಣಿಪಾಲದ ಕೆಎಂಸಿ ಹಾಗೂ ಉಡುಪಿಯ ಆದರ್ಶ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತಿದ್ದಾರೆ.

40 ಮಂದಿಗೆ ಲಸಿಕೆ:  ಜಿಲ್ಲೆಯಲ್ಲಿ ರವಿವಾರ ಕೇವಲ 40 ಮಂದಿಗೆ ಕೋವಿಡ್ ಲಸಿಕೆಯನ್ನು ನೀಡಲಾಗಿದೆ. ಇವರಲ್ಲಿ 9 ಮಂದಿ ಮೊದಲ ಹಾಗೂ 31 ಮಂದಿ ಎರಡನೇ ಡೋಸ್ ಪಡೆದಿದ್ದಾರೆ. 18ರಿಂದ 44 ವರ್ಷದೊಳಗಿನ 9 ಮಂದಿ ಹಾಗೂ 45 ವರ್ಷ ಮೇಲಿನ 31 ಮಂದಿ ಇಂದು ಲಸಿಕೆ ಪಡೆದಿದ್ದಾರೆ ಎಂದು ಡಿಎಚ್‌ಓ ಡಾ.ನಾಗಭೂಷಣ ಉಡುಪ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News