ತಾಯಿ ಮಕ್ಕಳ ಆಸ್ಪತ್ರೆಯನ್ನು ಸರಕಾರವೇ ನಿರ್ವಹಿಸಲು ಆಗ್ರಹ

Update: 2021-08-01 14:12 GMT

ಉಡುಪಿ, ಆ.1: ಹಾಜಿ ಅಬ್ದುಲ್ಲಾ ತಾಯಿ ಮತ್ತು ಮಕ್ಕಳ ಆಸ್ಪತ್ರೆಯ ಖಾಸಗೀಕರಣ ಮತ್ತು ಅಸಮರ್ಥ ನಿರ್ವಹಣೆಯಿಂದಾಗಿ ಇದೀಗ ರೋಗಿ ಗಳು ಚಿಕಿತ್ಸೆ ಸಿಗದೆ ಪರದಾಡುತ್ತಿದ್ದು ಸರಕಾರ ಕೂಡಲೇ ಮಧ್ಯೆ ಪ್ರವೇಶಿಸಿ ಬಿ.ಆರ್ ವೆಂಚರ್ಸ್‌ ನೊಂದಿಗಿನ ಒಡಂಬಡಿಕೆಯನ್ನು ರದ್ದು ಪಡಿಸಬೇಕು ಮತ್ತು  ಆಸ್ಪತ್ರೆ ಯನ್ನು ಸರಕಾರವೇ ನಿರ್ವಹಣೆ ಮಾಡಬೇಕೆಂದು ಉಡುಪಿಯ ಸಾಲಿಡಾರಿಟಿ ಯೂತ್ ಮೂವ್ಮೆಂಟ್ ಆಗ್ರಹಿಸಿದೆ.

ಕಳೆದ ಮೂರು ನಾಲ್ಕು ತಿಂಗಳಿನಿಂದ ವೈದ್ಯರು ಸೇರಿದಂತೆ ಆಸ್ಪತ್ರೆಯ ಸುಮಾರು 200 ಸಿಬ್ಬಂದಿಗೆ ವೇತನ ಸಿಕ್ಕಿಲ್ಲ. ಲಾಂಡ್ರಿಯವರಿಗೆ 10 ರಿಂದ 15 ಲಕ್ಷ ರೂಪಾಯಿ ಆಸ್ಪತ್ರೆಯ ವತಿಯಿಂದ ಪಾವತಿಸಲು ಬಾಕಿ ಇದೆ. ಆಸ್ಪತ್ರೆಯ ಯಂತ್ರೋಪಕರಣಗಳು ನಿರ್ವಹಣೆ ಇಲ್ಲದೆ ಕೆಟ್ಟು ಹೋಗಿವೆ. ಸರಿಯಾದ ಸೌಲಭ್ಯವಿಲ್ಲದೆ ಚಿಕಿತ್ಸೆಗೆ ಬಂದ ಬಾಣಂತಿಯರನ್ನು ವಾಪಸು ಕಳುಹಿಸಿದ ಆರೋಪ ಕೂಡ ಕೇಳಿ ಬರುತ್ತಿದೆ.

ಶಾಸಕ ರಘುಪತಿ ಭಟ್ ಬಿ.ಆರ್.ಶೆಟ್ಟಿಗೆ ಆಸ್ಪತ್ರೆ ವಹಿಸಿಕೊಡಬಾರದೆಂದು ಹೋರಾಟ ಮಾಡಿದವರಲ್ಲಿ ಒಬ್ಬರು. ಆದರೆ ಇವರು ಇಲ್ಲಿನ ಸಮಸ್ಯೆಗಳನ್ನು ನೋಡಿಯೂ ನೋಡದಂತೆ ವರ್ತಿಸುತ್ತಿದ್ದಾರೆ. ಕೂಡಲೇ ಈ ಕುರಿತು ಸರಕಾರ ಕ್ರಮ ತೆಗೆದುಕೊಂಡು ಸಿಬ್ಬಂದಿಗಳ ಎಲ್ಲ ಸಂಬಳವನ್ನು ಪಾವತಿಸಬೇಕು. ಬಿ.ಆರ್.ವೆಂಚಸ್‌ ನೊಂದಿಗೆ ಮಾಡಿಕೊಂಡಿರುವ ಒಡಂಬಡಿಕೆಯನ್ನು ರದ್ದು ಮಾಡಬೇಕು. ಕೆಪಿಎಂಇ ಕಾಯಿದೆಯನ್ನು ರದ್ದುಗೊಳಿಸಿ ಸಂಪೂರ್ಣವಾಗಿ ಹಾಜಿ ಅಬ್ದುಲ್ಲಾ ಆಸ್ಪತ್ರೆಯನ್ನು ಸರಕಾರ ಸುಪರ್ದಿಗೆ ಪಡೆದು ಮುನ್ನಡೆಸಬೇಕು ಎಂದು ಸಂಘಟನಾ ಕಾರ್ಯದರ್ಶಿ ಮುಹಮ್ಮದ್ ಇಫ್ತಿಕಾರ್ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News