ಅಭಿವೃದ್ಧಿ ಕಾಣದ ಪ್ರಾಕೃತಿಕ ಸೊಬಗಿನ ವೀಕ್ಷಣೆ ತಾಣ ಮೆಟ್ಕಲ್‌ಗುಡ್ಡದ ಸಂಪರ್ಕ ರಸ್ತೆ!

Update: 2021-08-01 14:24 GMT

ಕುಂದಾಪುರ, ಆ.1: ಪುರಾಣ ಪ್ರಸಿದ್ಧ ಶ್ರೀಮಹಾಗಣಪತಿ ದೇವಸ್ಥಾನ ಹಾಗೂ ಪಶ್ಚಿಮ ಘಟ್ಟದ ಸಹಜ ಸುಂದರವಾದ ಪ್ರಾಕೃತಿಕ ಸೊಬಗಿನ ವೀಕ್ಷಣೆಯ ತಾಣ ವಾದ ಮೆಟ್ಕಲ್‌ಗುಡ್ಡವನ್ನು ಸಂಪರ್ಕಿಸುವ ಮಣ್ಣಿನ ರಸ್ತೆ ದುರ್ಗಮವಾಗಿದ್ದು, ಈ ರಸ್ತೆಯನ್ನು ಅಭಿವೃದ್ಧಿ ಮಾಡುವಂತೆ ಭಕ್ತರು ಹಾಗೂ ಪ್ರವಾಸಿಗರಿಂದ ಒತ್ತಾಯಗಳು ಕೇಳಿ ಬರುತ್ತಿವೆ.

ಸಿದ್ಧಾಪುರ ಹೊಸಂಗಡಿಯಿಂದ ನಾಲ್ಕು ಕಿ.ಮೀ. ದೂರದಲ್ಲಿರುವ ಮೆಟ್ಕಲ್ ಗುಡ್ಡ ಸುಮಾರು ಎರಡು ಸಾವಿರ ಅಡಿಗೂ ಎತ್ತರದಲ್ಲಿದೆ. ಈ ಬೆಟ್ಟಕ್ಕೆ ಇದೀಗ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಆಗಮಿಸುತ್ತಿದ್ದಾರೆ. ಹೊಸಂಗಡಿಯಿಂದ ಬೆಟ್ಟದ ಬುಡದವರೆಗಿನ ಆರಂಭದ 2 ಕಿ.ಮೀ. ರಸ್ತೆ ಅಭಿವೃದ್ಧಿ ಯಾಗಿದ್ದು, ಉಳಿದ ಸುಮಾರು ಎರಡು ಕಿ.ಮೀ. ಮಣ್ಣಿನ ರಸ್ತೆ ಸಂಪೂರ್ಣ ಹದಗೆಟ್ಟಿದೆ.

ಕೆಳಭಾಗದ ಸುಮಾರು 2 ಕಿ.ಮೀ. ದೂರದ ಏರು ಹಾದಿಯ ಮಣ್ಣಿನ ರಸ್ತೆಯಲ್ಲಿ ವಾಹನ ಸಂಚರಿಸುವುದು ಅಸಾಧ್ಯವಾಗಿದೆ. ಆದುದರಿಂದ ಪ್ರವಾಸಿ ಗರು ಬೆಟ್ಟದ ಕೆಳಗೆಯೇ ವಾಹನ ನಿಲ್ಲಿಸಿ ಏರಬೇಕಾಗಿದೆ. ಈ ರಸ್ತೆ ಬೃಹತ್ ಹೊಂಡ, ಕಲ್ಲುಗಳಿಂದ ತುಂಬಿದ್ದು, ನಡೆದಾಡಲು ಕೂಡ ಪ್ರಯಾಸ ಪಡ ಬೇಕಾಗಿದೆ.

ಮೆಟ್ಕಲ್‌ ಗುಡ್ಡವು ಶ್ರೀಮಹಾಗಣಪತಿ ದೇವರ ಸನ್ನಿಧಾನವಾಗಿದ್ದು, ಇಲ್ಲಿಗೆ ನಿತ್ಯ ಅಲ್ಲದಿದ್ದರೂ ವಿಶೇಷ ದಿನಗಳಲ್ಲಿ ಸಾಕಷ್ಟು ಮಂದಿ ಭಕ್ತರು ಆಗಮಿಸಿ, ಪೂಜೆ ಸಲ್ಲಿಸುತ್ತಾರೆ. ಈ ಗುಡ್ಡವು ಸುಮಾರು 2 ಸಾವಿರ ಅಡಿ ಎತ್ತರದಲ್ಲಿ ರುವುದರಿಂದ ಮೇಲೆ ನಿಂತು ಪಶ್ಚಿಮ ಘಟ್ಟದ ಪ್ರಾಕೃತಿಕ ಸೌಂದರ್ಯವನ್ನು ಕಣ್ತುಂಬಿಕೊಳ್ಳಬಹುದಾಗಿದೆ. ಕಣ್ಣು ಹಾಯಿಸಿದಷ್ಟು ಹಸಿರು ಬೆಟ್ಟ ಗುಡ್ಡಗಳೇ ತುಂಬಿಕೊಂಡಿವೆ. ಮಾತ್ರವಲ್ಲದೆ ಹಲವು ಜಲಧಾರೆಗಳ ಸೊಬಗು, ಗದ್ದೆ, ತೋಟ ಗಳ ವಿಹಂಗಮ ನೋಟವನ್ನು ಸವಿಯಬಹುದಾಗಿದೆ.

''ಹೊಸಂಗಡಿ ಗ್ರಾಪಂ ವ್ಯಾಪ್ತಿಯ ಮೆಟ್ಕಲ್‌ಗುಡ್ಡ ದೇವಸ್ಥಾನವನ್ನು ಸಂಪರ್ಕಿ ಸುವ ಮಣ್ಣಿನ ರಸ್ತೆ ಹದಗೆಟ್ಟಿರುವುದು ನಮ್ಮ ಗಮನದಲ್ಲಿ ಇದೆ. ಈ ರಸ್ತೆಯು ಮೀಸಲು ಅರಣ್ಯ ವ್ಯಾಪ್ತಿಯಲ್ಲಿ ಬರುವುದಿಂದ ಅಭಿವೃದ್ಧಿಗೆ ತೊಡಕಾಗಿದೆ. ಮುಂದಿನ ದಿನಗಳಲ್ಲಿ ಪಂಚಾಯತ್‌ನಿಂದ ಸಂಬಂಧಪಟ್ಟ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಅಭಿವೃದ್ಧಿ ಪ್ರಯತ್ನಿಸಲಾಗುವುದು''.

- ಶ್ವೇತಲತಾ, ಪಿಡಿಓ, ಹೊಸಂಗಡಿ ಗ್ರಾ.ಪಂ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News