ಕೊಂಕಣಿ ಅಕಾಡಮಿಯ ಗೌರವ ಪ್ರಶಸ್ತಿ ಪ್ರದಾನ

Update: 2021-08-01 14:28 GMT

ಮಂಗಳೂರು, ಆ. 1: ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡಮಿಯ 2020ನೆ ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕ ಬಹುಮಾನ ವಿತರಣಾ ಕಾರ್ಯಕ್ರಮವು ರವಿವಾರ ನಗರದ ಪುರಭವನದಲ್ಲಿ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಶಾಸಕ‌ ವೇದವ್ಯಾಸ ಕಾಮತ್ ಕೊಂಕಣಿ ಭವನ ನಿರ್ಮಾಣಕ್ಕಾಗಿ ನಗರದ ಉರ್ವದಲ್ಲಿ 37 ಸೆಂಟ್ಸ್ ಜಮೂನು‌  ಮಂಜೂರಾಗಿದೆ. ಒಂದು ವಾರದೊಳಗೆ ಅದರ ಆರ್‌ಟಿಸಿ ಲಭ್ಯವಾಗಲಿದೆ ಎಂದು ಹೇಳಿದರು.

ಕೊಂಕಣಿ ಭವನ ನಿರ್ಮಾಣಕ್ಕಾಗಿ ಈ ಹಿಂದೆ ಮಂಜೂರಾಗಿದ್ದ 30 ಸೆಂಟ್ಸ್ ಜಮೀನಿನ ಬಗ್ಗೆ ತಕರಾರು ಕೇಳಿ ಬಂದಿದ್ದು, ಹಾಗಾಗಿ ಅದರ ಸಮೀಪದಲ್ಲೇ ಇರುವ 37 ಸೆಂಟ್ಸ್ ಜಮೀನನ್ನು ಕೊಂಕಣಿ ಭವನಕ್ಕೆ ಮಂಜೂರು ಮಾಡಲಾಗಿದೆ. ಭವನ ನಿರ್ಮಾಣಕ್ಕಾಗಿ ಈಗಾಗಲೇ 3 ಕೋ.ರೂ. ಬಿಡುಗಡೆಯಾಗಿದೆ. ಶೀಘ್ರದಲ್ಲೇ ಕಟ್ಟಡ ನಿರ್ಮಾಣ ಕಾಮಗಾರಿಯನ್ನು ಆರಂಭಿಸಲಾಗುವುದು ಎಂದು ವೇದವ್ಯಾಸ ಕಾಮತ್ ಹೇಳಿದರು.

ವಿಧಾನ ಪರಿಷತ್ ಸದಸ್ಯ ಪ್ರತಾಪ ಸಿಂಹ ನಾಯಕ್, ಮೇಯರ್ ಪ್ರೇಮಾನಂದ ಶೆಟ್ಟಿ, ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲ್‌ ಸಾರ್, ಬ್ಯಾರಿ ಸಾಹಿತ್ಯ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ್, ಕೊಂಕಣಿ ಚಲನ ಚಿತ್ರ ನಟ, ನಿರ್ಮಾಪಕ ಹಾಗೂ ಸಾಹಿತಿ ಹೆನ್ರಿ ಡಿಸಿಲ್ವಾ ಮಾತನಾಡಿದರು. ಕೊಂಕಣಿ ಅಕಾಡಮಿಯ ಅಧ್ಯಕ್ಷ ಡಾ ಕೆ. ಜಗದೀಶ್ ಪೈ ಅಧ್ಯಕ್ಷತೆ ವಹಿಸಿದ್ದರು.

ಅಕಾಡಮಿಯ ಸದಸ್ಯ ಅರವಿಂದ ಜಿ. ಶೇಟ್ ಸ್ವಾಗತಿಸಿದರು. ರಿಜಿಸ್ಟ್ರಾರ್ ಮನೋಹರ್ ಕಾಮತ್ ವಂದಿಸಿದರು. ಸದಸ್ಯ ಕೆನ್ಯೂಟ್ ಜೀವನ್ ಪಿಂಟೊ ಕಾರ್ಯಕ್ರಮ ನಿರೂಪಿಸಿದರು.

ಅರುಣ್ ಸುಬ್ರಾವ್ ಉಭಯಕರ್ (ಸಾಹಿತ್ಯ), ಪುತ್ತೂರು ಪಾಂಡುರಂಗ ನಾಯಕ್ (ಕಲೆ), ಲಕ್ಷ್ಮಿ ಕೃಷ್ಣ ಸಿದ್ದಿ (ಜಾನಪದ) ಅವರಿಗೆ ಅಕಾಡಮಿಯ ಗೌರವ ಪ್ರಶಸ್ತಿಯನ್ನು ಹಾಗೂ ಪ್ರೇಮ್ ಮೊರಾಸ್ (ಕವನ-‘ಏಕ್‌ಮೂಟ್ ಪಾವ್ಳೊ’) ಮತ್ತು ಸ್ಟೀವನ್ ಕ್ವಾಡ್ರಸ್ ಪೆರ್ಮುದೆ (ಲೇಖನ-‘ಸುಗಂದು ಸ್ವಾಸ್’) ಅವರಿಗೆ ಪುಸ್ತಕ ಬಹುಮಾನ ವಿತರಿಸಲಾಯಿತು. ಮೋನಿಕಾ ಡೇಸಾ (ಸಣ್ಣಕತೆ-‘ನವಿದಿಶಾ’) ಅವರು ಅನುಪಸ್ಥಿತರಾಗಿದ್ದು ಅವರ ಸಹೋದರ ರಿಚಾರ್ಡ್ ಡೆಸಾ ಪುಸ್ತಕ ಬಹುಮಾನ ಸ್ವೀಕರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News