ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಪತ್ರಕರ್ತ ದಾನಿಶ್ ಸಿದ್ದೀಕಿ ಶರೀರ ವಿರೂಪಗೊಂಡಿತ್ತು: ಅಧಿಕಾರಿಗಳಿಂದ ಮಾಹಿತಿ

Update: 2021-08-01 15:35 GMT
photo : PTI

ಹೊಸದಿಲ್ಲಿ, ಆ.1: ಅಫ್ಘಾನಿಸ್ತಾನದಲ್ಲಿ ಕೊಲ್ಲಲ್ಪಟ್ಟ ಪುಲಿಟ್ಝರ್ ಪ್ರಶಸ್ತಿ ಪುರಸ್ಕೃತ ರೂಟರ್ಸ್ನ ಫೋಟೊ ಜರ್ನಲಿಸ್ಟ್,ಭಾರತೀಯ ಪ್ರಜೆ ದಾನಿಶ್ ಸಿದ್ದೀಕಿ ಅವರ ಶರೀರವು ತಾಲಿಬಾನಿಗಳ ವಶದಲ್ಲಿದ್ದಾಗ ತೀವ್ರವಾಗಿ ವಿರೂಪಗೊಂಡಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆಗಷ್ಟೇ ತಾಲಿಬಾನಿಗಳು ವಶಪಡಿಸಿಕೊಂಡಿದ್ದ ಸ್ಪಿನ್ ಬೋಲ್ಡಕ್ ಜಿಲ್ಲೆಗೆ ಜು.16ರಂದು ಬೆಳಿಗ್ಗೆ ಅಫಘಾನ್ ಕಮಾಂಡೋಗಳೊಂದಿಗೆ ತೆರಳಿದ್ದ ಸಂದರ್ಭ ಸಿದ್ದಿಕಿ ಕೊಲ್ಲಲ್ಪಟ್ಟಿದ್ದರು. ಅವರ ಶರೀರದಲ್ಲಿ ಹಲವಾರು ಗುಂಡಿನ ಗಾಯಗಳಿದ್ದರೂ ಅದು ವಿರೂಪಗೊಂಡಿರಲಿಲ್ಲ ಎನ್ನುವುದನ್ನು ಘಟನಾ ಸ್ಥಳದಲ್ಲಿಯ ಆರಂಭಿಕ ಚಿತ್ರಗಳು ತೋರಿಸಿದ್ದವು. 

ಆದರೆ ಸಂಜೆ ರೆಡ್ ಕ್ರಾಸ್ ಅಧಿಕಾರಿಗಳಿಗೆ ಹಸ್ತಾಂತರಿಸಲ್ಪಟ್ಟು ಕಂದಹಾರ್ ನ ಆಸ್ಪತ್ರೆಗೆ ಸಾಗಿಸಿದಾಗ ಅದು ತೀವ್ರವಾಗಿ ವಿರೂಪಗೊಂಡಿತ್ತು ಎಂದು ಅಲ್ಲಿದ್ದ ಇಬ್ಬರು ಭಾರತೀಯ ಅಧಿಕಾರಿಗಳು ಮತ್ತು ಇಬ್ಬರು ಅಫಘಾನ್ ಆರೋಗ್ಯ ಅಧಿಕಾರಿಗಳು ತಿಳಿಸಿದ್ದಾರೆ. ಸಿದ್ದಿಕಿ ಅವರ ಶರೀರದಲ್ಲಿ ಸುಮಾರು ಒಂದು ಡಝನ್ ಗುಂಡಿನ ಗಾಯಗಳಿದ್ದವು ಮತ್ತು ಮುಖ ಹಾಗೂ ಎದೆಯ ಮೇಲೆ ಟೈರ್ ಗುರುತುಗಳಿದ್ದವು ಎಂದು ಭಾರತೀಯ ಅಧಿಕಾರಿಯೋರ್ವರು ತಿಳಿಸಿದರು.

ಸಿದ್ದಿಕಿಯವರ ಮೃತಶರೀರವನ್ನು ಜು.16ರಂದು ರಾತ್ರಿ ಎಂಟು ಗಂಟೆಯ ಸುಮಾರಿಗೆ ಆಸ್ಪತ್ರೆಗೆ ತಂದಾಗ ಅವರ ಮುಖ ಗುರುತು ಹಿಡಿಯಲು ಸಾಧ್ಯವಿಲ್ಲದಷ್ಟು ವಿರೂಪಗೊಂಡಿತ್ತು ಮತ್ತು ಅವರ ಶರೀರಕ್ಕೆ ಏನು ಮಾಡಲಾಗಿತ್ತು ಎನ್ನುವುದನ್ನು ನಿರ್ಧರಿಸಲು ತನಗೆ ಸಾಧ್ಯವಾಗಿರಲಿಲ್ಲ ಎಂದು ಕಂದಹಾರ್ ನ ಆರೋಗ್ಯ ಅಧಿಕಾರಿಯೋರ್ವರು ತಿಳಿಸಿದ್ದಾರೆ. 

ಸಿದ್ಧಿಕಿ ಜೊತೆಯಲ್ಲಿ ತೆರಳಿದ್ಧ ಅಫಘಾನ್ ವಿಶೇಷ ಪಡೆಗಳು ಸ್ಪಿನ್ ಬೋಲ್ಡಕ್ ಅನ್ನು ಮರಳಿ ವಶಪಡಿಸಿಕೊಳ್ಳುವ ಪ್ರಯತ್ನದಲ್ಲಿದ್ದರಿಂದ ಅಲ್ಲಿ ಏನು ಸಂಭವಿಸಿತ್ತು ಎನ್ನುವುದರ ಬಗ್ಗೆ ವಿರೋಧಾಭಾಸದ ವರದಿಗಳಿವೆ.

ಸ್ಥಳೀಯ ಅಧಿಕಾರಿಗಳು ಮತ್ತು ತಾಲಿಬಾನ್ ಸದಸ್ಯರು ಹೇಳುವಂತೆ ಅಫ್ಘಾನಿಸ್ತಾನದ ಪಡೆಗಳ ಮೇಲೆ ಎಲ್ಲ ದಿಕ್ಕುಗಳಿಂದಲೂ ದಾಳಿ ನಡೆದಾಗ ಓರ್ವ ಅಫಘಾನ್ ಕಮಾಂಡರ್ ಮತ್ತು ಸಿದ್ದಿಕಿ ಕೊಲ್ಲಲ್ಪಟ್ಟಿದ್ದರು ಹಾಗೂ ಪಡೆಯು ವಾಪಸಾಗಿದ್ದು,ಅವರಿಬ್ಬರ ಶವಗಳು ಅಲ್ಲಿಯೇ ಬಿದ್ದುಕೊಂಡಿದ್ದವು.

ತಾಲಿಬಾನಿಗಳು ಸಿದ್ದಿಕಿಯವರನ್ನು ಜೀವಂತವಾಗಿ ಸೆರೆ ಹಿಡಿದಿರಬಹುದು ಮತ್ತು ನಂತರ ಅವರನ್ನು ಕೊಂದಿರಬಹುದು ಎಂದು ಕೆಲವು ವರದಿಗಳು ಹೇಳಿವೆಯಾದರೂ ಇವು ದೃಢಪಟ್ಟಿಲ್ಲ. ಆದರೆ ಸಿದ್ದಿಕಿಯವರ ಶರೀರದಲ್ಲಿದ್ದ ಕೆಲವು ಗಾಯಗಳು ಸಮೀಪದಿಂದ ಗುಂಡು ಹಾರಿಸಿದ್ದರಿಂದ ಉಂಟಾದ ಗಾಯಗಳಂತೆ ಕಂಡು ಬಂದಿದ್ದವು ಎಂದು ಭಾರತೀಯ ಅಧಿಕಾರಿಯೋರ್ವರು ಹೇಳಿದ್ದಾರೆ.

ಆರೋಪವನ್ನು ನಿರಾಕರಿಸಿರುವ ತಾಲಿಬಾನ್ ವಕ್ತಾರ ಝಬಿಹುಲ್ಲಾ ಮುಜಾಹಿದ್, "ನಾವು ಮೃತರ ಶರೀರಗಳನ್ನು ಗೌರವದಿಂದ ನೋಡಿಕೊಳ್ಳುತ್ತೇವೆ ಮತ್ತು ಸ್ಥಳೀಯ ಹಿರಿಯರಿಗೆ ಅಥವಾ ರೆಡ್ ಕ್ರಾಸ್‌ ಗೆ ಅವುಗಳನ್ನು ಹಸ್ತಾಂತರಿಸುತ್ತೇವೆ" ಎಂದು ತಿಳಿಸಿದ್ದಾರೆ. ಆದರೆ ಆಗ ಆ ಪ್ರದೇಶವು ತಾಲಿಬಾನಿಗಳ ನಿಯಂತ್ರಣದಲ್ಲಿತ್ತು ಮತ್ತು ತಾಲಿಬಾನಿ ಹೋರಾಟಗಾರರಂತೆ ಕಂಡು ಬರುತ್ತಿರುವ ಕೆಲವರು ಆಗ ಇನ್ನೂ ಸುಸ್ಥಿತಿಯಲ್ಲಿದ್ದ ಸಿದ್ದಿಕಿಯವರ ಮೃತಶರೀರದ ಸುತ್ತ ನಿಂತುಕೊಂಡಿದ್ದನ್ನು ಕೆಲವು ಚಿತ್ರಗಳು ತೋರಿಸಿವೆ.
ಶಾಂತಿ ಮಾತುಕತೆಗಳು ಸ್ಥಗಿತಗೊಂಡು ಅಫಘಾನ್ ಪಡೆಗಳು ಮತ್ತು ತಾಲಿಬಾನಿಗಳ ನಡುವಿನ ಕಾಳಗ ತೀವ್ರಗೊಂಡಿರುವ ನಡುವೆಯೇ ಸಿದ್ದಿಕಿಯವರ ಶವ ವಿರೂಪಗೊಂಡಿತ್ತು ಎನ್ನುವುದು ಬಹಿರಂಗಗೊಂಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News