ಕಾರ್ಮಿಕ-ರೈತ ಸಂಘಟನೆಗಳಿಂದ 'ಕಾರ್ಪೊರೆಟ್ ಕಂಪೆನಿಗಳೇ ಭಾರತ ಬಿಟ್ಟು ತೊಲಗಿ' ಜಾಥಾ

Update: 2021-08-01 14:34 GMT

ಮಂಗಳೂರು, ಆ.1: ಬೆಲೆ ಏರಿಕೆ, ಕಾರ್ಮಿಕ ಹಕ್ಕು ದುರ್ಬಲಗೊಳಿಸುವ ಕಾರ್ಮಿಕ ಹಕ್ಕು ತಿದ್ದುಪಡಿ, ರೈತರ ಹಕ್ಕು ಕಡಿತಗೊಳಿಸಿ ಕೃಷಿ ಭೂಮಿ ಯನ್ನು ಕಾರ್ಪೊರೆಟ್ ಕಂಪೆನಿಗಳಿಗೆ ಮಾರಾಟ ಮಾಡಲು ಹೊರಟ ಕೇಂದ್ರ ಸರಕಾರದ ನೀತಿಗಳ ವಿರುದ್ಧ ರಾಜ್ಯ ಪ್ರಾಂತ ರೈತ ಸಂಘ, ಸೆಂಟ್ರಲ್ ಟ್ರೇಡ್ ಯೂನಿಯನ್ ಆಫ್ ಇಂಡಿಯಾ ಮತ್ತು ಸಿಐಟಿಯು ದೇಶವ್ಯಾಪಿ ಕೈಗೊಂಡಿರುವ ಪ್ರತಿಭಟನಾರ್ಥವಾಗಿ ವಾಮಂಜೂರಿನ ತಿರುವೈಲಿನಲ್ಲಿ ಜನಾಂದೋಲನ ಪ್ರಯುಕ್ತ ಪ್ರಚಾರ ಜಾಥಾ ನಡೆಯಿತು.

ಹಿರಿಯ ಕಾರ್ಮಿಕ ಮುಖಂಡ ಗಂಗಯ್ಯ ಅಮೀನ್ ನೇತೃತ್ವದಲ್ಲಿ ನಡೆದ ಜಾಥಾದಲ್ಲಿ ಪಾಲ್ಗೊಂಡ ಕಾರ್ಮಿಕರು ಮತ್ತು ರೈತರು ತಿರುವೈಲಿನಿಂದ ಕೆತ್ತಿಕಲ್ ಮೂಲಕ ಉಳಾಯಿಬೆಟ್ಟು-ತಾರಿಗುಡ್ಡೆ-ಬೊಂಡಂತಿಲ ಮಾರ್ಗವಾಗಿ ಸುಮಾರು 11 ಕಿ.ಮೀ. ಜಾಥಾ ನಡೆಸಿದರು.

ಜಾಥಾದಲ್ಲಿ ಕಾರ್ಮಿಕ ಮುಖಂಡರಾದ ಶೇಖರ ಗಂಪ, ದೊಂಬಯ್ಯ ಗಂಪ, ಭವಾನಿ, ಪುಷ್ಪಾ, ಬಾಬು, ಅಣೆಬದಿ ಮುಂಡಪ್ಪ ಕೆ., ಮನೋಜ್ ವಾಮಂಜೂರು, ರೈತ ಮುಖಂಡರಾದ ಬಾಬು ಸಾಲ್ಯಾನ್, ದಿನೇಶ್ ಬೊಂಡಂತಿಲ, ಭೋಜ ದೇವಸ, ಲಿಂಗಪ್ಪ ಸಾಲ್ಯಾನ್, ವೆಂಕಪ್ಪ ಪೂಜಾರಿ ಮತ್ತಿತರರಿದ್ದರು.

ಕುಪ್ಪೆಪದವು ಜಾಥಾ: ಕುಪ್ಪೆಪದವಿನಲ್ಲಿ ನಡೆದ ಪ್ರಚಾರ ಜಾಥಾವನ್ನು ರೈತ ಸಂಘದ ಗುರುಪುರ ವಲಯ ಕಾರ್ಯದರ್ಶಿ ಸದಾಶಿವ ದಾಸ್ ಉದ್ಘಾಟಿಸಿ ಮಾತನಾಡಿ, ರೈತ ವಿರೋಧಿ ಕೃಷಿ ಮಸೂದೆ ಹಿಂಪಡೆಯಬೇಕು. ಕಾರ್ಮಿಕ ಕಾಯ್ದೆಗಳಿಗೆ ತಂದಿರುವ ತಿದ್ದುಪಡಿ ಕೈಬಿಡಬೇಕು. ಪೆಟ್ರೋಲ್, ಡೀಸೆಲ್ ಮತ್ತು ಅಗತ್ಯ ವಸ್ತುಗಳ ಬೆಲೆ ಏರಿಕೆಗೆ ಕಡಿವಾಣ ಹೇರಬೇಕು. ವಿದ್ಯುತ್ ಕಾಯ್ದೆ ತಿದ್ದುಪಡಿ ಹಿಂಪಡೆಯಬೇಕೆಂದು ಆಗ್ರಹಿಸಿದರು.

ಜಾಥಾದಲ್ಲಿ ಕಾರ್ಮಿಕ ಮುಖಂಡರಾದ ಹಸನಬ್ಬ, ವಾರಿಜಾ, ಗಂಗಾಧರ ಪೂಜಾರಿ, ಸುಂದರ ನಾಯ್ಕ, ಲೋಕೇಶ್ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News