ಆ. 2ರಿಂದ ಮಂಗಳೂರು ವಿವಿ ಪರೀಕ್ಷೆ: ಗಡಿಭಾಗದ ಚೆಕ್‌ ಪೋಸ್ಟ್‌ನಲ್ಲಿ ಕಟ್ಟುನಿಟ್ಟಿನ ತಪಾಸಣೆ

Update: 2021-08-01 15:09 GMT

ಮಂಗಳೂರು, ಆ.1: ಕೇರಳದ ಕಾಸರಗೋಡು ಮತ್ತು ದ.ಕ. ಜಿಲ್ಲೆಯ ನಡುವಿನ ಬಸ್ ಸಂಚಾರವನ್ನು ವಾರದವರೆಗೆ ದ.ಕ. ಜಿಲ್ಲಾಡಳಿತ ನಿರ್ಬಂಧಿಸಿದೆ. ಈ ನಡುವೆ ಮಂಗಳೂರು ವಿಶ್ವವಿದ್ಯಾನಿಲಯದ ನಿಗದಿಯಂತೆ ಆ.2ರಿಂದ ಪದವಿ ಪರೀಕ್ಷೆಗಳು ನಡೆಯಲಿವೆ. ಸಾರಿಗೆ ಸಮಸ್ಯೆಯಿಂದಾಗಿ ಪರೀಕ್ಷೆಗೆ ಹಾಜರಾಗದ ಕೇರಳದ ವಿದ್ಯಾರ್ಥಿಗಳಿಗೆ ವಿಶೇಷ ಪರೀಕ್ಷೆ ನಡೆಸಲು ಮಂಗಳೂರು ವಿಶ್ವವಿದ್ಯಾಲಯ ನಿರ್ಧರಿಸಿದೆ.

ವಿಶ್ವವಿದ್ಯಾಲಯದ ಬಾಕಿಯುಳಿದ ಪದವಿ ಪರೀಕ್ಷೆಗಳು ಇದೇ ಆ.2ರಿಂದ ಪ್ರಸಕ್ತ ವರ್ಷದ 1, 3 ಮತ್ತು 5ನೇ ಪದವಿ ಸೆಮಿಸ್ಟರ್ ಪರೀಕ್ಷೆ ನಡೆಯುತ್ತಿವೆ. ಪರೀಕ್ಷೆ ಮುಂದೂಡದೇ ಇರಲು ವಿವಿ ತೀರ್ಮಾನಿಸಿದೆ. ಕೇರಳ ವಿದ್ಯಾರ್ಥಿಗಳು ಈಗಾಗಲೇ ಜಿಲ್ಲೆಗೆ ಆಗಮಿಸಿ ಹಾಸ್ಟೆಲ್, ರೂಮ್, ಪಿಜಿಗಳಲ್ಲಿ ಓದುತ್ತಿದ್ದಾರೆ. ಗಡಿಭಾಗದಿಂದ ನಿತ್ಯ ಕಾಲೇಜಿಗೆ ಆಗಮಿಸುವವರು ಬೆರಳೆಣಿಕೆ ವಿದ್ಯಾರ್ಥಿಗಳಿಗೆ ಮಾತ್ರ ಈಗ ಪರೀಕ್ಷೆಗೆ ಹಾಜರಾಗಲು ತೊಂದರೆಯಾಗಲಿದೆ. ಅಂತಹವರಿಗೆ ವಿಶೇಷ ಪರೀಕ್ಷೆ ನಡೆಸಲಾಗುವುದಾಗಿ ಎಂದು ವಿವಿ ಸ್ಪಷ್ಟಪಡಿಸಿದೆ.

ಗಡಿ ಪ್ರದೇಶದ ವಿದ್ಯಾರ್ಥಿಗಳಿಗೆ ಪರೀಕ್ಷೆಗೆ ಹಾಜರಾಗಲು ಅನಾನುಕೂಲವಾದರೆ ಅಂತಹವರಿಗಾಗಿ ವಿಶೇಷ ಪರೀಕ್ಷೆ ನಡೆಸಲಾಗುವುದು. ಅಲ್ಲದೆ, ಕೋವಿಡ್ ಸೋಂಕಿಗೆ ಒಳಗಾಗಿ ಪರೀಕ್ಷೆ ಬರೆಯಲು ಅಸಾಧ್ಯವಾದರೆ ಅಂತಹ ವಿದ್ಯಾರ್ಥಿಗಳು ವೈದ್ಯಕೀಯ ದೃಢಪತ್ರ ಜೊತೆಗೆ ಪ್ರಾಂಶುಪಾಲರ ಪತ್ರದೊಂದಿಗೆ ವಿವಿಗೆ ಸಲ್ಲಿಸಬೇಕಾಗುತ್ತದೆ ಎಂದು ಕುಲಪತಿ ಪಿ.ಎಸ್. ಯಡಪಡಿತ್ತಾಯ ತಿಳಿಸಿದ್ದಾರೆ.

ಪರೀಕ್ಷೆಗೆ ಅವಕಾಶ ಕೋರಿ ಮನವಿ: ಇದೇ ವೇಳೆ ವಿವಿ ಪರೀಕ್ಷೆಗೆ ಹಾಜರಾಗಲು ಕೇರಳ ವಿದ್ಯಾರ್ಥಿಗಳಿಗೆ ಗಡಿ ಪ್ರದೇಶದಲ್ಲಿ ಅವಕಾಶ ನೀಡುವಂತೆ ಕೋರಿ ಕಾಸರಗೋಡು ಬಿಜೆಪಿ ಅಧ್ಯಕ್ಷ ನ್ಯಾಯವಾದಿ ಶ್ರೀಕಾಂತ್ ಅವರು ರವಿವಾರ ಕರ್ನಾಟಕ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.

ಗಡಿಯಲ್ಲಿ ಕಟ್ಟುನಿಟ್ಟಿನ ತಪಾಸಣೆ: ಕೇರಳದಲ್ಲಿ ಕೋವಿಡ್ ಪ್ರಕರಣಗಳಲ್ಲಿ ಏರಿಕೆಯಾಗಿದೆ. ಕಾಸರಗೋಡಿನಿಂದ ದ.ಕ. ಜಿಲ್ಲೆಯ ಪ್ರವೇಶಕ್ಕೆ ಕೋವಿಡ್ ನೆಗೆಟಿವ್ ವರದಿಯನ್ನು ರಾಜ್ಯ ಸರಕಾರ ಕಡ್ಡಾಯಗೊಳಿಸಿದೆ. ಇದರ ಬೆನ್ನಲ್ಲೇ ರವಿವಾರ ದ.ಕ. ಪ್ರವೇಶಿಸುವ ಎಲ್ಲ 13 ಗಡಿ ಪ್ರದೇಶಗಳಲ್ಲಿ ಕಟ್ಟುನಿಟ್ಟು ತಪಾಸಣೆ ಕೈಗೊಳ್ಳಲಾಗಿದೆ. ಮಂಗಳೂರು-ಕಾಸರಗೋಡು ನಡುವೆ ಒಂದು ವಾರದ ಮಟ್ಟಿಗೆ ಎಲ್ಲ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News