ಮಂಜೇಶ್ವರ : ಕಾವಲುಗಾರನನ್ನು ಕಟ್ಟಿ ಹಾಕಿ ಜುವೆಲ್ಲರಿಯಿಂದ ನಗ, ನಗದು ದರೋಡೆ ಪ್ರಕರಣ; ಪ್ರಮುಖ ಆರೋಪಿ ಸೆರೆ

Update: 2021-08-01 16:53 GMT
ಸತ್ಯೇಶ್

ಕಾಸರಗೋಡು :  ಮಂಜೇಶ್ವರ ಹೊಸಂಗಡಿಯ ರಾಜಧಾನಿ ಜ್ಯುವೆಲ್ಲರಿಯಲ್ಲಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿಯನ್ನು ಬಂಧಿಸಿರುವುದಾಗಿ ತನಿಖಾ ತಂಡ ತಿಳಿಸಿದೆ.

ತೃಶ್ಶೂರು ಕೊಡಂಗಲ್ಲೂರಿನ  ಸತ್ಯೇಶ್  ಕೆ.ಪಿ  ಯಾನೆ ಕಿರಣ್ (35) ಬಂಧಿತ ಆರೋಪಿ ಎಂದು ಪೊಲೀಸರು ತಿಳಿಸಿದ್ದಾರೆ.

ಈತನ ವಿರುದ್ಧ ಕೇರಳ, ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಹಲವು ಪ್ರಕರಣಗಳು ದಾಖಲಾಗಿವೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಜುಲೈ 26 ರಂದು ಮುಂಜಾನೆ ದರೋಡೆ ನಡೆದಿತ್ತು. ಏಳು ಮಂದಿಯ ತಂಡವು ಕಾವಲುಗಾರ ಅಬ್ದುಲ್ಲ ಎಂಬವರನ್ನು ಥಳಿಸಿ ಬಳಿಕ ಕಟ್ಟಿ ಹಾಕಿ ಹದಿನೈದು ಕೆಜಿ  ಬೆಳ್ಳಿಯ ಆಭರಣ,  ನಾಲ್ಕೂವರೆ ಲಕ್ಷ ರೂ. ನಗದು ದರೋಡೆ ಮಾಡಿತ್ತು.  ದರೋಡೆಗೆ ಬಂದಿದ್ದ ಇನ್ನೋವಾ ಕಾರು  ಉಳ್ಳಾಲ ಠಾಣಾ ವ್ಯಾಪ್ತಿಯಲ್ಲಿ ಪತ್ತೆಯಾಗಿತ್ತು. ಈ ಕಾರಿನಲ್ಲಿ ಏಳು  ಕಿಲೋ ಬೆಳ್ಳಿ ಆಭರಣ  ಹಾಗೂ ಎರಡು ಲಕ್ಷ ರೂ. ಪತ್ತೆಯಾಗಿತ್ತು . ಉಳಿದ ಆಭರಣ ಹಾಗೂ ನಗದು ಸಹಿತ ದರೋಡೆಕೋರರು ಇನ್ನೊಂದು ಕಾರಿನಲ್ಲಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.

ಕಾಸರಗೋಡು ಡಿ ವೈ ಎಸ್ಪಿ ಬಾಲಕೃಷ್ಣನ್ ನಾಯರ್ ನೇತೃತ್ವದಲ್ಲಿ  ವಿಶೇಷ ತಂಡ ತನಿಖೆ ನಡೆಸಿದ್ದು ,  ಪ್ರಮುಖ ಆರೋಪಿಯನ್ನು ಬಂಧಿಸುವಲ್ಲಿ  ಯಶಸ್ವಿಯಾಗಿದ್ದು , ಉಳಿದ ಆರೋಪಿಗಳ ಬಗ್ಗೆ ಸ್ಪಷ್ಟ ಮಾಹಿತಿ ಲಭಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News