ಮಂಗಳೂರು: ರೈತ ಕಾರ್ಮಿಕರ ಹೋರಾಟದ ಪ್ರಚಾರಾಂದೋಲನದ ಪ್ರಯುಕ್ತ ಪಾದಯಾತ್ರೆ
ಮಂಗಳೂರು, ಆ.2: ಕ್ವಿಟ್ ಇಂಡಿಯಾ ಚಳುವಳಿಯ ಸವಿನೆನಪಿನಲ್ಲಿ ರೈತ ಕಾರ್ಮಿಕರ ಸಖ್ಯತೆಯಲ್ಲಿ ಬೃಹತ್ ಹೋರಾಟವು ಆ.9ರಂದು ದೇಶಾದ್ಯಂತ ನಡೆಯಲಿದ್ದು, ಅದರ ಪ್ರಚಾರಾಂದೋಲನದ ಅಂಗವಾಗಿ ನಗರದಲ್ಲಿಂದು ಸಿಐಟಿಯು ನೇತೃತ್ವದಲ್ಲಿ ಪಾದಯಾತ್ರೆ ಆಯೋಜಿಸಲಾಗಿತ್ತು.
ಪಾದಯಾತ್ರೆಯನ್ನು ಉದ್ಘಾಟಿಸಿ ಮಾತನಾಡಿದ ಸಿಐಟಿಯು ದ.ಕ. ಜಿಲ್ಲಾಧ್ಯಕ್ಷ ಜೆ.ಬಾಲಕೃಷ್ಣ ಶೆಟ್ಟಿ, ದೇಶವನ್ನಾಳುವ ನರೇಂದ್ರ ಮೋದಿ ಸರಕಾರವು ಪ್ರತೀ ಹೆಜ್ಜೆಯಲ್ಲಿಯೂ ರೈತ ಕಾರ್ಮಿಕ ವಿರೋಧಿ ನೀತಿಗಳನ್ನು ಜಾರಿಗೊಳಿಸುವ ಮೂಲಕ ದೇಶದ ಆರ್ಥಿಕತೆಯನ್ನು ಸರ್ವನಾಶಗೊಳಿಸಿದೆ ಎಂದು ಆರೋಪಿಸಿದರು.
ಜನತೆಯ ಹಿತ ಕಾಪಾಡುವ ಬದಲು ಕಾರ್ಪೊರೇಟ್ ಕಂಪೆನಿಗಳ ಹಿತಾಸಕ್ತಿಗಳನ್ನು ಕಾಪಾಡುತ್ತಿದೆ. ಆ ಮೂಲಕ ದೇಶದ ಅಮೂಲ್ಯ ಸಂಪತ್ತುಗಳನ್ನು ಕಾರ್ಪೊರೇಟ್ ಕಂಪೆನಿಗಳಿಗೆ ಧಾರೆ ಎರೆದು ಕೊಡುತ್ತಿದೆ. ರೈತ ವಿರೋಧಿ ಮಸೂದೆಗಳನ್ನು ಜಾರಿಗೊಳಿಸಲು ಹೊರಟ ಕೇಂದ್ರ ಸರಕಾರವು ದೇಶದ ಕೃಷಿ ರಂಗವನ್ನೇ ಬುಡಮೇಲುಗೊಳಿಸುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸಿಐಟಿಯು ದ.ಕ. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸುನೀಲ್ ಕುಮಾರ್ ಬಜಾಲ್ ಮಾತನಾಡಿ, ಅಂದು ಈಸ್ಟ್ ಇಂಡಿಯಾ ಕಂಪೆನಿಯ ಮೂಲಕ ದೇಶದ ಸಂಪತ್ತನ್ನು ದೋಚಿದ ಬ್ರಿಟಿಶರ ವಿರುದ್ಧ ದೇಶದ ಜನತೆ ಸಮರ ಧೀರ ಹೋರಾಟ ನಡೆಸಿದಂತೆ, ಇಂದು ನಮ್ಮ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುತ್ತಿರುವ ನೂರಾರು ಕಾರ್ಪೊರೇಟ್ ಕಂಪೆನಿಗಳ ವಿರುದ್ಧ ದೇಶದ ರೈತ ಕಾರ್ಮಿಕರು ಒಂದಾಗಿ ಪ್ರಬಲ ಚಳವಳಿ ರೂಪಿಸಬೇಕಾಗಿದೆ ಎಂದರು.
ಪಾದಯಾತ್ರೆಯಲ್ಲಿ ಸಿಐಟಿಯು ಜಿಲ್ಲಾ ಮುಖಂಡರಾದ ಜಯಂತಿ ಶೆಟ್ಟಿ, ಭಾರತಿ ಬೋಳಾರ, ಜಯಲಕ್ಷ್ಮೀ, ಸಂತೋಷ್ ಆರ್.ಎಸ್., ಅಶೋಕ್ ಸಾಲ್ಯಾನ್, ಕೃಷ್ಣ ತಣ್ಣೀರುಬಾವಿ, ಅನ್ವರ್ ಶೇಕ್ ಮುಂತಾದವರು ಉಪಸ್ಥಿತರಿದ್ದರು.