ಕೇರಳದಿಂದ ಪುತ್ತೂರಿನ ನೆಂಟರ ಮನೆಗೆ ಬಂದವರಿದ್ದರೆ ಮನೆ ಮಂದಿಗೆಲ್ಲ ಕೋವಿಡ್ ಪರೀಕ್ಷೆ!

Update: 2021-08-02 09:55 GMT

ಪುತ್ತೂರು, ಆ.2: ದ.ಕ. ಜಿಲ್ಲೆಯಲ್ಲಿ ಕೊರೋನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಗಡಿ ಪ್ರದೇಶವಾಗಿರುವ ಕೇರಳದ ಕಾಸರಗೋಡಿನಿಂದ ಪುತ್ತೂರಿನ ನೆಂಟರ ಮನೆಗೆ ಯಾರಾದರೂ ಭೇಟಿ ನೀಡಿದ್ದೇ ಆದಲ್ಲಿ ಆ ಮನೆಯ ಸದಸ್ಯರೆಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸುವ ಚಿಂತನೆಗೆ ಅಧಿಕಾರಿಗಳು ಮುಂದಾಗಿದ್ದಾರೆ.

ಕಾಸರಗೋಡು ತಾಲೂಕಿನ ಅಡೂರು, ಮುಳ್ಳೇರಿಯ, ಬದಿಯಡ್ಕ, ಪೆರ್ಲ, ನೆಟ್ಟಣಿಗೆ, ಪಡ್ರೆ ಮತ್ತಿತರ ಕಡೆಗಳಿಂದ ಪುತ್ತೂರಿಗೆ ನಿರಂತರ ಜನ ಸಂಪರ್ಕವಿದೆ. ಬಸ್ ಸೌಲಭ್ಯ ಇಲ್ಲದಿದ್ದರೂ ಖಾಸಗಿ ವಾಹನಗಳಲ್ಲಿ ಅಲ್ಲಿನ ಜನರು ಪುತ್ತೂರು ತಾಲೂಕಿನ ವಿವಿಧ ಭಾಗಗಳಿಗೆ ಭೇಟಿ ಕೊಡುತ್ತಿದ್ದಾರೆ. ಕಾಸರಗೋಡು ತಾಲೂಕಿನಿಂದ ಪ್ರತಿನಿತ್ಯ ಪುತ್ತೂರು ತಾಲೂಕನ್ನು ಸಂಪರ್ಕಿಸುವ ಕೇರಳ ನೋಂದಣಿಯ ವಾಹನಗಳ ಪಟ್ಟಿ ಇಲಾಖೆಯ ಬಳಿ ಇದೆ. ಕಾಸರಗೋಡಿನ ಸಂಪರ್ಕವನ್ನು ಕಡಿತಗೊಳಿಸದಿದ್ದರೆ ಪುತ್ತೂರು ಮತ್ತು ಕಡಬ ತಾಲೂಕುಗಳಲ್ಲೂ ಕೊರೋನ ಪ್ರಕರಣಗಳು ಹೆಚ್ಚಳವಾಗುವ ಸಾಧ್ಯತೆಗಳಿವೆ. ಕಾಸರಗೋಡು ತಾಲೂಕಿನಿಂದ ಪುತ್ತೂರನ್ನು ಸಂಪರ್ಕಿಸುವ ಎಲ್ಲಾ ಮಾರ್ಗಗಳಲ್ಲೂ ಕಟ್ಟುನಿಟ್ಟಿನ ತಪಾಸಣೆಯನ್ನು ಆರೋಗ್ಯ, ಪೊಲೀಸ್ ಹಾಗೂ ಕಂದಾಯ ಇಲಾಖೆಯವರು ನಡೆಸುತ್ತಿದ್ದಾರೆ. 72 ತಾಸುಗಳ ನೆಗೆಟಿವ್ ವರದಿ ಇದ್ದಲ್ಲಿ ಮಾತ್ರ ಕರ್ನಾಟಕವನ್ನು ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಪುತ್ತೂರು ತಾಲೂಕಿನ ಯಾವ ಗ್ರಾಮಕ್ಕೆ ಕಾಸರಗೋಡಿನಿಂದ ಆಗಮಿಸಿದ್ದಾರೆ ಮತ್ತು ಇಲ್ಲಿ ಅವರು ಭೇಟಿ ನೀಡುವ ಮನೆಯ ವಿಳಾಸ ಹಾಗೂ ಮನೆಯ ಯಜಮಾನನ ಮೊಬೈಲ್ ದೂರವಾಣಿ ಸಂಖ್ಯೆಯನ್ನು ಪಡೆದುಕೊಳ್ಳಲಾಗುತ್ತಿದೆ. ಯಾಕೆಂದರೆ ನೆಗೆಟಿವ್ ವರದಿ ಇದ್ದು ಕಾಸರಗೋಡಿನಿಂದ ಇಲ್ಲಿಗೆ ಭೇಟಿ ನೀಡಿದ್ದರೂ ಅವರು ಭೇಟಿ ನೀಡಿದ ಮನೆಯವರನ್ನು ಕೊರೋನ ಪರೀಕ್ಷೆಗೆ ಒಳಪಡಿಸುವುದು ಅನಿವಾರ್ಯವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುತ್ತೂರು-ಕಾಸರಗೋಡು ನಡುವಣ ಕರ್ನಾಟಕ ಕೆಎಸ್ಸಾರ್ಟಿಸಿ ಹಾಗೂ ಕೇರಳ ಕೆಎಸ್ಸಾರ್ಟಿಸಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಕಾಸರಗೋಡು ತಾಲೂಕಿನ ಕುಂಬಳೆ, ಉಪ್ಪಳ, ಅಡೂರು, ಕುಂಟಾರು ಪ್ರದೇಶಗಳಿಗೆ ತೆರಳುವ ಕೆಎಸ್ಸಾರ್ಟಿಸಿ ಹಾಗೂ ಖಾಸಗಿ ಬಸ್‌ಗಳ ಸಂಚಾರವನ್ನೂ ಸ್ಥಗಿತಗೊಳಿಸಲಾಗಿದೆ. ಪುತ್ತೂರು-ಪಾಣಾಜೆ-ಪೆರ್ಲ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್‌ಗಳು ತಮ್ಮ ಓಡಾಟವನ್ನು ಜಿಲ್ಲಾಡಳಿತದ ಆದೇಶದಂತೆ ನಿಲುಗಡೆಗೊಳಿಸಿವೆ.


ನೆರೆಯ ಕಾಸರಗೋಡು ತಾಲೂಕಿನಲ್ಲಿ ಕೊರೋನ ಪ್ರಕರಣಗಳು ಏರಿಕೆಯಾಗುತ್ತಿರುವುದರ ನೇರ ಪರಿಣಾಮ ಪುತ್ತೂರು ಮತ್ತು ಕಡಬ ತಾಲೂಕುಗಳ ಆಗುತ್ತಿದೆ. ಆದ ಕಾರಣ ಕಾಸರಗೋಡಿನಿಂದ ಪುತ್ತೂರು ತಾಲೂಕಿಗೆ ಪ್ರವೇಶಿಸುವವರ ಕೋವಿಡ್ ನೆಗೆಟಿವ್ ವರದಿ ಕಡ್ಡಾಯದ ಜೊತೆಗೆ ಇಲ್ಲಿ ಅವರು ಭೇಟಿ ಮಾಡಿದ ಮನೆಯವರನ್ನು ಕೂಡಾ ಕೊರೋನ ತಪಾಸಣೆಗೆ ಒಳ ಪಡಿಸಲು ಚಿಂತನೆ ನಡೆಸಲಾಗಿದೆ.

-ರಮೇಶ್ ಬಾಬು ತಹಶೀಲ್ದಾರ್, ಪುತ್ತೂರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News