ಕೊರೋನ ಸಾವು- ಪರಿಹಾರದ ನಿಖರ ಮಾಹಿತಿ ನೀಡಿ: ಜಿಲ್ಲಾಡಳಿತಕ್ಕೆ ಐವನ್ ಆಗ್ರಹ

Update: 2021-08-02 10:29 GMT

ಮಂಗಳೂರು, ಆ.2: ಕೊರೋನದಿಂದ ಮೃತಪಟ್ಟವರ ಕುಟುಂಬಗಳಿಗೆ ತಲಾ 1 ಲಕ್ಷ ರೂ. ಪರಿಹಾರ ನೀಡುವುದಾಗಿ ರಾಜ್ಯ ಸರ್ಕಾರ ಘೋಷಿಸಿ ಬಹಳ ಸಮಯವಾದರೂ ಜಿಲ್ಲಾಧಿಕಾರಿಗೆ ಈ ಬಗ್ಗೆ ನಿರ್ದೇಶನವೇ ಬಂದಿಲ್ಲ. ಸಾವಿನ ಆಡಿಟ್ ಕೂಡ ಆಗಿಲ್ಲ. ಕೂಡಲೇ ಎಷ್ಟು ಮಂದಿ ಈ ಪರಿಹಾರ ಪಡೆಯಲು ಅರ್ಹರು ಎಂಬ ಮಾಹಿತಿ ಜಿಲ್ಲಾಡಳಿತ ನೀಡಬೇಕು. ಇಲ್ಲದಿದ್ದರೆ ನ್ಯಾಯಾಲಯಕ್ಕೆ ಹೋಗುವುದಾಗಿ ಎಐಸಿಸಿ ಕಾರ್ಯದರ್ಶಿ, ವಿಧಾನ ಪರಿಷತ್‌ನ ಮಾಜಿ ಸದಸ್ಯ ಐವನ್ ಡಿಸೋಜ ಎಚ್ಚರಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಜಿಲ್ಲೆಯಲ್ಲಿ ಕೊರೋನದಿಂದ ವಾರಕ್ಕೆ 40-50 ಸಾವು ಸಂಭವಿಸುತ್ತಿದೆ. ಎಲ್ಲರಿಗೂ ಲಸಿಕೆ ನೀಡಿದ್ದರೆ ಇಷ್ಟೊಂದು ಮಂದಿ ಸಾವಿಗೀಡಾಗುತ್ತಿರಲಿಲ್ಲ. ಜತೆಗೆ ಸೋಂಕಿನ ಪ್ರಕರಣಗಳೂ ಏರಿಕೆಯಾಗುತ್ತಿವೆ. 15 ಲಕ್ಷದಷ್ಟು ಜನಸಂಖ್ಯೆಯಲ್ಲಿ ಎಷ್ಟು ಮಂದಿಗೆ ಲಸಿಕೆ ನೀಡಲಾಗಿದೆ ಎಂಬ ನಿಖರ ಮಾಹಿತಿಯನ್ನು ಆರೋಗ್ಯ ಇಲಾಖೆ ನೀಡುತ್ತಿಲ್ಲ. ನಾಲ್ಕು ತಿಂಗಳು ಕಳೆದರೂ ಶೇ.25ರಷ್ಟೂ ಜನರಿಗೆ ಲಸಿಕೆ ನೀಡಲು ಸಾಧ್ಯವಾಗಿಲ್ಲ ಎಂದು ಅವರು ಆರೋಪಿಸಿದರು.

ರಾಜ್ಯದಲ್ಲೇ ಅತಿ ಹೆಚ್ಚು ಕೊರೋನ ಪಾಸಿಟಿವಿಟಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ದಾಖಲಾಗುತ್ತಿದೆ. ಲಸಿಕೆ ನೀಡಲು ಸರ್ಕಾರ ವಿಫಲವಾಗಿದ್ದೇ ಕೊರೋನ 3ನೇ ಅಲೆ ಈ ಮಟ್ಟಕ್ಕೆ ಏರಲು ಕಾರಣ ಎಂದು ಆರೋಪಿದ ಐವನ್, ಖಾಸಗಿ ಆಸ್ಪತ್ರೆಗಳಲ್ಲಿ ಸಿಗುವ ಲಸಿಕೆ ಜನಸಾಮಾನ್ಯರಿಗೆ ಉಚಿತವಾಗಿ ಸಿಗುತ್ತಿಲ್ಲ ಎಂದರು.

ಖಾಸಗಿ ಆಸ್ಪತ್ರೆಗಳಲ್ಲಿ 800 ರೂ. ನೀಡಿದರೆ ಎಷ್ಟು ಬೇಕಾದರೂ ಲಸಿಕೆ ಸಿಗುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ಮಾತ್ರ ಇಲ್ಲ. ಪರಿಸ್ಥಿತಿ ಹೀಗಿರುವಾಗ ಬಿಜೆಪಿಯವರು ‘ಎಲ್ಲರಿಗೂ ಉಚಿತ ಲಸಿಕೆ’ ಜಾಹೀರಾತು ಫಲಕಗಳನ್ನು ಹಾಕಿದ್ದಾರೆ. ಕೂಡಲೆ ಈ ಸುಳ್ಳು ಜಾಹೀರಾತು ಫಲಕಗಳನ್ನು ತೆಗೆಯದಿದ್ದರೆ ಅವುಗಳಿಗೆ ಸೆಗಣಿ ಹಾಕುವುದಾಗಿ ಐವನ್ ಡಿಸೋಜ ಹೇಳಿದರು.

ಸುಮಾರು 1.10 ಲಕ್ಷ ಮಂದಿ ಕಾಲೇಜು ವಿದ್ಯಾರ್ಥಿಗಳು ಜಿಲ್ಲೆಯಲ್ಲಿದ್ದಾರೆ. ಅವರು ತರಗತಿಗೆ ಹಾಜರಾಗಬೇಕಾದರೆ ಲಸಿಕೆ ಕಡ್ಡಾಯ ಆದೇಶ ಮಾಡಲಾಗಿದೆ. ಆದರೆ ಈವರೆಗೆ ಕೇವಲ 63 ಸಾವಿರ ವಿದ್ಯಾರ್ಥಿಗಳಿಗೆ ಮಾತ್ರ ಮೊದಲ ಡೋಸ್ ನೀಡಲಾಗಿದೆ. ಕೊರೋನ ಲಸಿಕೆಯ ಕೂಪನ್‌ಗಳು ಬಿಜೆಪಿ ಕಾರ್ಯಕರ್ತರ ಕೈಯಲ್ಲಿವೆ. ಅವರಿಗೆ ಬೇಕಾದವರಿಗೆ ಮಾತ್ರ ಲಸಿಕೆ ನೀಡುತ್ತಿದ್ದಾರೆ. ಜಿಲ್ಲಾಡಳಿತ ಇದರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಸುಮ್ಮನಿರಲು ಆಗದು ಎಂದು ಅವರು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರಾದ ಶಶಿಧರ ಹೆಗ್ಡೆ, ವಿವೇಕ್‌ರಾಜ್ ಪೂಜಾರಿ, ಮುಹಮ್ಮದ್ ಕುಂಜತ್ತಬೈಲ್, ಶುಭೋದಯ ಆಳ್ವ ಮತ್ತಿತರರಿದ್ದರು.


ಆರು ತಿಂಗಳಲ್ಲಿ ಸರ್ಕಾರ ಪತನ!

ಇನ್ನು ಆರು ತಿಂಗಳಲ್ಲಿ ಜಿಪಂ, ತಾಪಂ ಚುನಾವಣೆ ನಡೆದ ಕೂಡಲೆ ರಾಜ್ಯ ಸರ್ಕಾರ ಪತನಗೊಳ್ಳಲಿದೆ. ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿಗೆ ಆರೆಸ್ಸೆಸ್ ಹಿನ್ನೆಲೆ ಇಲ್ಲ. ಸರಕಾರ ಬೀಳುವ ಸಂದರ್ಭ ಎತ್ತಿ ಎಂದು ಹೇಳಲು ಬೊಮ್ಮಾಯಿ ದೇವೇಗೌಡರನ್ನು ಭೇಟಿಯಾಗಿದ್ದಾರೆ ಎಂದು ಸುದ್ದಿಗಾರರ ಪ್ರಶ್ನೆಯೊಂದಕ್ಕೆ ಐವನ್ ಡಿಸೋಜ ಪ್ರತಿಕ್ರಿಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News