ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರದವರಿಗೆ ದ.ಕ. ಜಿಲ್ಲೆಗೆ ಪ್ರವೇಶ ನಿರ್ಬಂಧ ; ತಲಪಾಡಿ ಚೆಕ್‌ಪೋಸ್ಟ್‌ನಲ್ಲಿ ಗೊಂದಲ

Update: 2021-08-02 13:21 GMT

ಮಂಗಳೂರು, ಆ.2: ಕೇರಳದಿಂದ ಬರುವವರು ಕಡ್ಡಾಯವಾಗಿ ಏಳು ದಿನಗಳೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತೋರಿಸ ಬೇಕೆಂದು ಕರ್ನಾಟಕ ಸರಕಾರ ಆದೇಶಿಸಿತ್ತು. ದ.ಕ. ಜಿಲ್ಲೆಯ ತಲಪಾಡಿ ಗಡಿಯಲ್ಲಿ ನೆಗೆಟಿವ್ ವರದಿ ಇದ್ದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ರಿಪೋರ್ಟ್ ಹಾಜರುಪಡಿಸದವರು ಪೊಲೀಸರೊಂದಿಗೆ ವಾಗ್ವಾದಕ್ಕೆ ಇಳಿದಿದ್ದಾರೆ. ಇದರಿಂದ ಗಡಿಭಾಗದ ಚೆಕ್‌ಪೋಸ್ಟ್‌ನಲ್ಲಿ ಭಾರೀ ಗೊಂದಲಕ್ಕೆ ಕಾರಣವಾಯಿತು.

ಕೇರಳದಲ್ಲಿ ಕೊರೋನ ಸೋಂಕು ಹೆಚ್ಚಳವಾಗುತ್ತಿದೆ. ಇದರ ಬೆನ್ನಲ್ಲೇ ದ.ಕ. ಜಿಲ್ಲೆಯಲ್ಲಿ ಕೂಡ ಕೊರೋನ ಸೋಂಕಿನ ಪ್ರಕರಣ ಹೆಚ್ಚಳವಾಗುತ್ತಿದ್ದು, ರವಿವಾರ ಜಿಲ್ಲೆಯಲ್ಲಿ ಅತಿಹೆಚ್ಚು ಕೋವಿಡ್ ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಕೇರಳ-ಕರ್ನಾಟಕದ ಗಡಿ ಪ್ರದೇಶವಾದ ತಲಪಾಡಿಯಲ್ಲಿ ಆರ್‌ಟಿಪಿಸಿಆರ್ ರಿಪೋರ್ಟ್ ಇಲ್ಲದೆ ಇದ್ದಲ್ಲಿ ಪ್ರವೇಶ ನಿರಾಕರಣೆ ಮಾಡಲಾಗುತ್ತಿದೆ. ಇದೇ ವಿಚಾರಕ್ಕೆ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ಆರೋಪದಲ್ಲಿ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಗಿದೆ.

ಕೇರಳದಿಂದ ಬರುವವರು ಕಡ್ಡಾಯವಾಗಿ ಏಳು ದಿನಗಳೊಳಗಿನ ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ತೋರಿಸಬೇಕೆಂದು ರಾಜ್ಯ ಸರಕಾರ ಆದೇಶಿಸಿತ್ತು. ಕೊರೋನದ ಎರಡೂ ಡೋಸ್‌ಗಳ ಲಸಿಕೆ ಪಡೆದವರಿಗೂ ಜಿಲ್ಲೆ ಪ್ರವೇಶಿಸಲು ಅನುಮತಿ ನೀಡಲಾಗುತ್ತಿಲ್ಲ. ಆರ್‌ಟಿಪಿಸಿಆರ್ ನೆಗೆಟಿವ್ ರಿಪೋರ್ಟ್ ಇದ್ದರಷ್ಟೇ ಪ್ರವೇಶಿಸಬಹುದು. ಈ ದಿಢೀರ್ ನಿರ್ಧಾರದಿಂದ ಗೊಂದಲ ಗಡಿಯಲ್ಲಿ ಗೊಂದಲ ಸೃಷ್ಟಿಯಾಗಿದೆ.

ತಲಪಾಡಿ ಗಡಿ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಗಡಿ ಪ್ರದೇಶದಲ್ಲಿ ಸೋಮವಾರ ಬೆಳಗ್ಗೆವರೆಗೆ ಆರ್‌ಟಿಪಿಸಿಆರ್ ರಿಪೋರ್ಟ್ ಇಲ್ಲದವರಿಗೆ ಸ್ಥಳದಲ್ಲೇ ಪರೀಕ್ಷೆ ಮಾಡುವ ವ್ಯವಸ್ಥೆ ಮಾಡಲಾಗಿತ್ತು. ಕೊರೋನ ಲಸಿಕೆ ಪಡೆದವರೂ ಸೇರಿದಂತೆ ಜಿಲ್ಲೆಗೆ ಪ್ರವೇಶಿಸುವವರು ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಲು ಸರತಿ ಸಾಲಿನಲ್ಲಿ ನಿಂತಿದ್ದರು. ಸ್ಥಳದಲ್ಲಿ ಪರೀಕ್ಷೆ ನಡೆಸಿ, ಅವರಿಗೆ ಜಿಲ್ಲೆ ಪ್ರವೇಶಕ್ಕೆ ಅನುಮತಿ ನೀಡಿದರೆ ಪಾಸಿಟಿವ್ ಇದ್ದವರು ಕೊರೋನ ಹಬ್ಬಿಸುವ ಸಾಧ್ಯತೆ ಇರುವುದರಿಂದ ಇಂದಿನಿಂದ ದಿಢೀರ್ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸುವುದನ್ನು ರದ್ದುಗೊಳಿಸಲಾಗಿದೆ.
ಇದರಿಂದಾಗಿ ಗೊಂದಲದ ವಾತಾವರಣ ನಿರ್ಮಾಣವಾಗಿ, ಸರತಿ ಸಾಲಿನಲ್ಲಿ ಕಾದು ನಿಂತು ವಾಪಸ್ ತೆರಳಬೇಕಾದ ಪರಿಸ್ಥಿತಿಯೂ ಈ ವೇಳೆ ನಿರ್ಮಾಣವಾಯಿತು. ಮಂಗಳೂರು ವಿಶ್ವವಿದ್ಯಾನಿಲಯದ ಪರೀಕ್ಷೆಗೆ ತೆರಳುವವರಿಗೆ ಹಾಲ್ ಟಿಕೆಟ್ ತೋರಿಸಿ ಪರೀಕ್ಷೆಗೆ ತೆರಳಲು ಅನುಮತಿ ನೀಡಲಾಯಿತು.

ಡಿಸಿ, ಕಮಿಷನರ್‌ರಿಂದ ಪರಿಶೀಲನೆ: ದ.ಕ. ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿ ಕುಮಾರ್, ಮಂಗಳೂರು ಸಹಾಯಕ ಆಯುಕ್ತ (ಎಸಿ) ಮದನ್ ಮೋಹನ್ ಅವರು ತಲಪಾಡಿ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ, ಭದ್ರತೆಯ ಕುರಿತು ಪರಿಶೀಲಿಸಿದರು. ಕೇರಳದಿಂದ ಬರುವವರ ಆರ್‌ಟಿಪಿಸಿಆರ್ ನೆಗೆಟಿವ್ ವರದಿಯನ್ನು ಖುದ್ದು ಪರಿಶೀಲನೆ ನಡೆಸಿದರು.

ಕೇರಳಿಗರ ಆಕ್ರೋಶ: ದ.ಕ. ಜಿಲ್ಲಾಡಳಿತವು ಜಿಲ್ಲೆಯ ಪ್ರವೇಶಕ್ಕೆ ಅನುಮತಿ ನಿರಾಕರಿಸಿರುವುದನ್ನು ಆಕ್ಷೇಪಿಸಿ, ಕೇರಳದ ಕೆಲ ಯುವಕರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು. ಪೊಲೀಸರು ಫೋಟೊ ಕ್ಲಿಕ್ಕಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿ ಯುವಕರು ಘೋಷಣೆ ಕೂಗಿದರು. ಇದೇ ವೇಳೆ ಪೊಲೀಸರ ಜೊತೆಗೆ ಅನುಚಿತವಾಗಿ ವರ್ತಿಸಿದ ವ್ಯಕ್ತಿಯನ್ನು ವಶಕ್ಕೆ ಪಡೆಯಲಾಯಿತು.

ನೆಗೆಟಿವ್ ವರದಿ ಕಡ್ಡಾಯ ವಿರೋಧಿಸಿ ಹೆದ್ದಾರಿ ತಡೆದು ಪ್ರತಿಭಟನೆ

ಕರ್ನಾಟಕ ಸರಕಾರವು ಕೇರಳದಿಂದ ಆಗಮಿಸುವವರಿಗೆ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಕಡ್ಡಾಯಗೊಳಿಸಿದೆ. ಇದನ್ನು ವಿರೋಧಿಸಿದ ಕೇರಳದ ಸಂಘಟನೆಗಳ ಕಾರ್ಯಕರ್ತರು, ಕರ್ನಾಟಕದಿಂದ ಕೇರಳಕ್ಕೆ ಹೋಗುವ ವಾಹನಗಳನ್ನು ಸುಮಾರು ಅರ್ಧ ಗಂಟೆಗಳ ಕಾಲ ತಡೆದು ಪ್ರತಿಭಟನೆ ನಡೆಸಿದರು.

ಕರ್ನಾಟಕಕ್ಕೆ ಬರುವವರಿಗೆ ಮೊದಲು ಆರ್‌ಟಿಪಿಸಿಆರ್ ನೆಗೆಟಿವ್ ವರದಿ, ಕೊರೋನ ಲಸಿಕೆ ಸರ್ಟಿಫಿಕೇಟ್ ಅಥವಾ ಸ್ಥಳದಲ್ಲಿಯೇ ಆರ್‌ಟಿಪಿಸಿಆರ್ ಪರೀಕ್ಷೆ ನಡೆಸಿ, ಜಿಲ್ಲೆ ಪ್ರವೇಶಿಸಲು ಅವಕಾಶ ನೀಡಲಾಗಿತ್ತು. ಆದರೆ ಇದು ಮಧ್ಯಾಹ್ನದ ವೇಳೆಗೆ ಪರೀಕ್ಷೆ ರದ್ದುಗೊಳಿಸ ಲಾಗಿದ್ದು, ಕೇವಲ ಕೇರಳದಿಂದ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ತರುವಂತೆ ತಿಳಿಸಲಾಗಿದೆ. ನೆಗೆಟಿವ್ ರಿಪೋರ್ಟ್ ತಂದವರಿಗೆ ಮಾತ್ರ ಜಿಲ್ಲೆಗೆ ಪ್ರವೇಶ ನೀಡಲಾಗುತ್ತಿದೆ. ಕೂಡಲೇ ಈ ನಿರ್ಧಾರವನ್ನು ವಾಪಸ್ ಪಡೆಯಬೇಕೆಂದು ಒತ್ತಾಯಿಸಿದರು.

ಕರ್ನಾಟಕ ಸರಕಾರದ ವಿರುದ್ಧ ಕಾರ್ಯಕರ್ತರು ಘೋಷಣೆ ಕೂಗಿ, ಆಕ್ರೋಶ ವ್ಯಕ್ತಪಡಿಸಿದರು. ನಂತರ ಸ್ಥಳಕ್ಕೆ ಆಗಮಿಸಿದ ಕೇರಳದ ಮಂಜೇಶ್ವರ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಪ್ರತಿಭಟನೆ ವಾಪಸ್ ತೆಗೆದುಕೊಳ್ಳುವಂತೆ ಮನವೊಲಿಸಿದರು. ಬಳಿಕ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂದಕ್ಕೆ ಪಡೆದರು.

ನೆಗೆಟಿವ್ ವರದಿ ತಂದರಷ್ಟೇ ದ.ಕ. ಜಿಲ್ಲೆಗೆ ಪ್ರವೇಶ: ಡಿಸಿ

ಕೇರಳದಲ್ಲಿ ಕೊರೋನ ಸೋಂಕು ಅಧಿಕವಿದ್ದು, ಕರ್ನಾಟಕ ಸರಕಾರದ ನಿರ್ದೇಶನದಂತೆ ದ.ಕ. ಗಡಿಭಾಗದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. 72 ಗಂಟೆಗಳ ಒಳಗೆ ಮಾಡಿಸಿರುವ ಆರ್‌ಟಿಪಿಸಿಆರ್ ನೆಗೆಟಿವ್ ವರದಿ ಹಾಜರುಪಡಿಸಿದವರಿಗಷ್ಟೇ ಜಿಲ್ಲೆಗೆ ಪ್ರವೇಶ ನೀಡುವಂತೆ ಸೂಚಿಸಲಾಗಿದೆ. ಇದನ್ನು ಕಟ್ಟುನಿಟ್ಟಾಗಿ ಪಾಲಿಸಲು ಪೊಲೀಸ್ ಹಾಗೂ ಕಂದಾಯ ಇಲಾಖೆಗಳಿಗೆ ತಿಳಿಸಲಾಗಿದೆ ಎಂದು ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ತಿಳಿಸಿದ್ದಾರೆ.

ಕಾಸರಗೋಡು-ದ.ಕ. ಗಡಿಭಾಗದ ತಲಪಾಡಿ ಚೆಕ್‌ಪೋಸ್ಟ್‌ಗೆ ಭೇಟಿ ನೀಡಿ, ಭದ್ರತೆಯನ್ನು ಪರಿಶೀಲನೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಅವರು ಮಾತನಾಡಿದರು. ತಲಪಾಡಿ ಚೆಕ್‌ಪೋಸ್ಟ್ ಮೂಲಕ ಬಹಳಷ್ಟು ವಾಹನಗಳ ಸಂಚಾರವಿದೆ. ಕಾಸರಗೋಡಿನಿಂದ ಜಿಲ್ಲೆಗೆ ಉದ್ಯೋಗ ಕ್ಕೆಂದು ಬರುವವರು, ವಿದ್ಯಾರ್ಥಿಗಳು, ವೈದ್ಯಕೀಯ ಚಿಕಿತ್ಸೆಗೆಂದು ಆಗಮಿಸುತ್ತಿದ್ದಾರೆ. ಎಲ್ಲರನ್ನು ಕೂಲಂಕಷವಾಗಿ ತಪಾಸಣೆ ಮಾಡಲಾಗು ತ್ತಿದೆ. ತಂಡಗಳನ್ನು ರಚಿಸಲಾಗಿದೆ. ಸೋಮವಾರ ಕಂಡುಬಂದ ನ್ಯೂನತೆಗಳನ್ನು ಸರಿಪಡಿಸಿಕೊಂಡು ಹೆಚ್ಚಿನ ಬಂದೋಬಸ್ತ್ ಕಲ್ಪಿಸಲಾಗುತ್ತದೆ ಎಂದರು.

ಮಂಗಳೂರು ವಿಶ್ವವಿದ್ಯಾಲಯ ವ್ಯಾಪ್ತಿಯ ಕಾಲೇಜುಗಳಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ಆರಂಭಗೊಂಡಿವೆ. ಪರೀಕ್ಷೆಗೆಂದು ಆಗಮಿಸುವ ಕೇರಳದ ವಿದ್ಯಾರ್ಥಿಗಳು ಹಾಲ್ ಟಿಕೆಟ್ ಹಾಗೂ ಐಡಿ ಕಾರ್ಡ್‌ಗಳನ್ನು ಹಾಜರುಪಡಿಸಬೇಕು. ಅಂತಹವರಿಗೆ ಜಿಲ್ಲೆಗೆ ಪ್ರವೇಶಿಸಲು ಅನುಮತಿ ನೀಡಲಾಗಿದೆ ಎಂದು ತಿಳಿಸಿದರು.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News