ಜಿಸಿಪಿಎಎಸ್‌ನ ಹೊಸ ಸ್ವರೂಪದ ಕೋರ್ಸ್ ಆ.16ರಿಂದ ಪ್ರಾರಂಭ

Update: 2021-08-02 12:43 GMT

ಮಣಿಪಾಲ, ಆ.2: ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಅಂಗಸಂಸ್ಥೆಯಾಗಿರುವ ಗಾಂಧಿಯನ್ ಸೆಂಟರ್ ಫಾರ್ ಫಿಲೋಸಫಿಕಲ್ ಆರ್ಟ್ಸ್ ಅಂಡ್ ಸೈನ್ಸಸ್ (ಜಿಸಿಪಿಎಎಸ್) ಸರ್ವೋದಯದ ಕನಸಿನೊಂದಿಗೆ ಇದೇ ಬರುವ ಆ.16ರಿಂದ ಹೊಸ ಉತ್ಸಾಹ ದೊಂದಿಗೆ ಈ ಸಾಲಿನ ತನ್ನ ಹೊಸ ತರಗತಿಗಳನ್ನು ಪ್ರಾರಂಭಿಸುತ್ತಿದೆ ಎಂದು ಸಂಸ್ಥೆಯ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.

ಎಲ್ಲ ರೀತಿಯ ಕಲೆಗಳನ್ನು, ತತ್ವಶಾಸ್ತ್ರದ ದೃಷ್ಟಿಯಲ್ಲಿ ನೋಡುವ, ತತ್ವಶಾಸ್ತ್ರವನ್ನು ಪರಿಸರದ ಸಂವೇದನೆಯ ಮೂಲಕ ನೋಡುವ ಎಂ.ಎ. (ಏಕಾಸೊಫಿಕಲ್ ಎಸ್ಥೆಟಿಕ್ಸ್), ವಿವಿಧ ರೀತಿಯ ಕಲೆಗಳು ಅಂತರಂಗದ, ಬಹಿರಂಗದ ಹಾಗೂ ಅಂತಾರಾಷ್ಟ್ರೀಯ ಶಾಂತಿಗೆ ಕಾರಣವಾಗ ಬಹುದಾದ ಎಂ.ಎ.(ಆರ್ಟ್ ಆ್ಯಂಡ್ ಪೀಸ್ ಸ್ಟಡೀಸ್), ಸೌಂದರ್ಯಶಾಸ್ತ್ರ ಹಾಗೂ ಶಾಂತಿ ಅಧ್ಯಯನಗಳು ಒಟ್ಟಿಗೆ ಮೇಳೈಸಿದ ಬಿ.ಎ.(ಎಸ್ಥೆಟಿಕ್ಸ್ ಆ್ಯಂಡ್ ಪೀಸ್ ಸ್ಟಡೀಸ್)- ಇವೆಲ್ಲವುಗಳ ತರಗತಿಗಳು ಆ.16ರಂದು ಆನ್‌ಲೈನ್‌ನಲ್ಲಿ ಆರಂಭಗೊಳ್ಳಲಿವೆ ಎಂದವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಸರ್ವೋದಯದ ಹಂಬಲವುಳ್ಳ ಗಾಂಧೀಜಿ, ಟಾಗೋರ್, ಅಂಬೇಡ್ಕರ್ ಚಿಂತನೆಗಳನ್ನು ಆಧಾರವಾಗಿಟ್ಟುಕೊಂಡಿರುವ, ಸಾಮಾಜಿಕ ಕಳಕಳಿಯುಳ್ಳ ಹೊಸ ಜನಾಂಗ ರೂಪಿಸುವ ತತ್ತ್ವಕ್ಕೆ ಬದ್ಧವಾಗಿರುವ, ಈ ಎಲ್ಲ ಕೋರ್ಸ್‌ಗಳು ಹೊಸ ಯುಗಕ್ಕೆ ಮುನ್ನುಡಿ ಬರೆಯುವ ಹಂಬಲ ಹೊಂದಿವೆ. ಇಲ್ಲಿ ಓದಿದ ವಿದ್ಯಾರ್ಥಿ ಗಳು-ಪತ್ರಿಕೋದ್ಯಮ, ಮಾಧ್ಯಮ, ಸಮೂಹ ಸಂವಹನ, ಶಿಕ್ಷಣ, ಸಂಶೋಧನೆ, ಅಂತಾರಾಷ್ಟ್ರೀಯ ಸಂಸ್ಥೆಗಳು, ಪಬ್ಲಿಷಿಂಗ್, ಯುಜಿಸಿ, ಯುಪಿಎಸ್ಸಿ ಪರೀಕ್ಷೆಗಳು, ಸೇವಾಸಂಸ್ಥೆಗಳು ಹಾಗೂ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳಬಹುದಾಗಿದೆ ಎಂದು ಜಿಸಿಪಿಎಎಸ್‌ನ ನಿರ್ದೇಶಕ ಪ್ರೊ.ವರದೇಶ್ ಹಿರೇಗಂಗೆ ತಿಳಿಸಿದ್ದಾರೆ.

ತರಗತಿಗಳು ಆರಂಭಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಆಸಕ್ತ ವಿದ್ಯಾರ್ಥಿಗಳು ಆಗಸ್ಟ್ 10ರೊಳಗೆ ಹೆಸರು ನೊಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ಸಂಸ್ಥೆಯ ವೆಬ್‌ಸೈಟ್ -https://manipal.edu/gandhian-centre.html-ನ್ನು ಸಂದರ್ಶಿಸಬಹುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News