ಸೆ.1ರಂದು ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಗೆ ಮುತ್ತಿಗೆ: ಮಹಾಂತೇಶ

Update: 2021-08-02 12:46 GMT

ಉಡುಪಿ, ಆ.1: ಶಾಸಕರುಗಳ ಕೈಗೆ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯ ಆಹಾರ ಕಿಟ್ ನೀಡಿರುವುದನ್ನು ವಿರೋಧಿಸಿ ಹಾಗೂ ಆಹಾರ, ಟೂಲ್, ಸೇಫ್ಟಿ, ತಂತ್ರಾಂಶ ಖರೀದಿಗಳ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವಂತೆ ಆಗ್ರಹಿಸಿ ರಾಜ್ಯ ಕಟ್ಟಡ ಕಾರ್ಮಿಕ ಸಂಘಗಳ ಸಮನ್ವಯ ಸಮಿತಿಯ ನೇತೃತ್ವದಲ್ಲಿ ಸೆ.1ರಂದು ಬೆಂಗಳೂರಿನಲ್ಲಿ ಮಂಡಳಿಗೆ ಮುತ್ತಿಗೆ ಹೋರಾಟವನ್ನು ಹಮ್ಮಿಕೊಳ್ಳಲಾಗಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಮಿತಿಯ ಸಂಚಾಲಕ ಹಾಗೂ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್(ಸಿಐಟಿಯು) ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ, ರಾಜ್ಯ ವ್ಯಾಪಿಯಾಗಿ ಈಗಾಗಲೇ ಪ್ರತಿಭಟನೆಗಳು ಯಶಸ್ವಿಯಾಗಿದ್ದು, ಇದರ ಮುಂದುವರೆದ ಭಾಗವಾಗಿ ಈ ಹೋರಾಟ ನಡೆಸಲಾಗುತ್ತಿದೆ. ಇದರಲ್ಲಿ 10 ಸಾವಿರಕ್ಕೂ ಅಧಿಕ ಕಾರ್ಮಿಕರು ಪಾಲ್ಗೊಳ್ಳುವ ನಿರೀಕ್ಷೆ ಹೊಂದಲಾಗಿದೆಂದರು.

50-60ಕೋ.ರೂ. ಭ್ರಷ್ಟಾಚಾರ

ಮಂಡಳಿಯು 250ರೂ. ಮೊತ್ತದ ಸೇಪ್ಟಿ ಕಿಟ್‌ಗೆ 600ರೂ. ಮತ್ತು 667ರೂ. ಮೌಲ್ಯದ ಆಹಾರ ಕಿಟ್‌ಗೆ 978ರೂ. ಬಿಲ್ ಮಾಡಿದೆ. 5ಲಕ್ಷ ರೂ. ಆಹಾರ ಕಿಟ್ ವಿತರಿಸುವುದಾಗಿ ಹೇಳಿದ್ದ ಸರಕಾರ, ಇತ್ತೀಚಿಗಿನ ಜಾಹೀರಾತಿನಲ್ಲಿ 21ಲಕ್ಷ ಕಿಟ್ ಖರೀದಿಸಲಾಗಿದೆ ಎಂದು ತಿಳಿಸಿದೆ. ಈ ಎಲ್ಲ ಖರೀದಿಯಲ್ಲಿ ಒಟ್ಟು 50-60 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಅವರು ಆರೋಪಿಸಿದರು.

2006ರಿಂದ 2021ರವರೆಗೆ ಮಂಡಳಿಯಲ್ಲಿ ಒಟ್ಟು 8400ಕೋಟಿ ರೂ. ಸೆಸ್ ಸಂಗ್ರಹವಾಗಿದ್ದು, ಇದರ ಬಡ್ಡಿ 2000ಕೋಟಿ ರೂ. ಸೇರಿದಂತೆ ಒಟ್ಟು 10200 ಕೋಟಿ ರೂ. ಹಣ ಮಂಡಳಿಯಲ್ಲಿ ಇದೆ. ಇದು ನಿರ್ಮಾಣ ಮಾಲಕರು ಮಂಡಳಿಗೆ ನೀಡಿದ ಹಣವೇ ಹೊರತು ಸರಕಾರದಲ್ಲ. ಇಡೀ ದೇಶದಲ್ಲಿ ಒಟ್ಟು 30 ಮಂಡಳಿಗಳಿದ್ದು, ಇದರಲ್ಲಿ ಸುಮಾರು 90ಸಾವಿರ ಕೋಟಿ ರೂ. ಹಣ ಸಂಗ್ರಹವಾಗಿದೆ. ಈ ಹಣದ ಮೇಲೆ ಸರಕಾರ ಕಣು್ಣ ಹಾಕಿದೆ ಎಂದು ಅವರು ಟೀಕಿಸಿದರು.

ರಾಜ್ಯಮಟ್ಟದ ಸಭೆ ನಿರ್ಧಾರ

ಮಂಡಳಿ ಇತ್ತೀಚೆಗೆ 2668.90ಕೋಟಿ ಹಣವನ್ನು 21-22ನೆ ಸಾಲಿನಲ್ಲಿ ಖರ್ಚು ಮಾಡುವ ತೀರ್ಮಾನ ಕೈಗೊಂಡಿದ್ದು, ಇದರಲ್ಲಿ ನೇರ ಹಣ ವರ್ಗಾ ವಣೆಗಿಂತ ಹೆಚ್ಚಾಗಿ ವಿವಿಧ ಸ್ವರೂಪದ ಸಾಮಾಗ್ರಿಗಳ ಖರೀದಿ ಹಾಗೂ ಕಟ್ಟಡ ಕಾಮಗಾರಿಳನ್ನು ನಡೆಸಲು ಉದ್ದೇಶಿಸಲಾಗಿದೆ. ಇದರಿಂದ ಕೋಟ್ಯಂತರ ರೂ. ಭ್ರಷ್ಟಾಚಾರ ನಡೆಯುವ ಸಾಧ್ಯತೆಗಳಿವೆ. ಈ ನಿಟ್ಟಿನಲ್ಲಿ ಮಧ್ಯಪ್ರವೇಶಿಸುವಂತೆ ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರು ಹಾಗೂ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿಯನ್ನು ಭೇಟಿ ಮಾಡಲು ಸಭೆಯಲ್ಲಿ ನಿರ್ಧರಿಸಲಾಗಿದೆ ಎಂದು ಅವರು ಹೇಳಿದರು.

ಸಿಎಂ, ಕಾರ್ಮಿಕ ಸಚಿವರಿಗೆ, ಕಾನೂನು ಸೇವಾ ಪ್ರಾಧಿಕಾರದ ಮುಖ್ಯಸ್ಥರಿಗೆ, ಮಂಡಳಿ ಕಾರ್ಯದರ್ಶಿಗೆ ಒಂದು ಲಕ್ಷ ಅಂಚೆ ಕಾರ್ಡ್‌ಗಳ ಚಳವಳಿ ಜು.27ರಿಂದ ಆರಂಭಗೊಂಡಿದ್ದು, ಕೇಂದ್ರ ಸರಕಾರದ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯಕ್ಕೆ ಅದರ ನಿರ್ದೇಶನ ಉಲ್ಲಂಘನೆ ಕುರಿತು ದೂರು ಸಲ್ಲಿಸಲು ನಿರ್ಧರಿಸಲಾಗಿದೆ ಎಂದು ಮಹಾಂತೇಶ ತಿಳಿಸಿದರು.

ಪ್ರತಿಕಾಗೋಷ್ಠಿಯಲ್ಲಿ ಉಡುಪಿ ಜಿಲ್ಲಾ ಕಟ್ಟಡ ಕಾರ್ಮಿಕ ಸಂಘದ ಅಧ್ಯಕ್ಷ ಶೇಖರ ಬಂಗೇರ, ಕೋಶಾಧಿಕಾರಿ ಶಶಿಧರ ಗೊಲ್ಲ, ಉಪಾಧ್ಯಕ್ಷ ಸುಭಾಶ್ ನಾಯ್ಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News