ಮಲ್ಪೆ ಮೀನುಗಾರರಿಗೆ ಆರೋಗ್ಯ ತಪಾಸಣೆ, ಮಾಹಿತಿ ಶಿಬಿರ

Update: 2021-08-02 12:51 GMT

ಮಲ್ಪೆ, ಆ.2: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಉಡುಪಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಉಡುಪಿ ರಾಷ್ಟ್ರೀಯ ಆರೋಗ್ಯ ಅಭಿಯಾನ, ಜಿಲ್ಲಾ ಸರ್ವೇಕ್ಷಣಾ ಘಟಕ, ಉಡುಪಿ ಜಿಲ್ಲಾ ತಂಬಾಕು ನಿಯಂತ್ರಣ, ಮಲ್ಪೆ ಮೀನುಗಾರಿಕೆ ಇಲಾಖೆ ಮತ್ತು ಮೀನುಗಾರರ ಸಂಘದ ಸಂಯುಕ್ತ ಆಶ್ರಯದಲ್ಲಿ ಮೀನುಗಾರರಿಗೆ ಆರೋಗ್ಯ ತಪಾಸಣೆ ಮತ್ತು ಮಾಹಿತಿ ಶಿಬಿರವನ್ನು ಸೋಮವಾರ ಮಲ್ಪೆ ಮೀನುಗಾರರ ಸಂಘದ ಸಮುದಾಯ ಭವನದಲ್ಲಿ ಏರ್ಪಡಿಸಲಾಗಿತ್ತು.

ಮುಖ್ಯ ಅತಿಥಿಯಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ನಾಗಭೂಷಣ್ ಉಡುಪ ಮಾತನಾಡಿ, ಆರೋಗ್ಯದ ಬಗ್ಗೆ ಕೇವಲ ಎಚ್ಚರ ವಹಿಸಿದರೆ ಸಾಲದು. ಆದರ ಬಗ್ಗೆ ಪೂರ್ಣ ಮಾಹಿತಿಯೂ ನಮ್ಮಲ್ಲಿ ಇರಬೇಕು. ಮಲ್ಪೆ ಬಂದರನ್ನು ವ್ಯಸನ ಮುಕ್ತ ಬಂದರನ್ನಾಗಿ ಮಾಡುವುದು ಮತ್ತು ಈ ಬಗ್ಗೆ ಮೀನುಗಾರರಲ್ಲಿ ಜನಜಾಗೃತಿ ಮೂಡಿಸುವುದು ಇಲಾಖೆಯ ಮೂಲ ಉದ್ದೇಶವಾಗಿದೆ ಎಂದು ತಿಳಿಸಿದರು.

ಶಿಬಿರವನ್ನು ಮಲ್ಪೆ ಮೀನುಗಾರ ಸಂಘದ ಅಧ್ಯಕ್ಷ ಕೃಷ್ಣ ಎಸ್. ಸುವರ್ಣ ಉದ್ಘಾಟಿಸಿದರು. ಶಾಸಕ ಕೆ.ರಘುಪತಿ ಭಟ್, ಮೀನುಗಾರಿಕೆ ಇಲಾಖೆಯ ಉಪನಿರ್ದೇಶಕ ಗಣೇಶ್ ಕೆ., ಸಹಾಯಕ ನಿರ್ದೇಶಕಿ ಸುಷ್ಮಾ, ಹಿರಿಯ ಸಹಾಯಕ ನಿರ್ದೇಶಕ ಶಿವಕುಮಾರ್, ಮಣಿಪಾಲ ಆಸ್ಪತ್ರೆ ವೈದ್ಯಾಧಿ ಕಾರಿ ಡಾ.ಮುರಳೀಧರ ಕುಲಕರ್ಣಿ, ಡಾ.ಅಖಿಲ, ಮಲ್ಪೆ ಮೀನುಗಾರ ಸಂಘದ ಉಪಾಧ್ಯಕ್ಷರಾದ ರಮೇಶ್ ಕೋಟ್ಯಾನ್, ವಿಠಲ ಕರ್ಕೇರ, ನಾಗರಾಜ್ ಬಿ. ಕುಂದರ್, ಪ್ರಧಾನ ಕಾರ್ಯದರ್ಶಿ ಸುಭಾಸ್ ಮೆಂಡನ್ ಪಾಲ್ಗೊಂಡಿದ್ದರು.

ತಾಲೂಕು ಆರೋಗ್ಯ ಅಧಿಕಾರಿ ಡಾ.ನಾಗರತ್ನ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ವಂದಿಸಿದರು. ಶಿಬಿರದಲ್ಲಿ ತಂಬಾಕು, ಮದ್ಯಪಾನ, ಮಧುಮೇಹ, ರಕ್ತದೊತ್ತಡ, ಮಲೇರಿಯಾ, ಡೆಂಗ್ಯೂ, ಕ್ಷಯರೋಗ, ಮಾನಸಿಕ ಆರೋಗ್ಯಗಳ ತಪಾಸಣೆಯನ್ನು ನಡೆಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News