'ಮಾನವೀಯ ಮೌಲ್ಯ ಜಾಗೃತಿಗೆ ಜ್ಞಾನ ಭಿಕ್ಷಾ ಪಾದಯಾತ್ರೆ’ 12 ಸಾವಿರ ಕಿ.ಮೀ. ಕಾಲ್ನಡಿಗೆ ಗುರಿ

Update: 2021-08-02 16:29 GMT

ಮಂಗಳೂರು, ಆ.2: ವ್ಯಕ್ತಿಯಲ್ಲಿರಬೇಕಾದ ಸ್ನೇಹ, ಸಂಬಂಧ, ಸಂಸ್ಕಾರ, ಸ್ವಾತಂತ್ರ, ಕರುಣೆ, ಸಭ್ಯತೆ ಇವೆಲ್ಲ ಇಂದು ಕೂಡ ಸಮಾಜದಲ್ಲಿವೆ. ಆದರೆ ಪ್ರಸ್ತುತ ದಿನಮಾನಗಳಲ್ಲಿ ಇವೆಲ್ಲ ವಾಣಿಜ್ಯ ರೂಪ ತಳೆದಿವೆ. ಇಂತಹ ಸಮಯದಲ್ಲಿ ಮಾನವೀಯ ಮೌಲ್ಯಗಳ ಪುನರುತ್ಥಾನಕ್ಕಾಗಿ ರಾಜ್ಯದ ಉದ್ದಗಲಕ್ಕೂ ಪಾದಯಾತ್ರೆ ನಡೆಯುತ್ತಿದೆ. ಈ ವಿಭಿನ್ನ ಪಾದಯಾತ್ರೆಯಲ್ಲಿರುವುದು ಏಕ ಮಾತ್ರ ಪುರುಷ 53ರ ಹರೆಯದ ವಿವೇಕಾನಂದ ಎಚ್.ಕೆ.

ಹೌದು. ಸಮಾಜದಲ್ಲಿ ಮಾನವೀಯ ವೌಲ್ಯಗಳಿಗೆ ಪೆಟ್ಟು ಬೀಳುತ್ತಿದೆ. ಇಂತಹ ಪ್ರತಿಕೂಲ ಪರಿಸ್ಥಿತಿಯಲ್ಲಿ ಮೌಲ್ಯಗಳನ್ನು ಉಳಿಸಿ, ಬೆಳೆಸುವ ಅಗತ್ಯವಿದೆ ಎಂದು ಸಾರುತ್ತಾ ಹೊರಟಿದ್ದಾರೆ. ತಾವು ನೋಡಿದ, ಕೇಳಿದ ವಿಚಾರವನ್ನು ಅರಿತುಕೊಳ್ಳುತ್ತಾ ರಾಜ್ಯದ 200ಕ್ಕೂ ಹೆಚ್ಚು ತಾಲೂಕುಗಳನ್ನು ಕಾಲ್ನಡಿಗೆಯಲ್ಲೇ ತಲುಪಿದ ಮಹಾನ್ ವ್ಯಕ್ತಿ ವಿವೇಕಾನಂದ.

ಈ ಬಗ್ಗೆ ‘ವಾರ್ತಾಭಾರತಿ’ ಜೊತೆಗೆ ಮಾತನಾಡಿದ ವಿವೇಕಾನಂದ ಎಚ್.ಕೆ., ಪ್ರಕೃತಿ, ಆಹಾರ, ಉಡುಪು, ಜನರೊಂದಿಗಿನ ಸಂವಾದ ಹೀಗೆ ಜ್ಞಾನವನ್ನು ಭಿಕ್ಷಾ ರೂಪದಲ್ಲಿ ಸ್ವೀಕರಿಸುತ್ತಾ ಹೋಗುವುದು ಪಾದಯಾತ್ರೆಯ ಉದ್ದೇಶವಾಗಿದೆ. ಮಾನವೀಯ ವೌಲ್ಯಗಳ ಪುನರುತ್ಥಾನಕ್ಕಾಗಿ 8,300 ಕಿ.ಮೀ. ಕ್ರಮಿಸಿದ್ದೇನೆ. ಪಾದಯಾತ್ರೆ ಪೂರ್ಣಗೊಳ್ಳಲು 12,000 ಕಿ.ಮೀ. ಪ್ರಯಾಣ ಮಾಡಬೇಕಾದ ಗುರಿ ಹೊಂದಿದ್ದೇನೆ ಎಂದು ಮಾಹಿತಿ ನೀಡಿದರು.

ಪಾದಯಾತ್ರೆ ಆರಂಭಗೊಂಡು 275 ದಿನಗಳು ಪೂರೈಸಿವೆ. ದ.ಕ. ಜಿಲ್ಲೆಯ ಪ್ರವೇಶದೊಂದಿಗೆ 20 ಜಿಲ್ಲೆಗಳ ಕಾಲ್ನಡಿಗೆ ಪೂರ್ಣ ಗೊಂಡಂತಾಗಿದೆ. ಒಟ್ಟು ಪ್ರಯಾಣದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರನ್ನು ಭೇಟಿಯಾಗಿದ್ದೇನೆ. ಎಲ್ಲವನ್ನೂ ಹತ್ತಿರದಿಂದ ವೀಕ್ಷಿಸುವ, ಅಧ್ಯಯನ ಮಾಡುತ್ತಿದ್ದೇನೆ ಎಂದು ಹೇಳಿದರು.

ಶಾಲಾ-ಕಾಲೇಜು, ಮಠ-ಮಂದಿರ, ಸಂಘ-ಸಂಸ್ಥೆಗಳು, ಪತ್ರಿಕಾಗೋಷ್ಠಿ, ಆಸ್ಪತ್ರೆ, ಪೊಲೀಸ್ ಠಾಣೆಗಳು, ಹಾವೇರಿ ಸೆಂಟ್ರಲ್ ಜೈಲು, ಅಡ್ವೊಕೇಟ್ ಕ್ಲಬ್‌ಗಳು ಸಹಿತ ವಿವಿಧೆಡೆ ಸಾವಿರಕ್ಕೂ ಹೆಚ್ಚು ಸಂವಾದ ಕಾರ್ಯಕ್ರಮಗಳನ್ನು ನಡೆಸಿದ್ದೇನೆ. ಇಲ್ಲಿ ಮಾನವೀಯ ಮೌಲ್ಯಗಳ ಬಗ್ಗೆ ಚರ್ಚೆ ನಡೆಸುತ್ತಾ ಇದ್ದೇನೆ ಎನ್ನುತ್ತಾರೆ ಅವರು.

ಸಮಾಜದಲ್ಲಿ ತಂತ್ರಜ್ಞಾನ ಸಹಿತ ಎಲ್ಲ ಬದಲಾವಣೆಗಳು ನಡೆದಿವೆ. ಆದರೆ, ಯುವಜನರಲ್ಲಿ ವಿಭಿನ್ನ ಆಲೋಚನೆಗಳು ಮೂಡುತ್ತಿವೆ. ಪ್ರೀತಿ, ಸ್ನೇಹ, ವ್ಯವಹಾರವನ್ನು ಒಂದೇ ಸಮಯದಲ್ಲಿ ನಿರ್ವಹಿಸುತ್ತಿದ್ದಾರೆ. ಇದರಿಂದ ಯುವಜನತೆ ಹೊರಬರಬೇಕು. ಜ್ಞಾನವನ್ನು ಪಡೆದುಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News