ಕೋವಿಡ್-ಲಾಕ್‌ಡೌನ್ ಅವಧಿಯಲ್ಲಿ ಭಾಷಾ ಅಕಾಡಮಿಗಳ ಅಧ್ಯಕ್ಷರಿಂದ ಪ್ರಯಾಣ ಭತ್ತೆ ಸ್ವೀಕಾರ

Update: 2021-08-02 18:15 GMT
ದಯಾನಂದ ಕತ್ತಲಸಾರ್, ಜಗದೀಶ್ ಪೈ, ರಹೀಮ್ ಉಚ್ಚಿಲ್

ಮಂಗಳೂರು, ಆ. 2: ಕೋವಿಡ್-19 ಹಿನ್ನೆಲೆಯಲ್ಲಿ 2020ರ ಎಪ್ರಿಲ್ ಮತ್ತು ಮೇ ತಿಂಗಳಲ್ಲಿ ರಾಷ್ಟ್ರವ್ಯಾಪಿ ಲಾಕ್‌ಡೌನ್‌ನಿಂದ ದೇಶಕ್ಕೆ ದೇಶವೇ ತತ್ತರಿಸಿದ್ದರೆ, ಕರಾವಳಿಯ ಮೂರು ಭಾಷಾ ಅಕಾಡಮಿಗಳ ಅಧ್ಯಕ್ಷರು ಪ್ರಯಾಣ ಭತ್ತೆ ಸ್ವೀಕರಿಸಿರುವ ಅಂಶವನ್ನು ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ, ಸಾಹಿತಿ ಡಾ.ಅರವಿಂದ ಚಂದ್ರಕಾಂತ ಶ್ಯಾನಭಾಗ ಮಾಹಿತಿ ಹಕ್ಕು ಕಾಯ್ದೆಯಡಿ ಬೆಳಕಿಗೆ ತಂದಿದ್ದಾರೆ.

ಲಾಕ್‌ಡೌನ್ ವೇಳೆ ಅಕಾಡಮಿಗಳಿಗೆ ಯಾವುದೇ ಕಾರ್ಯಕ್ರಮ ನಡೆಸಲು ಅನುಮತಿ ಇರಲಿಲ್ಲ, ಕಚೇರಿ ತೆರೆಯಲೂ ಅವಕಾಶವಿರಲಿಲ್ಲ. ವಾಹನಗಳ ಓಡಾಟಕ್ಕೂ ನಿರ್ಬಂಧ ವಿಧಿಸಲಾಗಿತ್ತು. ಆದರೆ ತುಳು, ಬ್ಯಾರಿ, ಕೊಂಕಣಿ ಅಕಾಡಮಿಗಳ ಅಧ್ಯಕ್ಷರು ಮನೆಯಲ್ಲೇ ಕುಳಿತು ಸಾಹಿತ್ಯಿಕ ಕಾರ್ಯಕ್ರಮಗಳ ಹೆಸರಿನಲ್ಲಿ ಲಕ್ಷಗಟ್ಟಲೆ ಮೊತ್ತದ ಪ್ರಯಾಣ ಭತ್ತೆಯನ್ನು ಪಡೆದಿದ್ದಾರೆ ಎಂದು ಅವರು ದಾಖಲೆ ಸಮೇತ ಮಾಹಿತಿ ಹೊರಗೆಡಹಿದ್ದಾರೆ.

ಈ ಅವಧಿಯಲ್ಲಿ ಹೆಚ್ಚಾಗಿ ವೆಬಿನಾರ್, ಫೇಸ್‌ಬುಕ್ ಲೈವ್ ಮುಂತಾದ ಸಾಮಾಜಿಕ ಜಾಲತಾಣಗಳಲ್ಲಿ ಸಾಹಿತ್ಯ ಸಂವಾದಗಳು ನಡೆಸಲಾಗಿದೆ. ಹೀಗಿರುವಾಗ ಈ ಅಕಾಡಮಿಗಳ ಅಧ್ಯಕ್ಷರು ಎಲ್ಲೂ ಪ್ರಯಾಣಿಸದೆ ತಿಂಗಳಿಗೆ ಬರೋಬ್ಬರಿ 30,000 ರೂ.ಗಳಂತೆ ಎರಡೂವರೆ ತಿಂಗಳಿಗೆ 75,000 ರೂ. ವೆಚ್ಚವನ್ನು ತೋರಿಸಿ ವಿವಿಧ ಟ್ರಾವೆಲ್ಸ್ ಸಂಸ್ಥೆಗಳ ಹೆಸರಿನಲ್ಲಿ ಪ್ರಯಾಣ ಭತ್ತೆಯನ್ನು ಅಕ್ರಮವಾಗಿ ಪಡೆದಿದ್ದಾರೆ ಎಂದು ಡಾ.ಅರವಿಂದ ಶ್ಯಾನಭಾಗ ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಕರ್ನಾಟಕದ ವಿವಿಧ ಭಾಷೆ, ಸಾಹಿತ್ಯ, ಸಂಸ್ಕೃತಿ, ಕಲೆಗಳಿಗೆ ಸಂಬಂಧಿಸಿದಂತೆ ಸಾಹಿತಿ, ವಿದ್ವಾಂಸ ಕಲಾವಿದರನ್ನು ಗುರುತಿಸಿ ಅವರಿಂದ ಪುಸ್ತಕಗಳನ್ನು ಪ್ರಕಟಿಸುವುದು, ಕಲಾ ಪ್ರದರ್ಶನಕ್ಕೆ ಅವಕಾಶ ಕಲ್ಪಿಸುವುದು, ಸಾಧಕರನ್ನು ಗುರುತಿಸಿ ಸನ್ಮಾನಿಸುವುದು ಇತ್ಯಾದಿಯು ಅಕಾಡಮಿ ಸ್ಥಾಪನೆಯ ಉದ್ದೇಶವಾಗಿದೆ. ಆದರೆ ಇತ್ತೀಚಿನ ಕೆಲವು ವರ್ಷಗಳಿಂದ ಅಕಾಡಮಿಯ ಸ್ಥಾಪನೆಯ ಉದ್ದೇಶಗಳೇ ಈಡೇರುತ್ತಿಲ್ಲ ಎಂದು ಆರೋಪಿಸಿರುವ ಡಾ.ಅರವಿಂದ ಶ್ಯಾನಭಾಗ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ 15ಕ್ಕೂ ಅಧಿಕ ಅಕಾಡಮಿ, ಪ್ರಾಧಿಕಾರಗಳ ಅಧ್ಯಕ್ಷರುಗಳಿಗೆ ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸುವ ಸಲುವಾಗಿ ಸ್ಥಳೀಯ ಪ್ರಯಾಣ ವೆಚ್ಚವೆಂದು ಮಾಸಿಕ 30,000 ರೂ., ದೂರವಾಣಿ ಬಾಬ್ತು 3,000 ರೂ., ಮಾಸಿಕ ಗೌರವ ಸಂಭಾವನೆ 25,000 ರೂ. ಪಾವತಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ಆದರೆ ಇಲಾಖೆಯ ಎಲ್ಲಾ ಮಾರ್ಗಸೂಚಿ ನಿಯಮಗಳನ್ನು ಗಾಳಿಗೆ ತೂರಿರುವ ಅಕಾಡಮಿಯ ಅಧ್ಯಕ್ಷರು ಬೈಲಾ ಗಳನ್ನು ತಮಗೆ ಬೇಕಾದಂತೆ ಬದಲಾ ಯಿಸಿಕೊಳ್ಳುತ್ತಿದ್ದಾರೆ. ಸಾಹಿತಿ, ಕಲಾವಿ ದರು, ವಿದ್ವಾಂಸರು ಇರಬೇಕಾದ ವೇದಿಕೆಗಳು ರಾಜಕೀಯ ಪಕ್ಷಗಳ ಮತ್ತು ತಮಗೆ ಅಧಿಕಾರ ಸಿಗಲು ಕಾರಣರಾದ ಮುಖಂಡರ ಗುಣ ಗಾನಕ್ಕೆ ಮೀಸಲಿಡಲಾಗುತ್ತದೆ. ಬೃಹತ್ ಶಾಮಿಯಾನ, ಪೆಂಡಾಲುಗಳು, ಅದ್ದೂರಿ ಊಟೋಪಚಾರಗಳಿಂದ ಕೆಲವು ಕಾರ್ಯಕ್ರಮಗಳು ಸಮಾವೇಶಗಳಂತಾಗಿ ದುಂದುವೆಚ್ಚಕ್ಕೆ ಕಾರಣವಾಗುತ್ತಿದೆ. ಕೊಂಕಣಿ, ತುಳು, ಬ್ಯಾರಿ ಭಾಷೆಯ ಸಾಹಿತ್ಯ ಹಾಗೂ ಸಂಸ್ಕೃತಿಯನ್ನು ರಕ್ಷಣೆ ಮಾಡಬೇಕಿದ್ದ ಅಕಾಡಮಿಗಳು ಭಾರೀ ವೆಚ್ಚದ ಸಮ್ಮೇಳನಗಳನ್ನು ಆಯೋಜಿಸುವ ಮೂಲಕ ಸರಕಾರದ ಹಣವನ್ನು ಪೋಲು ಮಾಡುತ್ತಿದೆ ಎಂದು ಡಾ.ಅರವಿಂದ ಶ್ಯಾನಭಾಗ ಆರೋಪಿಸಿದ್ದಾರೆ.

ಈ ಹಿಂದೆ ಕಾರ್ಕಳ ಮತ್ತು ಮಣಿಪಾಲದಲ್ಲಿ ಕೊಂಕಣಿ ಸಾಹಿತ್ಯ ಅಕಾಡಮಿಯು ಆಯೋಜಿಸಿದ್ದ ಎರಡು ದಿನಗಳ ಕಾರ್ಯಕ್ರಮದ ಖರ್ಚುವೆಚ್ಚ 30,36,728 ರೂ. ಆಗಿರುವುದು ಹಣ ಪೋಲು ಮಾಡುತ್ತಿರುವುದಕ್ಕೆ ಸಾಕ್ಷಿಯಾಗಬೇಕಿದೆ. ಕೊಂಕಣಿ ಅಕಾಡಮಿಯ ಅಧ್ಯಕ್ಷರ ಪ್ರಯಾಣ ಭತ್ತೆಯು ಒಂದೂವರೆ ವರ್ಷದಲ್ಲಿ 6,38,880 ರೂ. ಆಗಿದೆ. ಬ್ಯಾರಿ ಸಾಹಿತ್ಯ ಅಕಾಡಮಿಯು ಬಹುಭಾಷಾ ಸಂಗಮದ ಹೆಸರಿನಲ್ಲಿ ಇತ್ತೀಚೆಗೆ ಕಾರವಾರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವೂ ದುಂದುವೆಚ್ಚದ ಪಟ್ಟಿಗೆ ಸೇರಿಕೊಂಡಿದೆ ಎಂದು ಡಾ. ಅರವಿಂದ ಶ್ಯಾನಭಾಗ ತಿಳಿಸಿದ್ದಾರೆ.

2020ರ ಎಪ್ರಿಲ್/ಮೇ ತಿಂಗಳಲ್ಲಿ ಮನೆಯಲ್ಲೇ ಕುಳಿತ ತುಳು ಅಕಾಡಮಿಯ ಅಧ್ಯಕ್ಷ ದಯಾನಂದ ಕತ್ತಲಸಾರ್ ಶ್ರೇಯಾನ್ ಎಂಟರ್‌ಪ್ರೈಸಸ್ ಹೆಸರಿನಲ್ಲಿ, ಕೊಂಕಣಿ ಅಕಾಡಮಿಯ ಅಧ್ಯಕ್ಷ ಡಾ. ಜಗದೀಶ ಪೈ ಸಾನು ಟ್ರಾವೆಲ್ಸ್ ಹೆಸರಿನಲ್ಲಿ, ಬ್ಯಾರಿ ಅಕಾಡಮಿಯ ಅಧ್ಯಕ್ಷ ರಹೀಂ ಉಚ್ಚಿಲ ಅವರು ಮುಹಮ್ಮದ್ ಹಕೀಂ ಹೆಸರಿನಲ್ಲಿ ತಿಂಗಳಿಗೆ 30 ಸಾವಿರ ರೂ.ನಂತೆ ಪ್ರಯಾಣ ಭತ್ತೆ ಸ್ವೀಕರಿಸಿ ಸರಕಾರದ ಬೊಕ್ಕಸ ಖಾಲಿ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಬ್ಯಾರಿ ಅಕಾಡಮಿ ಅಧ್ಯಕ್ಷ ರಹೀಂ ಉಚ್ಚಿಲ 2020ರ ಮಾರ್ಚ್/ಎಪ್ರಿಲ್/ಮೇ ತಿಂಗಳ ಊಟೋಪಚಾರದ ಬಾಬ್ತು 3,168 ರೂ. ಪಡೆದಿದ್ದಾರೆ. ವಿಚಿತ್ರವೆಂದರೆ ಈ ಅವಧಿಯಲ್ಲಿ ಹೊಟೇಲ್- ರೆಸ್ಟೋರೆಂಟ್ ಮುಚ್ಚಿದ್ದರೂ ಇವರಿಗೆ ಊಟ ನೀಡಿದವರು ಯಾರು? ಎಂದು ಡಾ.ಅರವಿಂದ ಶ್ಯಾನಭಾಗ ಪ್ರಶ್ನಿಸಿದ್ದಾರೆ.

ಲಾಕ್‌ಡೌನ್ ಅವಧಿಯಲ್ಲಿ ಪ್ರವಾಸ ಮಾಡಿದ್ದೇ ಆದಲ್ಲಿ ಈ ಅಕಾಡಮಿಗಳ ಅಧ್ಯಕ್ಷರು ದಾಖಲೆಗಳನ್ನು ಬರಂಗಪಡಿಸಲಿ. ಇಲ್ಲವಾದರೆ ಅಕ್ರಮ ವಾಗಿ ಪಡೆದ ಹಣವನ್ನು ಸರಕಾರದ ಖಜಾನೆಗೆ ಮರುಪಾವತಿಸಲಿ ಎಂದು ಡಾ.ಅರವಿಂದ ಶ್ಯಾನಭಾಗ ಸವಾಲು ಹಾಕಿದ್ದಾರೆ. ಅಲ್ಲದೆ ಈ ಬಗ್ಗೆ ಸಮಗ್ರ ತನಿಖೆಯಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.

ಆರೋಪ ಸಾಬೀತಾದರೆ ರಾಜೀನಾಮೆಗೆ ಸಿದ್ಧ- ರಹೀಮ್ ಉಚ್ಚಿಲ್ 

ಕೊರೋನ ಸಂದರ್ಭದಲ್ಲಿ ಬ್ಯಾರಿ ಅಕಾಡಮಿಯ ಹಣವನ್ನು ದುಂದುವೆಚ್ಚ ಮಾಡಿರುವ ಆರೋಪ ಸಾಬೀತಾದಲ್ಲಿ ರಾಜೀನಾಮೆ ನೀಡಲು ಸಿದ್ಧ ಎಂದು ಬ್ಯಾರಿ ಅಕಾಡಮಿ ಅಧ್ಯಕ್ಷ ರಹೀಮ್ ಉಚ್ಚಿಲ್ ಹೇಳಿದ್ದಾರೆ.

ಆರೋಪ ಕೇಳಿ ಬಂದಿರುವ ಬೆನ್ನಲ್ಲೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕರು, ಆಯುಕ್ತರಿಗೆ ನನ್ನ ವಿರುದ್ಧವೇ ಆರೋಪಗಳ ತನಿಖೆ ನಡೆಸುವಂತೆ ಪತ್ರ ಬರೆಯುವುದಾಗಿ ಅವರು ತಿಳಿಸಿದ್ದಾರೆ. ಕೋವಿಡ್ ಸಮಯದಲ್ಲಿ ಮುಖ್ಯಮಂತ್ರಿ, ಇಲಾಖೆಯ ನಿರ್ದೇಶಕರು, ಸಚಿವರ ಸಭೆಗಳ ಆಹ್ವಾನ ಸ್ವೀಕರಿಸಿಯೇ ಸಭೆಗೆ ತೆರಳಿದ್ದೇನೆ. ಪ್ರತಿಯೊಂದು ಕಾರ್ಯಕ್ರಮ, ಸಭೆಗಳ, ಪ್ರಯಾಣ ವೆಚ್ಚ ಸಹಿತ ಎಲ್ಲದಕ್ಕೂ ನನ್ನಲ್ಲಿ ದಾಖಲೆಗಳಿವೆ ಎಂದವರು ಹೇಳಿದರು.

ಮುಖ್ಯಮಂತ್ರಿ ನೇತೃತ್ವದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಆಯ್ಕೆ ಸಮಿತಿಯಲ್ಲಿ ಕರಾವಳಿಯಿಂದ ಒಬ್ಬನೇ ಸದಸ್ಯನಿದ್ದೇನೆ. ಮುಖ್ಯಮಂತ್ರಿಯ ಆಮಂತ್ರಣದ ಮೇರೆಗೆ ಎರಡು ಸಭೆಗೆ ಹಾಜರಾಗಿದ್ದೇನೆ. ಈ ಸಂದರ್ಭ ಕೋವಿಡ್ ಇದ್ದರೂ ನಿಯಮಾನುಸಾರು ಪ್ರಯಾಣಿಸಲು ಅನುಮತಿ ಇರುತ್ತದೆ. ಎಲ್ಲದಕ್ಕೂ ನನ್ನಲ್ಲಿ ದಾಖಲೆಗಳಿವೆ ಎಂದರು.

'ಅಕಾಡಮಿ ಹಣ ಸ್ವಂತಕ್ಕೆ ಬಳಸಿಲ್ಲ'

ರಾಜ್ಯ ಸರಕಾರದ ಆದೇಶದಂತೆ ಕಲಾವಿದರಿಗೆ ಸವಲತ್ತು ಒದಗಿಸುವ ಅಗತ್ಯವಿತ್ತು. ಅಂತಹ ಸೌಲಭ್ಯಗಳನ್ನು ಫಲಾನುಭವಿಗಳಿಗೆ ತಲುಪಿಸಿ ದ್ದೇವೆ. ಕೊರೋನ ಸಂಕಷ್ಟದಲ್ಲಿ 1,500 ಮಂದಿಗೆ ರೇಶನ್ ಕಿಟ್ ಹಸ್ತಾಂತ ರಿಸಲಾಗಿದೆ. ಇದೂ ಕೂಡ ದಾನಿಗಳಿಂದ ಪಡೆದ ಹಣವಾಗಿದೆ. ಇದಕ್ಕೆ ಸಂಬಂಧಪಟ್ಟ ದಾಖಲೆ, ವೀಡಿ ಯೊಗಳು ಇವೆ. ಅಧ್ಯಕ್ಷನಾದ ಹಿನ್ನೆಲೆಯಲ್ಲಿ ಅಧ್ಯಕ್ಷರಿಗೆ ಬರುವ ಗೌರವಧನ ಪಡೆದಿದ್ದೇನೆಯೇ ವಿನಃ ಅಕಾಡಮಿಯ ನಯಾಪೈಸೆ ಕೂಡ ಸ್ವಂತಕ್ಕೆ ಬಳಸಿಲ್ಲ. ಯಾವುದೇ ತನಿಖೆಗೆ ಸಿದ್ಧನಿದ್ದೇನೆ ಎಂದು ದಯಾನಂದ ಕತ್ತಲಸಾರ್ ಹೇಳಿದ್ದಾರೆ.

'ಸರಕಾರದ ಮಟ್ಟದಲ್ಲಿ ತನಿಖೆ ಆಗುತ್ತಿದೆ'

ಅಕಾಡಮಿಗಳಲ್ಲಿ ಹಣ ಪೋಲಾಗಿರುವುದು, ಪ್ರಯಾಣ ವೆಚ್ಚದ ಹೆಸರಲ್ಲಿ ಹಣ ಲೂಟಿ ಎನ್ನಲಾದ ಪ್ರಕರಣವು ರಾಜ್ಯ ಸರಕಾರದ ಮಟ್ಟದಲ್ಲಿ ತನಿಖೆ ನಡೆಯುತ್ತಿದೆ. ಹಾಗಾಗಿ ಸದ್ಯಕ್ಕೆ ಯಾವುದೇ ಹೇಳಿಕೆಗಳನ್ನು ನೀಡಲು ಆಗುವುದಿಲ್ಲ ಎಂದು ಕೊಂಕಣಿ ಅಕಾಡಮಿಯ ಅಧ್ಯಕ್ಷ ಡಾ.ಜಗದೀಶ್ ಪೈ ತಿಳಿಸಿದ್ದಾರೆ.

ಎರಡು ದಶಕಗಳ ಹಿಂದೆಯೇ ಸರಕಾರ ಅಕಾಡಮಿಗಳ ಅಧ್ಯಕ್ಷರುಗಳಿಗೆ ದೂರವಾಣಿ ಬಾಬ್ತು 3,000 ರೂ. ಎಂದು ನಿಗದಿಗೊಳಿಸಿತ್ತು. ಈಗಲೂ ಅದೇ ಮೊತ್ತವನ್ನು ಇಲಾಖೆಯು ಪಡೆಯಲು ಅವಕಾಶ ಮಾಡಿಕೊಟ್ಟಿರುವುದು ಹಾಸ್ಯಾಸ್ಪದವಾಗಿದೆ. ಇಂದಿನ ಸ್ಪರ್ಧಾತ್ಮಕ ದೂರಸಂಪರ್ಕ ದರವು ಅನಿಯಮಿತವಾಗಿ ಹೊರಹೋಗುವ ಕರೆಯ ಸೌಲಭ್ಯದೊಂದಿಗೆ ತಿಂಗಳಿಗೆ 30 ಜಿ.ಬಿ.ಗಳಷ್ಟು ಡಾಟಾವನ್ನು 400 ರೂ.ಗಳಲ್ಲೇ ಒದಗಿಸುತ್ತಿರುವಾಗ ಈ ಎಲ್ಲ ಅಕಾಡಮಿಗಳ ಅಧ್ಯಕ್ಷರು 3,000 ರೂ. ದೂರವಾಣಿ ವೆಚ್ಚ ಪಡೆಯುತ್ತಿರುವುದು ಯಾಕೆ ? ಮಾಸಿಕ ಗೌರವ ಧನ, ಪ್ರಯಾಣ ಭತ್ತೆಯಲ್ಲದೆ ಐಬಿಗಳಲ್ಲಿ ತಂಗದೆ ಸ್ಟಾರ್ ಹೊಟೇಲುಗಳಲ್ಲಿ ಉಳಿದುಕೊಂಡು ಅಕಾಡಮಿಯ ಅನುದಾನಕ್ಕೂ ಹೊರೆಯಾಗುತ್ತಿದ್ದಾರೆ. ಅಕಾಡಮಿಗಳ ವಾರ್ಷಿಕ 1 ಕೋ.ರೂ. ಅನುದಾನದಲ್ಲಿ ಅಧ್ಯಕ್ಷರೇ ಅರ್ಧದಷ್ಟು ಹಣವನ್ನು ಖಾಲಿ ಮಾಡುವುದು ವಿಪರ್ಯಾಸ.

- ಡಾ.ಅರವಿಂದ ಚಂದ್ರಕಾಂತ ಶ್ಯಾನಭಾಗ, ಕೊಂಕಣಿ ಸಾಹಿತ್ಯ ಅಕಾಡಮಿಯ ಮಾಜಿ ಸದಸ್ಯ

ಕರ್ನಾಟಕ ಬಯಲಾಟ ಅಕಾಡಮಿಯ ಅಧ್ಯಕ್ಷರಾಗಿದ್ದ ಡಾ.ಸೊಲಬಕ್ಕನವರ (ಇತ್ತೀಚೆಗೆ ಕೋವಿಡ್‌ನಿಂದ ನಿಧನರಾಗಿದ್ದಾರೆ) ಒಂದು ರೂ. ಕೂಡಾ ಆ ಅವಧಿಯಲ್ಲಿ ಪ್ರಯಾಣಭತ್ತೆ ಪಡೆಯದೆ ಆದರ್ಶ ಮೆರೆದಿದ್ದಾರೆ. ಅಲ್ಲದೆ 2020ರ ಎಪ್ರಿಲ್/ಮೇ ತಿಂಗಳ ಮಾಸಿಕ ಗೌರವಧನ (50,000 ರೂ.)ವನ್ನೂ ಅವರು ಪಡೆದಿಲ್ಲ ಎಂದು ಡಾ.ಅರವಿಂದ ಶಾನ್‌ಭಾಗ್ ಸ್ಪಷ್ಟಪಡಿಸಿದ್ದಾರೆ. ಸರಕಾರದ ಬೊಕ್ಕಸ ಖಾಲಿ ಮಾಡುತ್ತಿರುವ ಅಧ್ಯಕ್ಷರು ಡಾ.ಸೊಲಬಕ್ಕನವರ ರಿಂದ ಸ್ಫೂರ್ತಿ ಪಡೆಯಲಿ ಎಂದು ಡಾ.ಅರವಿಂದ ಶಾನ್‌ಭಾಗ್ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News