ಕೋವಿಡ್ ನೆಗೆಟಿವ್ ವರದಿ ಇಲ್ಲದೆ ಗಡಿ ಪ್ರವೇಶವಿಲ್ಲ : ಎಡಿಜಿಪಿ ಪ್ರತಾಪ್ ರೆಡ್ಡಿ ಸೂಚನೆ

Update: 2021-08-03 07:54 GMT

ಮಂಗಳೂರು, ಆ.3: ಕೇರಳದಲ್ಲಿ ಕೊರೋನ ಪ್ರಕರಣ ವ್ಯಾಪಕವಾಗಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ದ.ಕ. ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಮಂಗಳೂರು- ಕಾಸರಗೋಡು ಗಡಿ ಭಾಗ ತಲಪಾಡಿಯಲ್ಲಿ ಕಟ್ಟು ನಿಟ್ಟಿನ ಕೈಗೊಳ್ಳುವಂತೆ ಕಾನೂನು ಸುವ್ಯವಸ್ಥೆ ಎಡಿಜಿಪಿ ಪ್ರತಾಪ್ ರೆಡ್ಡಿ ಸೂಚನೆ ನೀಡಿದ್ದಾರೆ.

ತಲಪಾಡಿಗೆ ಇಂದು ಭೇಟಿ ನೀಡಿದ ಅವರು, ರಾಜ್ಯ ಸರಕಾರದ ಸೂಚನೆಯಂತೆ ಕೋವಿಡ್ ನೆಗೆಟಿವ್ ವರದಿ ಇಲ್ಲದೆ ರಾಜ್ಯದೊಳಗೆ ಪ್ರವೇಶ ನೀಡದಂತೆ ಕ್ರಮ ವಹಿಸುವಂತೆ ಅವರು ಈ ಸಂದರ್ಭ ಜಿಲ್ಲಾಧಿಕಾರಿ ಹಾಗೂ ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಕೇವಲ ತುರ್ತು ಭೇಟಿ ಹಾಗೂ ಕೇರಳ ಭಾಗದ ವಿದ್ಯಾರ್ಥಿಗಳು ಪರೀಕ್ಷಾ ಹಾಲ್ ಟಿಕೆಟ್ ತೋರಿಸಿದರೆ ಅವಕಾಶ ನೀಡಲಾಗುತ್ತದೆ. ಕಾಸರಗೋಡು ಭಾಗದಲ್ಲಿ ಕೊರೋನ ಸೋಂಕು ಹೆಚ್ಚಿರುವ ಹಿನ್ನೆಲೆಯಲ್ಲಿ ಈ ಬಿಗಿ ಕ್ರಮವನ್ನು ಕೈಗೊಳ್ಳಲಾಗುತ್ತಿದೆ. ಕೇರಳದಿಂದ ರೈಲು ಮಾರ್ಗವಾಗಿ ಬರುವರಿಗೆ ಪರೀಕ್ಷೆ ನಡೆಸಲಾಗುತ್ತಿದೆ. ಮಂಗಳೂರಿನ ಪುರಭವನದಲ್ಲಿ ಪರೀಕ್ಷಾ ಕೇಂದ್ರ ತೆರೆದಿರುವುದಾಗಿ ಪ್ರತಾಪ್ ರೆಡ್ಡಿ ಹೇಳಿದರು.

ಕಾಸರಗೋಡು ಡಿಸಿ, ಎಸ್ಪಿ ಜತೆ ಜಿಲ್ಲೆಯ ಅಧಿಕಾರಿಗಳು ಸಂಪರ್ಕದಲ್ಲಿದ್ದಾರೆ. ಹಾಗಾಗಿ ಉಭಯ ಜಿಲ್ಲೆಗಳ ನಡುವೆ ಯಾವುದೇ ಗೊಂದಲವಿಲ್ಲ ಎಂದು ಅವರು ಹೇಳಿದರು. ಗಡಿಯಲ್ಲಿ ಹೆಚ್ಚುವರಿ ಪೊಲೀಸ್ ಭದ್ರತೆ ಸೇರಿದಂತೆ ತಪಾಸಣೆ ಬಗ್ಗೆ ಅವರು ಈ ಸಂದರ್ಭ ಮಾಹಿತಿಯನ್ನು ಪಡೆದರು.

ಜಿಲ್ಲಾಧಿಕಾರಿ ಡಾ. ಕೆ.ವಿ. ರಾಜೇಂದ್ರ, ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್, ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೊನಾವಣೆ ಈ ಸಂದರ್ಭ ಉಪಸ್ಥಿತರಿದ್ದು ಮಾಹಿತಿ ನೀಡಿದರು.

ತಲಪಾಡಿ ಗಡಿ ಬಂದ್ ವಿರೋಧಿಸಿ ಕೇರಳಿಗರಿಂದ ಪ್ರತಿಭಟನೆ

ಎಡಿಜಿಪಿ ಪ್ರತಾಪ್ ರೆಡ್ಡಿ ಭೇಟಿ ವೇಳೆ, ಕೇರಳ ಭಾಗದ ರಸ್ತೆ ಬಂದ್ ಮಾಡಿ ಗಡಿಭಾಗದಲ್ಲಿ ಕೇರಳಿಗರು ಪ್ರತಿಭಟನೆ ನಡೆಸಿದರು.
ನೆಗೆಟಿವ್ ವರದಿ ಕಡ್ಡಾಯ ಆದೇಶನ್ನು ಹಿಂಪಡೆಯಬೇಕೆಂದು ಪ್ರತಿಭಟನಾಕಾರರು ಆಗ್ರಹಿಸಿದರು. ಕೇರಳಕ್ಕೆ ತೆರಳುವ ವಾಹನಗಳು ತಲಪಾಡಿ ಬಳಿ ಸಾಲುಗಟ್ಟಿ ನಿಂತಿವೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News