ಆ.23ರಂದು ದ.ಕ. ಯುವ ಕಾಂಗ್ರೆಸ್‌ನಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ

Update: 2021-08-03 16:07 GMT

ಮಂಗಳೂರು, ಆ.3: ದ.ಕ. ಜಿಲ್ಲಾ ಯುವ ಕಾಂಗ್ರೆಸ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿಯನ್ನು ಆ. 23ರಂದು ಆಚರಿಸಲು ನಿರ್ಧರಿಸಲಾಗಿದೆ. ಈ ಪ್ರಯುಕ್ತ ‘ಧಾರ್ಮಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸುಧಾರಣೆಯಲ್ಲಿ ನಾರಾಯ ಗುರುಗಳ ಚಿಂತನೆಯ ಪಾತ್ರ’ ಎಂಬ ವಿಷಯದಲ್ಲಿ ಜಿಲ್ಲಾ ಹಾಗೂ 16 ಬ್ಲಾಕ್ ಮಟ್ಟದಲ್ಲಿ ಪ್ರಬಂಧ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಲುಕ್ಮಾನ್ ಬಂಟ್ವಾಳ, 8ನೆ ತರಗತಿಯಿಂದ ಪಿಯುಸಿ, ದ್ವಿತೀಯ ಪಿಯುಸಿಯಿಂದ ಪದವೀಧರ, ಸ್ನಾತಕೋತ್ತರ ವಿದ್ಯಾರ್ಥಿಗಳಿಗೆ ಹಾಗೂ ಮುಕ್ತ ವಿಭಾಗ ಸೇರಿ ಮೂರುವಿಭಾಗಗಳಲ್ಲಿ ಸ್ಪರ್ಧೆ ನಡೆಯಿದೆ ಎಂದರು.

ಜಿಲ್ಲಾ ಹಾಗೂ ಪ್ರತಿ ಬ್ಲಾಕ್ ಮಟ್ಟದಲ್ಲಿಯೂ ಪ್ರತ್ಯೇಕವಾಗಿ ಪ್ರಥಮ ಹಾಗೂ ದ್ವಿತೀಯ ವಿಜೇತರಿಗೆ ನಗದು ಬಹುಮಾನದೊಂದಿಗೆ ಕಾರ್ಯಕ್ರಮ ದಂದು ರಾಷ್ಟ್ರ ಮಟ್ಟದ ನಾಯಕರ ಸಮ್ಮುಖದಲ್ಲಿ ಬಹುಮಾನ ವಿತರಿಸಲಾಗುವುದು. ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಸಂಬಂಧಿಸಿದ ಪುಸ್ತಕ ವನ್ನೂ ನೀಡಲಾಗುವುದು. ಪ್ರಬಂಧವು 500ರಿಂದ 600 ಪದಗಳಿಗೆ ಸೀಮಿತವಾಗಿರಬೇಕು ಎಂದು ಅವರು ಹೇಳಿದರು. ನಾರಾಯಣ ಗುರುಗಳ ಚಿಂತನೆಯಿಂದ ಪ್ರಭಾವಿತನಾಗಿ ತಾನು ಈ ಮಟ್ಟಕ್ಕೆ ಬೆಳೆದಿದ್ದು, ಅವರ ಜಯಂತಿ ಆಚರಣೆಯ ಮೂಲಕ ಯುವ ಪೀಳಿಗೆಗೆ ಅವರ ಆದರ್ಶ ಗಳನ್ನು ತಲುಪಿಸುವ ಉದ್ದೇಶದಿಂದ ವಿಜೃಂಭಣೆಯಿಂದ ಸಮಾರಂಭವನ್ನು ನಡೆಸಲು ತೀರ್ಮಾನಿಸಲಾಗಿದೆ. ನಾರಾಯಣಗುರುಗಳು ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿರದೆ ಮನುಕುಲಕ್ಕೆ ಆದರ್ಶವಾದವರು. ಅವರ ಚಿಂತನೆಗಳನ್ನು ಯುವ ಪೀಳಿಗೆಗೆ ತಲುಪಿಸುವುದು ನಮ್ಮೆಲ್ಲರ ಕರ್ತವ್ಯ ಎಂದು ಲುಕ್ಮಾನ್ ಬಂಟ್ವಾಳ ಹೇಳಿದರು.

ಕರ್ನಾಟಕ ರಾಜ್ಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಮನ್ನಾರ್ ಮನ್ನನ್ ಮಾತನಾಡಿ, ರಾಷ್ಟ್ರೀಯ ಯುವ ಕಾಂಗ್ರೆಸ್ ಸೂಚನೆ ಹಾಗೂ ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್ ನೇತೃತ್ವದಲ್ಲಿ ಜಿಲ್ಲೆಯಲ್ಲಿಯೂ ಯುವ ಕಾಂಗ್ರೆಸನ್ನು ಶಕ್ತಿಯುತವಾಗಿ ಸಂಘಟಿಸಲಾಗುವುದು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಸರ್ಫರಾಜ್, ರಮಾನಂದ ಪೂಜಾರಿ, ಸೌಹಾನ್, ನವೀದ್ ಅಖ್ತರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News