ದೋಷಪೂರಿತ ಪಿಎಂ-ಕೇರ್ಸ್ ವೆಂಟಿಲೇಟರ್ ಗಳ ಬಗ್ಗೆ ದೂರಿದ್ದ ವೈದ್ಯೆಯನ್ನು ವೈದ್ಯಕೀಯ ನಿರ್ಲಕ್ಷಕ್ಕಾಗಿ ಅಮಾನತು

Update: 2021-08-03 13:44 GMT
Photo: Twitter

ಕಾನ್ಪುರ,ಆ.3: ಪಿಎಂ-ಕೇರ್ಸ್ ನಿಧಿಯಡಿ ಒದಗಿಸಲಾಗಿದ್ದ ದೋಷಪೂರಿತ ವೆಂಟಿಲೇಟರ್ಗಳ ವಿರುದ್ಧ ಧ್ವನಿಯೆತ್ತಿದ್ದ ಇಲ್ಲಿಯ ಗಣೇಶ ಶಂಕರ ವಿದ್ಯಾರ್ಥಿ ಸ್ಮಾರಕ ಮೆಡಿಕಲ್ ಕಾಲೇಜ್ (ಜಿಎಸ್ವಿಎಂ)ನ ವೈದ್ಯೆಯೋರ್ವರನ್ನು ಉತ್ತರ ಪ್ರದೇಶ ಸರಕಾರವು ವೈದ್ಯಕೀಯ ನಿರ್ಲಕ್ಷದಿಂದ ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂಬ ಆರೋಪದಲ್ಲಿ ಸೇವೆಯಿಂದ ಅಮಾನತುಗೊಳಿಸಿದೆ.

ಜಿಎಸ್ವಿಎಮ್ನ ಮಕ್ಕಳ ತೀವ್ರ ನಿಗಾ ಘಟಕದ ಉಸ್ತುವಾರಿಯನ್ನು ಹೊಂದಿದ್ದ ಡಾ.ನೇಹಾ ಅಗರವಾಲ್ ಅವರು ಎರಡು ದೋಷಪೂರಿತ ವೆಂಟಿಲೇಟರ್ಗಳ ಕುರಿತು ತನ್ನ ವಿಭಾಗದ ಮುಖ್ಯಸ್ಥ ಡಾ.ಯಶವಂತ ಕೆ.ರಾವ್ ಅವರಿಗೆ ಪತ್ರವನ್ನು ಬರೆದು,ಪಿಎಂ-ಕೇರ್ಸ್ ನಿಧಿಯಡಿ ಅಕ್ವಾ ಹೆಲ್ತ್ ಕೇರ್ ಕಂಪನಿಯಿಂದ ವಿಭಾಗಕ್ಕೆ ಪೂರೈಕೆಯಾಗಿದ್ದ ವೆಂಟಿಲೇಟರ್ಗಳು ಆಗಾಗ್ಗೆ ಮಾತ್ರ ಕಾರ್ಯ ನಿರ್ವಹಿಸುತ್ತಿವೆ ಎಂದು ತಿಳಿಸಿದ್ದರು.

ರಾವ್ ಅವರು ಜು.6ರಂದು ಆಗಿನ ಪ್ರಾಂಶುಪಾಲ ಆರ್.ಬಿ.ಕಮಲ್ ಅವರಿಗೆ ಪತ್ರವನ್ನು ಬರೆದು ದೋಷಪೂರಿತ ವೆಂಟಿಲೇಟರ್ಗಳ ಬಗ್ಗೆ ಮಾಹಿತಿ ನೀಡಿದ್ದರು. ಇಂತಹ ಒಂದು ವೆಂಟಿಲೇಟರ್ ದಿಢೀರನೆ ಸ್ಥಗಿತಗೊಂಡು ಮಗುವೊಂದರ ಸಾವಿಗೆ ಕಾರಣವಾಗಿದ್ದನ್ನು ಪತ್ರದಲ್ಲಿ ಉಲ್ಲೇಖಿಸಿದ್ದ ರಾವ್,ಭವಿಷ್ಯದಲ್ಲಿ ಈ ವೆಂಟಿಲೇಟರ್ಗಳ ಬಳಕೆಗೆ ನಿರಾಕರಿಸಿದ್ದರು.

ಬೇರೊಂದು ಕಂಪನಿಯಿಂದ ವೆಂಟಿಲೇಟರ್ಗಾಗಿಯೂ ರಾವ್ ಆಗ್ರಹಿಸಿದ್ದರು. ಹಲವಾರು ಬಾರಿ ವೆಂಟಿಲೇಟರ್ನ್ನು ರಿಪೇರಿ ಮಾಡಿದ್ದರೂ ಸಮಸ್ಯೆ ಪರಿಹಾರವಾಗಿಲ್ಲ ಎಂದು ಅವರು ಜಿಎಸ್ವಿಎಂ ಆಡಳಿತಕ್ಕೆ ತಿಳಿಸಿದ್ದರು. ಇವೆರಡು ಪತ್ರಗಳು ಮೆಡಿಕಲ್ ಕಾಲೇಜು ಮತ್ತು ರಾಜ್ಯದ ಆಡಳಿತವನ್ನು ಅಲುಗಾಡಿಸಿದ್ದವು. ಇದಕ್ಕೂ ಮುನ್ನ ನರೇಂದ್ರ ಮೋದಿ ಸರಕಾರವು ಕಳಪೆ ಗುಣಮಟ್ಟದ ವೆಂಟಿಲೇಟರ್ಗಳನ್ನು ಖರೀದಿಸುತ್ತಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಆರೋಪಿಸಿದ್ದ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಅಕ್ವಾ ಹೆಲ್ತ್ಕೇರ್ಗೆ ಸಂಬಂಧಿಸಿದ್ದ ಲಿಂಕ್ ಅನ್ನೂ ಶೇರ್ ಮಾಡಿಕೊಂಡಿದ್ದರು.

ಕೋವಿಡ್ ಮೊದಲ ಅಲೆಯ ಸಂದರ್ಭದಲ್ಲಿ ತಮ್ಮ ಕಾಲೇಜು ಪಿಎಂ-ಕೇರ್ಸ್ ನಿಧಿಯಡಿ 26 ವೆಂಟಿಲೇಟರ್ಗಳನ್ನು ಸ್ವೀಕರಿಸಿದ್ದು,ಈ ಪೈಕಿ ಎರಡನ್ನು ಮಕ್ಕಳ ವಿಭಾಗದಲ್ಲಿ ಬಳಸಲಾಗುತ್ತಿತ್ತು. ಆಗಿನ ಪ್ರಾಂಶುಪಾಲ ಡಾ.ಆರ್.ಬಿ.ಕಮಲ್ ಅವರು ದೋಷಪೂರಿತ ವೆಂಟಿಲೇಟರ್ ಗಳ ಬಗ್ಗೆ ಸರಕಾರದ ಅಧಿಕಾರಿಗಳಿಗೆ ತಿಳಿಸಿದ್ದರು ಮತ್ತು ಬದಲಿ ವೆಂಟಿಲೇಟರ್ಗಳನ್ನು ಪೂರೈಸುವಂತೆ ಕೋರಿಕೊಂಡಿದ್ದರು ಎಂದು ಜಿಎಸ್ವಿಎಂನ ಹಾಲಿ ಪ್ರಾಂಶುಪಾಲ ಡಾ.ಸಂಜಯ ಕಾಲಾ ಹೇಳಿದರು. ಮಗುವಿನ ಸಾವಿನ ಕುರಿತು ಸುದ್ದಿಸಂಸ್ಥೆಯ ಪ್ರಶ್ನೆಗೆ ಅವರು,ಆಗ ತಾನು ಪ್ರಾಂಶುಪಾಲನಾಗಿರಲಿಲ್ಲ ಎಂದು ಉತ್ತರಿಸಿದರು.

ಜುಲೈ ಮೊದಲ ವಾರದಲ್ಲಿ ಟಿಬಿ ಮೆನೆಂಜಿಟಿಸ್ನಿಂದ ನರಳುತ್ತಿದ್ದ ಮಗುವಿನ ಚಿಕಿತ್ಸೆಗೆ ಬಳಸಲಾಗಿದ್ದ ವೆಂಟಿಲೇಟರ್ ಹಠಾತ್ ಸ್ಥಗಿತಗೊಂಡಿತ್ತು. ಕರ್ತವ್ಯದಲ್ಲಿದ್ದ ವೈದ್ಯರು ಮಗುವನ್ನು ಬೇರೊಂದು ವೆಂಟಿಲೇಟರ್ಗೆ ಸ್ಥಳಾಂತರಿಸಿದ್ದರು. ಆದರೆ ಮಗು ನಾಲ್ಕು ದಿನಗಳ ನಂತರ ಮೃತಪಟ್ಟಿತ್ತು. ಈಬಳಿಕ ಡಾ.ಅಗರವಾಲ್ ವಿಭಾಗ ಮುಖ್ಯಸ್ಥರಿಗೆ ಪತ್ರ ಬರೆದು,ವೆಂಟಿಲೇಟರ್ಗಳು ಸರಿಯಾಗಿ ಕಾರ್ಯನಿರ್ವಹಿಸುತ್ತಿಲ್ಲ ಎಂದು ತಿಳಿಸಿದ್ದರು.

ಸರಕಾರವು ಈಗ ಮಗುವಿನ ಸಾವಿಗೆ ಡಾ.ಅಗರವಾಲ್ ಅವರನ್ನು ಹೊಣೆಯಾಗಿಸಿ ಅವರನ್ನು ಅಮಾನತುಗೊಳಿಸಿದೆ. ಆದರೆ,ಸರಕಾರವು ಈವರೆಗೂ ಮಗುವಿನ ಸಾವಿನ ಬಗ್ಗೆ ಅಥವಾ ಕಳಪೆ ಗುಣಮಟ್ಟದ ವೆಂಟಿಲೇಟರ್ಗಳ ಬಗ್ಗೆ ತನಿಖೆ ನಡೆಸಿಲ್ಲ ಎಂದು ಕಾಲೇಜು ಆಡಳಿತದಲ್ಲಿನ ಮೂಲಗಳು ತಿಳಿಸಿವೆ. ಮಗುವಿನ ಸಾವು ಮತ್ತು ದೋಷಪೂರಿತ ವೆಂಟಿಲೇಟರ್ ವಿಷಯ ಮೊದಲು ಬಹಿರಂಗಗೊಂಡಾಗ ಜಿಎಸ್ವಿಎನ್ ವೈದ್ಯರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಈ ಬಗ್ಗೆ ವಿಚಾರಣೆ ನಡೆಸಿತ್ತು ಮತ್ತು ತನ್ನ ವರದಿಯಲ್ಲಿ ಡಾ.ಅಗರವಾಲ್ ಅವರಿಗೆ ಕ್ಲೀನ್ ಚಿಟ್ ನೀಡಿತ್ತು.

ಡಾ.ಅಗರವಾಲ್ ಅವರನ್ನು ಅಮಾನತುಗೊಳಿಸಿರುವುದನ್ನು ಸುದ್ದಿಸಂಸ್ಥೆಗೆ ದೃಢಪಡಿಸಿದ ವೈದ್ಯಕೀಯ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅಲೋಕ ಕುಮಾರ ಅವರು,ಮಗುವಿನ ಸಾವನ್ನು ಸ್ಪಷ್ಟವಾಗಿ ಉಲ್ಲೇಖಿಸಿರುವ ಮೆಡಿಕಲ್ ಕಾಲೇಜಿನ ವರದಿಯ ಆಧಾರದಲ್ಲಿ ತನ್ನ ಇಲಾಖೆಯು ಈ ಕ್ರಮವನ್ನು ಕೈಗೊಂಡಿದೆ ಎಂದು ತಿಳಿಸಿದರು.

ತನ್ಮಧ್ಯೆ ಡಾ.ಅಗರವಾಲ್ ಅವರನ್ನು ಬೆಂಬಲಿಸಿರುವ ಡಾ.ಕಾಲಾ ಅವರು,ಆಂತರಿಕ ತನಿಖಾ ವರದಿಯ ಆಧಾರದಲ್ಲಿ ತಾನು ವೈದ್ಯಕೀಯ ಶಿಕ್ಷಣ ಇಲಾಖೆಗೆ ಪತ್ರವನ್ನು ಬರೆದು ಅಮಾನತು ನಿರ್ಧಾರವನ್ನು ಪುನರ್ಪರಿಶೀಲಿಸುವಂತೆ ಕೇಳಿಕೊಂಡಿರವುದಾಗಿ ತಿಳಿಸಿದ್ದಾರೆ.

ಡಾ.ಅಗರವಾಲ್ ವಿರುದ್ಧ ಕಠಿಣ ಕ್ರಮವನ್ನು ಕೈಗೊಂಡಿರುವ ಅಧಿಕಾರಿಗಳು ತನ್ನ ಪತ್ರವನ್ನು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ತಿಳಿಸಿದ ಡಾ.ರಾವ್,ವೆಂಟಿಲೇಟರ್ ಹಠಾತ್ ಸ್ಥಗಿತಗೊಂಡು ಮಗು ಸಾವನ್ನಪ್ಪಿದೆ ಎಂದು ತಾನೆಂದೂ ಬರೆದಿರಲಿಲ್ಲ, ಮೃತಮಗುವಿನ ಹೆತ್ತವರೂ ಆಸ್ಪತ್ರೆ ಸಿಬ್ಬಂದಿಯ ವಿರುದ್ಧ ದೂರಿಕೊಂಡಿಲ್ಲ ಎಂದು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News