ವಿಪಕ್ಷಗಳ ನಡವಳಿಕೆ ಸಂವಿಧಾನಕ್ಕೆ, ಪ್ರಜಾಪ್ರಭುತ್ವಕ್ಕೆ ಮತ್ತು ಜನತೆಗೆ ಅವಮಾನ: ಪ್ರಧಾನಿ ಮೋದಿ

Update: 2021-08-03 14:46 GMT

ಹೊಸದಿಲ್ಲಿ,ಆ.3: ವಿಪಕ್ಷಗಳ ವಿರುದ್ಧ ಮಂಗಳವಾರ ಮತ್ತೆ ದಾಳಿ ನಡೆಸಿದ ಪ್ರಧಾನಿ ನರೇಂದ್ರ ಮೋದಿಯವರು, ಅವು ಸಂಸತ್ತಿನ ಮುಂಗಾರು ಅಧಿವೇಶನ ಕಾರ್ಯ ನಿರ್ವಹಿಸಲು ಅವಕಾಶ ನೀಡುತ್ತಿಲ್ಲ ಎಂದು ಆರೋಪಿಸಿದರು. ವಿಪಕ್ಷಗಳ ಗದ್ದಲದಿಂದ ಸಂಸತ್ತಿನ ಕಲಾಪಗಳು ಪದೇ ಪದೇ ಮುಂದೂಡಲ್ಪಡುತ್ತಿರುವುದು ಸಂವಿಧಾನಕ್ಕೆ, ಪ್ರಜಾಪ್ರಭುತ್ವ ಮತ್ತು ಜನತೆಗೆ ಮಾಡುತ್ತಿರುವ ಅವಮಾನ ಎಂದು ಅವರು ಕಿಡಿಕಾರಿದರು.

ಬಿಜೆಪಿ ಸಂಸದರ ಸಭೆಯಲ್ಲಿ ಮಾತನಾಡುತ್ತಿದ್ದ ಮೋದಿ, ಉಭಯ ಸದನಗಳಲ್ಲಿ ವಿಪಕ್ಷಗಳ ನಡವಳಿಕೆಯಿಂದ ಸಂಸತ್ತಿಗೆ ಅವಮಾನವಾಗುತ್ತಿದೆ. ಸದನದಲ್ಲಿ ಸಚಿವರ ಕೈಯಿಂದ ದಾಖಲೆಗಳನ್ನು ಕಿತ್ತುಕೊಂಡು ಹರಿದು ಹಾಕಿದ್ದ ವ್ಯಕ್ತಿಗೆ ಆ ಬಗ್ಗೆ ಪಶ್ಚಾತ್ತಾಪವೇ ಇಲ್ಲ ಎಂದು ಪೆಗಾಸಸ್ ಹಗರಣದ ಬಗ್ಗೆ ಹೇಳಿಕೆ ನೀಡಲು ಸಜ್ಜಾಗಿದ್ದ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ ಅವರ ಕೈಯಿಂದ ಕಾಗದಗಳನ್ನು ಕಸಿದುಕೊಂಡಿದ್ದ ಟಿಎಂಸಿ ಸಂಸದ ಶಂತನು ಸೇನ್ ಅವರನ್ನು ಪ್ರಸ್ತಾಪಿಸಿ ಹೇಳಿದರು.

ಮಸೂದೆಗಳ ಅಂಗೀಕಾರಕ್ಕೆ ಸಂಬಂಧಿಸಿದಂತೆ ಟಿಎಂಸಿಯ ಇನ್ನೋರ್ವ ಸಂಸದ ಡೆರೆಕ್ ಓ’ಬ್ರಿಯಾನ್ ಅವರ ‘ಅವಹೇಳನಕಾರಿ ಹೇಳಿಕೆ’ಯನ್ನೂ ಅವರು ಉಲ್ಲೇಖಿಸಿದರು. ರಾಜ್ಯಸಭೆಯಲ್ಲಿ ಗದ್ದಲದ ನಡುವೆಯೇ 12 ಮಸೂದೆಗಳನ್ನು ಅಂಗೀಕರಿಸಲಾಗಿದೆ. ಇದೇನು ಮಸೂದೆಗಳ ಅಂಗೀಕಾರವೋ ‘ಪಾಪಡಿ ಚಾಟ್(ಜನಪ್ರಿಯ ಫಾಸ್ಟ್ ಫುಡ್)’ತಯಾರಿಯೇ ಎಂದು ಬ್ರಿ’ಯಾನ್ ಟ್ವೀಟ್ ನಲ್ಲಿ ಪ್ರಶ್ನಿಸಿದ್ದರು.

ಪೆಗಾಸಸ್ ಹಗರಣ,ಸರಕಾರವು ಸಾಂಕ್ರಾಮಿಕವನ್ನು ನಿರ್ವಹಿಸಿದ ರೀತಿ ಮತ್ತು ರೈತರ ಪ್ರತಿಭಟನೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ತೀವ್ರ ಪ್ರತಿಭಟನೆಗಳಿಗೆ ಸಂಬಂಧಿಸಿದಂತೆ ಒಂದು ವಾರದ ಅವಧಿಯಲ್ಲಿ ಇದು ವಿಪಕ್ಷಗಳ ವಿರುದ್ಧ ಪ್ರಧಾನಿಯವರ ಎರಡನೇ ದಾಳಿಯಾಗಿದೆ. ಕಳೆದ ವಾರ ಕಾಂಗ್ರೆಸ್ ಪಕ್ಷವನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ್ದ ಅವರು, ಅದು ಸಂಸತ್ ಅಧಿವೇಶನಕ್ಕೆ ಅಡ್ಡಿಯನ್ನುಂಟು ಮಾಡುತ್ತಿರುವ ಬಿಕ್ಕಟ್ಟನ್ನು ಬಗೆಹರಿಸುವ ಪ್ರಯತ್ನಗಳನ್ನು ಧಿಕ್ಕರಿಸುತ್ತಿದೆ ಎಂದು ಆರೋಪಿಸಿದ್ದರು. 

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮಂಗಳವಾರ 15 ಪ್ರತಿಪಕ್ಷಗಳ ಬ್ರೇಕ್ಫಾಸ್ಟ್ ಸಭೆ ನಡೆಸಿದ ಸಂದರ್ಭದಲ್ಲಿಯೇ ಮೋದಿ ಈ ದಾಳಿಯನ್ನು ನಡೆಸಿದ್ದಾರೆ. ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ, ಎನ್ಸಿಪಿಯ ಸುಪ್ರಿಯಾ ಸುಲೆ, ಶಿವಸೇನೆಯ ಸಂಜಯ ರಾವುತ್ ಮತ್ತು ಡಿಎಂಕೆಯ ಕನಿಮೋಳಿ ಅವರು ಸಭೆಯಲ್ಲಿ ಪಾಲ್ಗೊಂಡವರಲ್ಲಿ ಸೇರಿದ್ದರು. ಕಳೆದ ವಾರವೂ ಇಂತಹುದೇ ಸಭೆಯನ್ನು ನಡೆಸಿದ್ದ ರಾಹುಲ್ ಮತ್ತು ಪ್ರತಿಪಕ್ಷಗಳ ನಾಯಕರು ‘ಪ್ರಧಾನಿ ಮೋದಿ ನಮ್ಮ ಫೋನ್ ಗಳಲ್ಲಿ ಅಸ್ತ್ರವೊಂದನ್ನು ಸೇರಿಸಿದ್ದಾರೆ ಮತ್ತು ಭಾರತದ ಪ್ರಜಾಪ್ರಭುತ್ವದ ಆತ್ಮವನ್ನು ಘಾಸಿಗೊಳಿಸಲು ಅದನ್ನು ಬಳಸುತ್ತಿದ್ದಾರೆ ’ಎಂದು ಆರೋಪಿಸಿದ್ದರು.

ಜು.19ರಿಂದ ಆರಂಭಗೊಂಡಿರುವ ಮುಂಗಾರು ಅಧಿವೇಶನದಲ್ಲಿ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಪ್ರತಿಪಕ್ಷಗಳು ನಡೆಸುತ್ತಿರುವ ಪ್ರತಿಭಟನೆಗಳಿಂದಾಗಿ ಕಲಾಪಗಳಿಗೆ ಅಡ್ಡಿಯುಂಟಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News