ಇವಿಎಂ ಬಳಕೆಯ ವಿರುದ್ಧದ ಅರ್ಜಿ ವಜಾ: ‘ಪ್ರಚಾರ ಹಿತಾಸಕ್ತಿ ಅರ್ಜಿ ’ಎಂದು ಬಣ್ಣಿಸಿದ ದಿಲ್ಲಿ ಹೈಕೋರ್ಟ್

Update: 2021-08-03 15:19 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ, ಆ.3: ವಿದ್ಯುನ್ಮಾನ ಮತದಾನ ಯಂತ್ರ (ಇವಿಎಂ)ಗಳ ಬಳಕೆಯನ್ನು ನಿಲ್ಲಿಸಲು ನಿರ್ದೇಶವನ್ನು ಕೋರಿದ್ದ ಮತ್ತು ಮುಂಬರುವ ಚುನಾವಣೆಗಳಲ್ಲಿ ಮತಪತ್ರಗಳ ಬಳಕೆಯನ್ನು ಪ್ರಸ್ತಾವಿಸಿದ್ದ ಅರ್ಜಿಯೊಂದನ್ನು ದಿಲ್ಲಿ ಉಚ್ಚ ನ್ಯಾಯಾಲಯವು ಮಂಗಳವಾರ ವಜಾಗೊಳಿಸಿದೆ.

ಈ ಸಂಬಂಧ ಆದೇಶವನ್ನು ಹೊರಡಿಸಿದ ಮುಖ್ಯ ನ್ಯಾಯಾಧೀಶ ಡಿ.ಎನ್.ಪಟೇಲ್ ಮತ್ತು ನ್ಯಾ.ಜ್ಯೋತಿ ಸಿಂಗ್ ಅವರ ಪೀಠವು, ಅರ್ಜಿದಾರರು ಯಾವುದೇ ದೃಢವಾದ ವಾದವನ್ನು ಮುಂದಿರಿಸಿಲ್ಲ,ಆ ಬಗ್ಗೆ ಸಂಶೋಧನೆಯನ್ನೂ ಮಾಡಿಲ್ಲ ಎಂದು ಹೇಳಿತಲ್ಲದೆ ಅರ್ಜಿದಾರರಿಗೆ 10,000 ರೂ.ಗಳ ದಂಡವನ್ನು ವಿಧಿಸಿತು.

‘ಇದು ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್(ಸಾರ್ವಜನಿಕ ಹಿತಾಸಕ್ತಿ ಅರ್ಜಿ) ಅಲ್ಲ,ಇದು ಸ್ಪಷ್ಟವಾಗಿ ಪಬ್ಲಿಸಿಟಿ ಇಂಟರೆಸ್ಟ್ ಲಿಟಿಗೇಷನ್ (ಪ್ರಚಾರ ಹಿತಾಸಕ್ತಿ ಅರ್ಜಿ) ಆಗಿದೆ ’ಎಂದು ನ್ಯಾ.ಡಿ.ಎನ್.ಪಟೇಲ್ ಹೇಳಿದರು.

ಹಲವಾರು ಐರೋಪ್ಯ ದೇಶಗಳು ಈಗಾಗಲೇ ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಗಳಿಗಾಗಿ ಇವಿಎಂಗಳ ಬದಲು ಮತಪತ್ರಗಳನ್ನು ಬಳಸುತ್ತಿವೆ ಎಂದು ತನ್ನ ಅರ್ಜಿಯಲ್ಲಿ ಬೆಟ್ಟು ಮಾಡಿದ್ದ ನ್ಯಾಯವಾದಿ ಸಿ.ಆರ್.ಜಯ ಸುಕಿನ್ ಅವರು, ಪ್ರಜಾಪ್ರಭುತ್ವವನ್ನು ಉಳಿಸಲು ನಾವು ದೇಶದಲ್ಲಿ ಮತಪತ್ರಗಳ ವ್ಯವಸ್ಥೆಯನ್ನು ಮರುಜಾರಿಗೊಳಿಸಬೇಕಿದೆ. 

ಭಾರತದಲ್ಲಿ ಹಳೆಯ ಮತಪತ್ರಗಳ ವ್ಯವಸ್ಥೆಯ ಬದಲಾಗಿ ಇವಿಎಮ್ಗಳನ್ನು ತರಲಾಗಿದೆ. ಇಂಗ್ಲಂಡ್, ಫ್ರಾನ್ಸ್, ಜರ್ಮನಿ, ನೆದರ್ಲ್ಯಾಂಡ್ಸ್ ಮತ್ತು ಅಮೆರಿಕ ಸೇರಿದಂತೆ ಹಲವಾರು ದೇಶಗಳು ಇವಿಎಂ ಬಳಕೆಯನ್ನು ನಿಷೇಧಿಸಿವೆ. ಸಂವಿಧಾನದ ವಿಧಿ 324ರಂತೆ ಚುನಾವಣಾ ಆಯೋಗವು ನಡೆಸುವ ಚುನಾವಣೆಗಳು ಮುಕ್ತ ಮತ್ತು ನ್ಯಾಯಸಮ್ಮತವಾಗಿರಬೇಕು ಹಾಗೂ ಮತದಾರರ ಇಚ್ಛೆಯನ್ನು ಪ್ರತಿಬಿಂಬಿಸಬೇಕು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News