ಮಂಗಳೂರು ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ರದ್ದುಗೊಳಿಸಲು ದ.ಕ. ಜಿಲ್ಲಾಧಿಕಾರಿ ಆದೇಶ

Update: 2021-08-03 15:21 GMT

ಮಂಗಳೂರು, ಆ.3: ಮಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರದಿಂದ ನಡೆಯುತ್ತಿರುವ ಪದವಿ ಪರೀಕ್ಷೆಗಳನ್ನು ಕೂಡಲೇ ರದ್ದುಗೊಳಿಸಬೇಕು. ಪರೀಕ್ಷೆ ಹಾಗೂ ತರಗತಿಗಳನ್ನು ಮುಂದೂಡುವಂತೆ ವಿವಿಯ ಮೌಲ್ಯಮಾಪನದ ರಿಜಿಸ್ಟ್ರಾರ್‌ಗೆ ದ.ಕ. ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಆದೇಶಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾಲಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕಾಗಿ ಅಂತರ್ ಜಿಲ್ಲೆಯಾದ ಕೇರಳದ ಕಾಸರಗೋಡಿನಿಂದ ಆಗಮಿಸುತ್ತಿದ್ದಾರೆ. ಕಾಸರಗೋಡಿನಿಂದ ಜಿಲ್ಲೆಗೆ ಪ್ರಯಾಣಿಕರ ಓಡಾಟದಿಂದ ವ್ಯಕ್ತಿಯಿಂದ ವ್ಯಕ್ತಿಗೆ ಸೋಂಕು ಹರಡುವ ಸಾಧ್ಯತೆ ಇದೆ. ಸಂಭಾವ್ಯ ಅಪಾಯ ತಪ್ಪಿಸಲು ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ ವಹಿಸಬೇಕೆಂದು ಸರಕಾರ ಸೂಚಿಸಿದ್ದು, ಆದೇಶವನ್ನು ಯಥಾವತ್ ಪಾಲಿಸುವುದಾಗಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ.

ಪ್ರಸ್ತುತ ಸನ್ನಿವೇಶವನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಯಾವುದೇ ವಿನಾಯಿತಿ ನೀಡಲು ಅವಕಾಶವಿಲ್ಲ. ಮಂಗಳೂರು ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ನಡೆಯುತ್ತಿರುವ ಎಲ್ಲ ಪದವಿ ಪರೀಕ್ಷೆಗಳನ್ನು ತಾತ್ಕಾಲಿಕವಾಗಿ ರದ್ದುಗೊಳಿಸಿ, ಮುಂದಿನ ಆದೇಶದವರೆಗೆ ತರಗತಿ ಹಾಗೂ ಪರೀಕ್ಷೆಗಳನ್ನು ಮುಂದೂಡುವಂತೆ ಜಿಲ್ಲಾಧಿಕಾರಿ ಆದೇಶದಲ್ಲಿ ತಿಳಿಸಿದ್ದಾರೆ.

*ಆ.4ರಿಂದ ವಿವಿ ಪರೀಕ್ಷೆ, ಮೌಲ್ಯಮಾಪನ ರದ್ದು: ವಿಶ್ವವಿದ್ಯಾಲಯದ ಪದವಿ ಪರೀಕ್ಷೆ ಹಾಗೂ ತರಗತಿಗಳನ್ನು ಕೂಡಲೇ ರದ್ದುಗೊಳಿಸಿ, ಮುಂದೂಡುವಂತೆ ಜಿಲ್ಲಾಧಿಕಾರಿ ಆದೇಶಿಸಿದ್ದಾರೆ. ಹಾಗಾಗಿ ಆ.4ರಿಂದ ಎಲ್ಲ ಪರೀಕ್ಷೆಗಳು ಹಾಗೂ ತರಗತಿಗಳನ್ನು ರದ್ದುಪಡಿಸಿ, ಮುಂದೂಡಲಾಗಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ರಿಜಿಸ್ಟ್ರಾರ್ (ಮೌಲ್ಯಮಾಪನ) ಪಿ.ಎಲ್. ಧರ್ಮ ತಿಳಿಸಿದ್ದಾರೆ.ಮಂಗಳವಾರ ಆರಂಭವಾಗಿದ್ದ ಮೌಲ್ಯಮಾಪನವನ್ನು ಕೂಡ ಮುಂದೂಡಿಕೆ ಮಾಡಲಾಗಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News