"ಡಾ.ಕಫೀಲ್ ಖಾನ್ ಅಮಾನತಿಗೆ ಕಾರಣ ನೀಡಿ": ಉ.ಪ್ರ. ಸರಕಾರಕ್ಕೆ ಅಲಹಾಬಾದ್ ಹೈಕೋರ್ಟ್ ಆದೇಶ

Update: 2021-08-03 15:57 GMT

ಲಕ್ನೋ, ಆ.3: ನಾಲ್ಕು ವರ್ಷಗಳಿಗೂ ಅಧಿಕ ಸಮಯದಿಂದ ಗೋರಖ್ಪುರದ ಆಸ್ಪತ್ರೆಯಿಂದ ಡಾ.ಕಫೀಲ್ ಖಾನ್ ಅವರನ್ನು ಅಮಾನತನ್ನು ಸಮರ್ಥಿಸಲು ಕಾರಣ ನೀಡುವಂತೆ ಅಲಹಾಬಾದ್ ಹೈಕೋರ್ಟ್ ಸೋಮವಾರ ಉತ್ತರಪ್ರದೇಶ ಸರಕಾರಕ್ಕೆ ತಿಳಿಸಿದೆ.

ತನ್ನನ್ನು ಸೇವೆಯಿಂದ ಅಮಾನತುಗೊಳಿಸಿರುವುದನ್ನು ಪ್ರಶ್ನಿಸಿ ಕಫೀಲ್ ಖಾನ್ ಅವರು ಜುಲೈ 29ರಂದು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸಿದ ನ್ಯಾಯಮೂರ್ತಿ ಯಶ್ವಂತ್ ವರ್ಮಾ ಅವರು ಈ ಆದೇಶವನ್ನು ಹೊರಡಿಸಿದ್ದಾರೆ.

ಗೋರಖ್ಪುರದ ಬಾಬಾರಾಘವ್ ದೇಸ್ ಮೆಡಿಕಲ್ ಕಾಲೇಜ್ ಆಸ್ಪತ್ರೆಯಲ್ಲಿ 2017ರಲ್ಲಿ ಆಮ್ಲಜನಕದ ಕೊರತೆಯಿಂದ 63 ಮಂದಿ ಮಕ್ಕಳು ಮೃತಪಟ್ಟ ಘಟನೆಗೆ ಸಂಬಂಧಿಸಿ ಕಫೀಲ್ ಖಾನ್ ಅವರನ್ನು ಅಮಾನತುಗೊಳಿಸಿತ್ತು. ಕರ್ತವ್ಯಲೋಪ, ಭ್ರಷ್ಟಾಚಾರ ಹಾಗೂ ವೈದ್ಯಕೀಯ ನಿರ್ಲಕ್ಷದ ಆರೋಪದಲ್ಲಿ ಅವರು 9 ತಿಂಗಳು ಜೈಲು ವಾಸ ಅನುಭವಿಸಿದ್ದರು.

ಆದರೆ 2019ರಲ್ಲಿ ಉ.ಪ್ರ. ಸರಕಾರವು ಡಾ.ಕಫೀಲ್ ಅವರನ್ನು ಎಲ್ಲಾ ರೀತಿಯ ಆರೋಪಗಳಿಂದ ಮುಕ್ತಗೊಳಿಸಿತ್ತು ಹಾಗೂ ಮಕ್ಕಳ ಪ್ರಾಣವನ್ನು ರಕ್ಷಿಸಲು ಅವರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡಿದ್ದರೆಂದು ಶ್ಲಾಘಿಸಿತ್ತು. ಬಿಕ್ಕಟ್ಟಿನ ಸಂದರ್ಭದಲ್ಲಿ ತನ್ನದೇ ಖರ್ಚಿನಲ್ಲಿ ಆಕ್ಸಿಜನ್ ಸಿಲಿಂಡರ್ ಡಾ.ಕಫೀಲ್ ಆಸ್ಪತ್ರೆಗೆ ತರಿಸಿಕೊಂಡಿದ್ದರು ಹಾಗೂ ಇನ್ನೂ ಹೆಚ್ಚು ಆಕ್ಸಿಜನ್ ಸಿಲಿಂಡರ್ಗಳನ್ನು ಆಸ್ಪತ್ರೆಗೆ ಪೂರೈಕೆಯಾಗುವಂತೆ ಏರ್ಪಾಟುಗಳನ್ನು ಮಾಡಿದ್ದರು ಎಂದು ಶ್ಲಾಘಿಸಿತ್ತು.

ಆದಾಗ್ಯೂ 2019ರಲ್ಲಿ ಉ.ಪ್ರ. ಸರಕಾರವು ಖಾನ್ ವಿರುದ್ಧ ಗೋರಖ್ಪುರದ ಆಸ್ಪತ್ರೆಯಲ್ಲಿ ಸಂಭವಿಸಿದ ಶಿಶುಗಳ ಸಾವಿನ ಕುರಿತ ವರದಿಯ ಬಗ್ಗೆ ತಪ್ಪು ಮಾಹಿತಿಗಳನ್ನು ನೀಡಿದ ಹಾಗೂ ತನ್ನ ಅಮಾನತಿನ ಅವಧಿಯಲ್ಲಿ ಸರಕಾರಿ ವಿರೋಧಿ ಹೇಳಿಕೆ ನೀಡಿದ್ದಾರೆಂಬ ಆರೋಪದ ಬಗ್ಗೆ ತತಕಅದು ಆದೇಶವನ್ನು ಹೊರಡಿಸಿತ್ತು.

ತನ್ನ ಪ್ರಕರಣಕ್ಕೆ ಸಂಬಂಧಿಸಿ ಶಿಸ್ತುಕ್ರಮ ಸಮಿತಿಯು 2019ರ ಎಪ್ರಿಲ್ 15ರಂದು ವರದಿಯೊಂದನ್ನು ಸಲ್ಲಿಸಿತ್ತು. ಶಿಸ್ತುಕ್ರಮ ಸಮಿತಿಯು ವರದಿಯನ್ನು ಸ್ವೀಕರಿಸಿತ್ತಾದರೂ, ಪ್ರಕರಣದಲ್ಲಿ ತನ್ನ ದೋಷಮುಕ್ತಿಯನ್ನು ಒಪ್ಪಿಕೊಳ್ಳಲಿಲ್ಲ ಮತ್ತು 11 ತಿಂಗಳ ಬಳಿಕ ತನಿಖೆಗೆ ಮರು ಆಜ್ಞಾಪಿಸಿತ್ತು ಎಂದು ಡಾ. ಕಫೀಲ್ ನ್ಯಾಯಾಲಯಕ್ಕೆ ತಿಳಿಸಿದ್ದರು.

ತನ್ನನ್ನು ಹೊರತುಪಡಿಸಿ, ಗೋರಖ್ಪುರದ ಆಸ್ಪತ್ರೆಯಲ್ಲಿ ಶಿಶು ಮರಣದ ಘಟನೆಗೆ ಸಂಬಂಧಿಸಿ ಅಮಾನತುಗೊಂಡ ಎಲ್ಲಾ ಸಿಬ್ಬಂದಿಯನ್ನು ಅವರ ಹುದ್ದೆಗಳಲ್ಲಿ ಮರುಸ್ಥಾಪಿಸಲಾಗಿದೆ ಎಂದು ಖಾನ್ ನ್ಯಾಯಾಲಯದಲ್ಲಿ ದೂರಿದ್ದರು.
ಪ್ರಕರಣದ ಆಲಿಕೆ ನಡೆಸಿದ ನ್ಯಾಯಾಲಯವು ನಾಲ್ಕು ವರ್ಷಗಳಿಗೂ ಅಧಿಕ ಸಮಯದವರೆಗೆ ಕಫೀಲ್ ಅವರ ಅಮಾನತು ಆದೇಶವನ್ನು ಮುಂದುವರಿಸಿರುವುಕ್ಕೆ ಸೂಕ್ತ ಕಾರಣ ನೀಡುವಂತೆ ಉತ್ತರಪ್ರದೇಶ ಸರಕಾರಕ್ಕೆ ಸೂಚಿಸಿತು ಮತ್ತು ಮುಂದಿನ ವಿಚಾರಣೆಯನ್ನು ಆಗಸ್ಟ್ 5ಕ್ಕೆ ಮುಂದೂಡಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News