ಅಮೆರಿಕ ವಿಧಿಸಿರುವ ನಿರ್ಬಂಧ ಅಂತ್ಯಕ್ಕೆ ಪೂರಕ ಕ್ರಮ: ಇರಾನ್ ಭರವಸೆ

Update: 2021-08-03 16:45 GMT

ಟೆಹ್ರಾನ್, ಆ.3: ಅಮೆರಿಕ ವಿಧಿಸಿರುವ ಕಠಿಣ ನಿರ್ಬಂಧಗಳ ಅಂತ್ಯಕ್ಕೆ ಪೂರಕವಾಗುವ ಕ್ರಮಗಳನ್ನು ಕೈಗೊಳ್ಳುವುದಾಗಿ ಮತ್ತು ಇರಾನ್ನ ಅತೃಪ್ತ ಜನರ ವಿಶ್ವಾಸ ಗಳಿಸಿಕೊಳ್ಳುವುದಾಗಿ ಇರಾನ್ ನ ನೂತನ ಅಧ್ಯಕ್ಷ ಇಬ್ರಾಹಿಂ ರೈಸಿ ಭರವಸೆ ನೀಡಿದ್ದಾರೆ.

ಆದರೆ, ದೇಶದ ಭವಿಷ್ಯವನ್ನು ಪಶ್ಚಿಮದ ದೇಶಗಳೊಂದಿಗೆ ಕಟ್ಟಿ ಹಾಕುವುದಿಲ್ಲ ಎಂದು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.

 ಇರಾನ್ನ ಪರಮೋಚ್ಛ ನಾಯಕ ಅಯತೊಲ್ಲಾ ಅಲಿ ಖಮೈನಿ ಅವರಿಂದ ದೇಶದ 8ನೇ ಅಧ್ಯಕ್ಷರಾಗಿ ಮಂಗಳವಾರ ಅಧಿಕೃತವಾಗಿ ನಿಯೋಜನೆಗೊಂಡ ಬಳಿಕ ಮಾತನಾಡಿದ ರೈಸಿ, ಜಾಗತಿಕ ಸಶಕ್ತ ದೇಶಗಳೊಂದಿಗೆ 2015ರಲ್ಲಿ ಮಾಡಿಕೊಂಡಿದ್ದ ಪರಮಾಣು ಒಪ್ಪಂದದ ಮರುಸ್ಥಾಪನೆ ನಿಟ್ಟಿನಲ್ಲಿ ಮಾತುಕತೆ ಮುಂದುವರಿಸುವುದಾಗಿ ಹೇಳಿದರು.

  ಈ ಕ್ರೂರ ನಿರ್ಬಂಧ ಅಂತ್ಯವಾಗಬೇಕು ಎಂಬುದು ನಮ್ಮ ದೃಢ ನಿಲುವಾಗಿದೆ. ಆದರೆ ಜನತೆಯ ಜೀವನೋಪಾಯ, ದೇಶದ ಆರ್ಥಿಕತೆ ಷರತ್ತಿಗೆ ಒಳಪಡುವಂತೆ ಮತ್ತು ಇವು ವಿದೇಶೀಯರ ಆಶಯಕ್ಕೆ ಒಳಪಡುವುದನ್ನು ನಾವು ಖಂಡಿತಾ ಬಯಸುವುದಿಲ್ಲ . ಈಗಿನ ಪರಿಸ್ಥಿತಿಯಿಂದ ಬದಲಾವಣೆಯನ್ನು ದೇಶದ ಜನತೆ ಬಯಸುತ್ತಿದ್ದು, ಪರಮೋಚ್ಛ ಮುಖಂಡರು ಹಾಕಿಕೊಟ್ಟ ಚೌಕಟ್ಟಿನೊಳಗೆ ಈ ಬದಲಾವಣೆ ಸಾಧ್ಯವಾಗುವಂತೆ ಮಾಡುವ ಗುರಿ ಹೊಂದಿದ್ದೇನೆ . ತಾವು ಕಳೆದುಕೊಂಡಿರುವ ವಿಶ್ವಸಾರ್ಹತೆಯನ್ನು ಮರುಸ್ಥಾಪಿಸುವ ಜೊತೆಗೆ ಸರಕಾರ ಮತ್ತು ಜನತೆಯ ನಡುವಿನ ಸೇತುವೆಯಾಗಿ ಕೆಲಸ ಮಾಡಲಿದ್ದೇನೆ ಎಂದರು. ಟೆಹ್ರಾನ್ನಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಉನ್ನತ ಅಧಿಕಾರಿಗಳು, ರಕ್ಷಣಾ ಪಡೆಯ ಕಮಾಂಡರ್ಗಳು ಉಪಸ್ಥಿತರಿದ್ದರು.

 ದೇಶದ ಅರ್ಥವ್ಯವಸ್ಥೆಗೆ ಚೈತನ್ಯ ನೀಡುವುದು, ಹಣದುಬ್ಬರ ನಿಯಂತ್ರಣದ ಜೊತೆಗೆ ಪ್ರತೀ ವರ್ಷ 1 ಮಿಲಿಯನ್ ಉದ್ಯೋಗ ಸೃಷ್ಟಿ, 4 ವರ್ಷದಲ್ಲಿ 4 ಮಿಲಿಯನ್ ಮನೆ ನಿರ್ಮಿಸುವ ಭರವಸೆಯನ್ನು ಚುನಾವಣೆ ಪ್ರಚಾರ ಸಂದರ್ಭ ರೈಸಿ ನೀಡಿದ್ದರು.

ಆಸ್ಟ್ರಿಯಾದ ರಾಜಧಾನಿ ವಿಯೆನ್ನಾದಲ್ಲಿ ಪರಮಾಣು ಒಪ್ಪಂದದ ಕುರಿತ 6ನೇ ಸುತ್ತಿನ ಮಾತುಕತೆ ಜೂನ್ನಲ್ಲಿ ಅಂತ್ಯವಾಗಿದ್ದು, ರೈಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮಾತುಕತೆ ಮುಂದುವರಿಯಲಿದೆ ಎಂದು ಇರಾನ್ ಹೇಳಿತ್ತು.

ಜೂನ್ 18ರಂದು ನಡೆದ ಅಧ್ಯಕ್ಷರ ಚುನಾವಣೆಯಲ್ಲಿ ರೈಸಿ ಜಯ ಸಾಧಿಸಿದ್ದರೂ ಈ ಚುನಾವಣೆ ವಿವಾದಾತ್ಮಕವಾಗಿತ್ತು. ಕೇವಲ 48.8% ಮತದಾರರು ಮಾತ್ರ ಮತ ಚಲಾಯಿಸಿದ್ದು ಇದು 1979ರ ಬಳಿಕದ ಅತೀ ಕಡಿಮೆ ಮತದಾನವಾಗಿದೆ. ಕೊರೋನ ಸೋಂಕಿನ ಸಮಸ್ಯೆಯಿಂದ ಕಡಿಮೆ ಮತದಾನವಾಗಿದೆ ಎಂದು ಅಯತೊಲ್ಲಾ ಖಮೈನಿ ಮಂಗಳವಾರ ಪ್ರತಿಕ್ರಿಯಿಸಿದ್ದಾರೆ. ಚುನಾವಣೆ ಬಹಿಷ್ಕರಿಸಲು ಶತ್ರುಗಳು ಸಂಚು ಹೂಡಿದ್ದು ದೇಶದ ಕೆಲವರು ಇದನ್ನು ಬೆಂಬಲಿಸಿದ್ದಾರೆ. ಆದರೂ ಜನತೆಯ ಭಾಗವಹಿಸುವಿಕೆ ಈ ಪಿತೂರಿಯನ್ನು ವಿಫಲಗೊಳಿಸಿದೆ ಎಂದು ಖಮೈನಿ ಹೇಳಿರುವುದಾಗಿ ಮಾಧ್ಯಮಗಳು ವರದಿ ಮಾಡಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News