×
Ad

​ಅಕ್ಷರ ದಾಸೋಹ ನೌಕರರ ದ.ಕ.ಜಿಲ್ಲಾ ಸಮ್ಮೇಳನ

Update: 2021-08-03 22:42 IST

ಮಂಗಳೂರು, ಆ.3: ಸಿಐಟಿಯು ಅಧೀನದ ಕರ್ನಾಟಕ ರಾಜ್ಯ ಅಕ್ಷರದಾಸೋಹ ನೌಕರರ ಸಂಘ (ರಿ)ದ ದ.ಕ.ಜಿಲ್ಲಾ ಸಮಿತಿಯ ಸಭೆಯು ಸೋಮವಾರ ನಗರದಲ್ಲಿ ನಡೆಯಿತು.

ಸಮ್ಮೇಳನವನ್ನು ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಮಾಲಿನಿ ಮೇಸ್ತಾ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಕೇಂದ್ರ ಹಾಗೂ ರಾಜ್ಯ ಸರಕಾರಗಳು ಶಿಕ್ಷಣ ರಂಗಕ್ಕೆ ಆದ್ಯತೆ ನೀಡುತ್ತಿಲ್ಲ. ಖಾಸಗೀಕರಣವೇ ಸರಕಾರದ ವೇದ ವಾಕ್ಯವಾಗಿದೆ. ಸರಕಾರ ಹೇರಿರುವ ಲಾಕ್‌ಡೌನ್ ಮಕ್ಕಳ ಭವಿಷ್ಯದ ಮೇಲೆ ದುಷ್ಪರಿಣಾಮ ಬೀರಿದೆ. ಬಿಸಿಯೂಟ ತಯಾರಿಸಿ ಬಡಿಸುವ ಕಾರ್ಮಿಕರಿಗೆ ಬಾಕಿ ವೇತನ ನೀಡದೆ ಸತಾಯಿಸುತ್ತಿದೆ ಎಂದರು.

ಸಂಘದ ಪರಿಣಾಮಕಾರಿ ಹೋರಾಟದಿಂದಾಗಿ ಹತ್ತು ತಿಂಗಳ ವೇತನ ಪಡೆಯಲು ಸಾಧ್ಯವಾಗಿದೆ. ಬಾಕಿ ವೇತನ ಕಾರ್ಮಿಕರಿಗೆ ನೀಡುವ ಬದಲು ಮಕ್ಕಳ ಖಾತೆಗೆ ನೇರ ನಗದು ಮಾಡ ಹೊರಟಿದೆ. ಇದು ಕಾರ್ಮಿಕರನ್ನು ಬೀದಿಪಾಲು ಮಾಡುವ ಹುನ್ನಾರದಿಂದ ಕೂಡಿದೆ. ಹಾಗಾಗಿ ಬಿಸಿಯೂಟಕ್ಕೆ ಸಂಬಂಧಿಸಿ ಹಣವನ್ನು ಮಕ್ಕಳ ಖಾತೆಗೆ ನೇರ ನಗದು (ಡಿಬಿಟಿ) ಹಾಕಬಾರದು. ಕೂಡಲೇ ಬಿಸಿಯೂಟ ನೌಕರರ ಬಾಕಿ ವೇತನ ನೀಡಬೇಕು ಎಂದು ಮಾಲಿನಿ ಮೇಸ್ತಾ ಒತ್ತಾಯಿಸಿದರು.

ಸಿಐಟಿಯು ಜಿಲ್ಲಾ ಮುಂದಾಳುಗಳಾದ ಜೆ.ಬಾಲಕೃಷ್ಣ ಶೆಟ್ಟಿ, ವಸಂತ ಆಚಾರಿ ಮುಖ್ಯಭಾಷಣಗೈದರು. ಜನವಾದಿ ಮಹಿಳಾ ಸಂಘಟನೆಯ ಜಿಲ್ಲಾಧ್ಯಕ್ಷೆ ಜಯಂತಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಭಾರತಿ ಬೋಳಾರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಗಿರಿಜಾ ಮೂಡುಬಿದಿರೆ ವರದಿ ವಾಚಿಸಿದರು. ಖಜಾಂಚಿ ಭವ್ಯಾ ಲೆಕ್ಕಪತ್ರ ಮಂಡಿಸಿದರು.

ಸಂಘದ ನೂತನ ಗೌರವಾಧ್ಯಕ್ಷರಾಗಿ ಪದ್ಮಾವತಿ ಶೆಟ್ಟಿ, ಅಧ್ಯಕ್ಷರಾಗಿ ಭವ್ಯಾ, ಪ್ರಧಾನ ಕಾರ್ಯದರ್ಶಿಯಾಗಿ ಗಿರಿಜಾ ಮೂಡುಬಿದಿರೆ, ಖಜಾಂಚಿಯಾಗಿ ರತ್ನಮಾಲಾ ಸಹಿತ 15 ಮಂದಿ ಪದಾಧಿಕಾರಿಗಳು ಮತ್ತು 15 ಮಂದಿಯ ಕಾರ್ಯಕಾರಿ ಸಮಿತಿಯನ್ನು ರಚಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News