​50 ಲಕ್ಷ ವೆಚ್ಚದಲ್ಲಿ ಕುಲಶೇಖರ ಕೆರೆ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ

Update: 2021-08-03 17:39 GMT

ಮಂಗಳೂರು, ಆ.3: ಸುಮಾರು 60 ವರ್ಷಗಳಿಂದ ಪಾಳುಬಿದ್ದು ಜೀರ್ಣಾವಸ್ಥೆಯಲ್ಲಿದ್ದ ಕುಲಶೇಖರ ಕೆರೆಯ ಅಭಿವೃದ್ಧಿ ಕಾಮಗಾರಿಗೆ ಶಾಸಕ ವೇದವ್ಯಾಸ್ ಕಾಮತ್ ಭೂಮಿಪೂಜೆ ನೆರವೇರಿಸಿದರು.

ಈ ವಿಚಾರದಲ್ಲಿ ಮಾತನಾಡಿದ ಶಾಸಕ ಕಾಮತ್, ಒಂದು ಕಾಲದಲ್ಲಿ ಧಾರ್ಮಿಕ ಭಾವನೆಗಳೊಂದಿಗೆ ಬೆಸೆದುಕೊಂಡಿದ್ದ ಕುಲಶೇಖರ ಕೆರೆಯು ಇಂದು ಜೀರ್ಣಾವಸ್ಥೆಯಲ್ಲಿದೆ. ಹಿಂದೆ ಸಮೀಪದ ವೀರ ನಾರಾಯಣ ದೇವಸ್ಥಾನದ ದೇವರು ಜಳಕಕ್ಕೆ ಈ ಕೆರೆಗೆ ಬರುವ ಸಂಪ್ರದಾಯವಿತ್ತು ಎಂದು ಹಿರಿಯರು ಹೇಳುತ್ತಾರೆ. ಸುಮಾರು 60 ವರ್ಷಗಳಿಂದ ಪಾಳು ಬಿದ್ದು ಜೀರ್ಣಾವಸ್ಥೆ ತಲುಪಿದ್ದು, ಅಭಿವೃದ್ಧಿಪಡಿಸುವ ಚಿಂತನೆಯೊಂದಿಗೆ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಿಂದ 50 ಲಕ್ಷ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ ಎಂದರು.

ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ರವಿಶಂಕರ್ ಮಿಜಾರ್ ಮಾತನಾಡಿ, ನಗರದಲ್ಲಿ ಅನೇಕ ಕೆರೆಗಳು ನಾಶವಾಗಿದ್ದು, ಕೆರೆಗಳ ಪುನರುಜ್ಜೀವನಕ್ಕೆ ಶಾಸಕ ವೇದವ್ಯಾಸ್ ಕಾಮತ್ ಯೋಜನೆ ರೂಪಿಸಿದ್ದಾರೆ. ಈಗಾಗಲೇ ವಿವಿಧ ಕೆರೆಗಳ ಅಭಿವೃದ್ಧಿಗೆ ಶಾಸಕ ವೇದವ್ಯಾಸ್ ಕಾಮತ್ ಕೇಳಿಕೊಂಡ ಪ್ರಕಾರ ಅನುದಾನ ಬಿಡುಗಡೆಗೊಳಿಸಲಾಗಿದ್ದು, ಕೆರೆಯ ಸಂಪೂರ್ಣ ಅಭಿವೃದ್ಧಿಗೆ ಅನುದಾನ ಒದಗಿಸಲಾಗುವುದು ಎಂದು ಹೇಳಿದರು.

ಈ ಸಂದರ್ಭದಲ್ಲಿ ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಮಹಾನಗರ ಪಾಲಿಕೆಯ ಸ್ಥಾಯಿ ಸಮಿತಿಯ ಅಧ್ಯಕ್ಷ ಸಂದೀಪ್ ಗರೋಡಿ, ಲೀಲಾವತಿ ಪ್ರಕಾಶ್, ಪಾಲಿಕೆ ಮುಖ್ಯ ಸಚೇತಕ ಸುಧೀರ್ ಶೆಟ್ಟಿ ಕಣ್ಣೂರು, ಪಾಲಿಕೆ ಸದಸ್ಯರಾದ ಭಾಸ್ಕರ್ ಮೊಯ್ಲಿ, ಪಾಲಿಕೆ ನಾಮನಿರ್ದೇಶಿತ ಸದಸ್ಯ ಭಾಸ್ಕರ್ ಚಂದ್ರ ಶೆಟ್ಟಿ, ನಗರಾಭಿವೃದ್ಧಿ ಪ್ರಾಧಿಕಾರದ ಅಧಿಕಾರಿಗಳು, ಸ್ಥಳೀಯರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News