ಭಟ್ಕಳ: ‘ಆಧಾರ್’ ನೋಂದಣಿಗಾಗಿ ಜನರ ಪರದಾಟ

Update: 2021-08-03 18:05 GMT

ಭಟ್ಕಳ: ಆಧಾರ್ ನೋಂದಣಿಗಾಗಿ ಜನರು ಪರದಾಡುವಂತಹ ಸ್ಥಿತಿ ಭಟ್ಕಳ ತಾಲೂಕಿನಲ್ಲಿ ನಿರ್ಮಾಣಗೊಂಡಿದ್ದು, ಜನರು ಬೆಳಗ್ಗಿನಿಂದಲೇ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ಎದುದಾಗಿದೆ.

ತಾಲೂಕಿನಲ್ಲಿ ಆಧಾರ್ ನೋಂದಣಿಗಾಗಿ ಸದ್ಯ ಅಂಚೆ ಕಚೇರಿಯಲ್ಲಿ ಮಾತ್ರ ಅವಕಾಶ ಇರುವುದರಿಂದ ಜನರು ತೀರಾ ತೊಂದರೆ ಅನುಭವಿಸುವಂತಾಗಿದೆ. ಅಂಚೆ ಕಚೇರಿಯಲ್ಲಿ ಸೋಮವಾರ ಪ್ರತಿನಿತ್ಯ 40 ಜನರಂತೆ ಅಗಷ್ಟ್ 18ರ ವರೆಗೆ ಒಟ್ಟು 540 ಜನರಿಗೆ ಆಧಾರ್ ನೋಂದಣಿ ಮಾಡಿಸಿಕೊಳ್ಳಲು ಟೋಕನ್ ನೀಡಲಾಗಿದೆ.

ಶಾಲಾ-ಕಾಲೇಜು ದಾಖಲಾತಿ, ಸಿಇಟಿ ಸೇರಿದಂತೆ ವಿವಿಧ ಪರೀಕ್ಷೆ, ಪಾಸ್‍ಪೋರ್ಟ್, ಬ್ಯಾಂಕ್ ಖಾತೆ ತೆರೆಯಲು, ಸರಕಾರದ ವಿವಿಧ ಯೋಜನೆಗಳು ಹೀಗೆ ಎಲ್ಲದಕ್ಕೂ ಆಧಾರ್ ಕಾರ್ಡ್ ತೀರಾ ಅಗತ್ಯವಾಗಿರುವುದರಿಂದ ಆಧಾರ್ ನೋಂದಣಿ ಮತ್ತು ತಿದ್ದುಪಡಿಗಾಗಿ ತಾಲೂಕಿನ ಪಟ್ಟಣ ಹಾಗೂ ಗ್ರಾಮೀಣ ಭಾಗದ  ಜನರು ನೂರಾರು ಸಂಖ್ಯೆಯಲ್ಲಿ ಸರತಿ ಸಾಲಿನಲ್ಲಿ ನಿಲ್ಲುವಂತಾಗಿದೆ. 

ಪಟ್ಟಣದ ಮುಖ್ಯ ಅಂಚೆ ಕಚೇರಿಯಲ್ಲಿ ಹೊರತುಪಡಿಸಿ ಬೇರೆ ಎಲ್ಲೂ ಆಧಾರ ನೋಂದಣಿ ಕೇಂದ್ರಗಳು ಇಲ್ಲದೇ ಇರುವುದರಿಂದ  ಜನರು ಪರದಾಡುವಂತಾಗಿದೆ. ಲಾಕಡೌನ್ ಪೂರ್ವದಲ್ಲಿ ರಂಗೀಕಟ್ಟೆಯಲ್ಲಿರುವ ಬ್ಯಾಂಕ್ ಆಪ್ ಬರೋಡಾ ಶಾಖೆಯಲ್ಲಿ ಆಧಾರ ನೋಂದಣಿ ಮಾಡಿಕೊಡಲಾಗುತ್ತು. ಆದರೆ ಇದೀಗ ಅಲ್ಲಿಯೂ ನೋಂದಣಿ ಕಾರ್ಯ ಸ್ಥಗಿತಗೊಳಿಸಲಾಗಿದೆ.  ಕಳೆದ ಕೆಲ ವರ್ಷಗಳಿಂದ ತಾಲ್ಲೂಕಿನಲ್ಲಿ ಆಧಾರ ನೋಂದಣಿ ಸಮಸ್ಯೆ ತೀವ್ರವಾಗಿದ್ದು,  ಹೆಚ್ಚುವರಿ ಕೇಂದ್ರ ತೆರೆಯುವಂತೆ  ಜಿಲ್ಲಾಡಳಿತಕ್ಕೆ ಹಲವು ಬಾರಿ ಆಗ್ರಹಿಸಿದ್ದರೂ ಪ್ರಯೋಜನವಾಗಿಲ್ಲ. ದಿನದಿಂದ ದಿನಕ್ಕೆ ಆಧಾರ ನೋಂದಣಿ, ತಿದ್ದುಪಡಿ ಮಾಡಿಸುವವರ ಸಂಖ್ಯೆ ಹೆಚ್ಚುತ್ತಿದ್ದು, ಪ್ರತಿ ಗ್ರಾಮ ಪಂಚಾಯತ್ ಮತ್ತು ಪಟ್ಟಣ ಪಂಚಾಯತ್ ಹಾಗೂ ಪುರಸಭೆ, ತಹಸೀಲ್ದಾರ ಕಚೇರಿಯಲ್ಲಿ ಇನ್ನಾದರೂ ನೋಂದಣಿ ಕೇಂದ್ರ ತೆರೆದರೆ ಜನರ ಅಲೆದಾಟ ಮತ್ತು ಟೋಕನ್‍ಗಾಗಿ ಅಂಚೆ ಕಚೇರಿ ಮುಂದೆ ತಡರಾತ್ರಿ, ಬೆಳಗಿನಜಾವ ಜನರು ಬಂದು ನಿಲ್ಲುವುದು ತಪ್ಪುತ್ತದೆ. ಜಿಲ್ಲಾಡಳಿತ ಆದಷ್ಟು ಬೇಗ ಈ ಕುರಿತು ಕ್ರಮ ಕೈಗೊಳ್ಳಬೇಕು ಎನ್ನುವುದು ಸಾರ್ವಜನಿಕರ ಆಗ್ರಹವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News