ಮನಪಾ ವಾರ್ಡ್ ಸಮಿತಿಗಳಲ್ಲಿ ಬಿಜೆಪಿಗರಿಗೆ ಮಣೆ: ಮಾಜಿ ಶಾಸಕ ಜೆ.ಆರ್.ಲೋಬೊ ಆರೋಪ

Update: 2021-08-04 08:12 GMT

ಮಂಗಳೂರು, ಆ.4: ಮಂಗಳೂರು ಮಹಾನಗರ ಪಾಲಿಕೆಯ ವಾರ್ಡ್ ಸಮಿತಿಗಳಲ್ಲಿ ಬಿಜೆಪಿ ಸದಸ್ಯರಿಗೆ ಮಣೆ ಹಾಕಲಾಗಿದೆ ಎಂದು ಆರೋಪಿಸಿರುವ ಮಾಜಿ ಶಾಸಕ ಜೆ.ಆರ್.ಲೋಬೋ, ತಕ್ಷಣ ಈ ಸಮಿತಿ ಸದಸ್ಯರ ಪಟ್ಟಿಯನ್ನು ಬದಲಾಯಿಸಬೇಕು. ಇಲ್ಲದಿದ್ದರೆ ಹೋರಾಟ ಮಾಡುವುದಾಗಿ ಎಚ್ಚರಿಸಿದ್ದಾರೆ.

ನಗರದ ಮಲ್ಲಿಕಟ್ಟೆಯ ಕಾಂಗ್ರೆಸ್ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿ ನಡೆಸಿದ ಅವರು, 60 ವಾರ್ಡ್‌ಗಳ ಸಮಿತಿಗೆ ಸುಮಾರು 1,278 ಮಂದಿ ಅರ್ಜಿ ಸಲ್ಲಿಸಿದ್ದರು. ಆ ಪೈಕಿ 600 ಮಂದಿಯ ಅರ್ಜಿಗಳನ್ನು ತಿರಸ್ಕರಿಸಲಾಗಿದೆ. ಆದರೆ ಆಯ್ಕೆ ಮಾಡಲಾದ ಸದಸ್ಯರ ಪೈಕಿ ಶೇ.90ರಷ್ಟು ಮಂದಿ ಬಿಜೆಪಿ ಸದಸ್ಯರಾಗಿದ್ದಾರೆ. ಇದು ನಿಯಮಗಳಿಗೆ ವಿರುದ್ಧವಾಗಿದ್ದು, ತಕ್ಷಣ ಈ ಪಟ್ಟಿಯನ್ನು ರದ್ದುಪಡಿಸಿಕೊಂಡು ರಾಜಕೀಯೇತರ ವ್ಯಕ್ತಿಗಳನ್ನು ಒಳಗೊಂಡ ವಾರ್ಡ್ ಸಮಿತಿಯನ್ನು ರಚಿಸಬೇಕು ಎಂದು ಒತ್ತಾಯಿಸಿದರು.

ವಾರ್ಡ್ ಸಮಿತಿಯ ಸದಸ್ಯರಾಗಲು ಮನಪಾ ಆಯುಕ್ತರು ಅರ್ಜಿ ಆಹ್ವಾನಿಸಿದ್ದರು. ಬಳಿಕ ಆಕ್ಷೇಪಗಳಿಗೂ ಅವಕಾಶ ಕಲ್ಪಿಸಿದ್ದರು. ಆದರೆ, ಅಂತಿಮ ಆಯ್ಕೆಯ ಸಂದರ್ಭ ಶಾಸಕರಾದ ವೇದವ್ಯಾಸ ಕಾಮತ್ ಮತ್ತು ಭರತ್ ಶೆಟ್ಟಿಯ ಮಾತಿಗೆ ಮನಪಾ ಆಯುಕ್ತರು ಮಣಿದಿದ್ದಾರೆ. ಆ ಮೂಲಕ ಮನಪಾ ಆಯುಕ್ತರು ಅನ್ಯಾಯ ಎಸಗಿದ್ದಾರೆ. ತಿರಸ್ಕೃತಗೊಂಡವರಿಗೆ ಯಾವ ಕಾರಣಕ್ಕಾಗಿ ತಿರಸ್ಕರಿಸಲಾಗಿದೆ ಎಂಬುದರ ಬಗ್ಗೆಯೂ ಆಯುಕ್ತರು ಸಮಜಾಯಿಷಿ ನೀಡಿದ್ದಾರೆ ಎಂದು ಜೆ.ಆರ್.ಲೋಬೋ ಆಪಾದಿಸಿದರು.

ವಾರ್ಡ್ ಸಮಿತಿಗಳಲ್ಲಿ ಯಾವುದೇ ರಾಜಕೀಯ ಪಕ್ಷದ ಕಾರ್ಯಕರ್ತ,ಪದಾಧಿಕಾರಿಗಳಿಗೆ ಅವಕಾಶವಿಲ್ಲ. ಪಕ್ಷದ ಪರ ಒಲವಿದ್ದವರು ಕೂಡ ಸದಸ್ಯರಾಗುವಂತಿಲ್ಲ. ನಗರದ ಅಭಿವೃದ್ಧಿ ದೃಷ್ಟಿಯಿಂದ ವಾರ್ಡ್ ಸಮಿತಿಯನ್ನು ರಚಿಸಲಾಗುತ್ತದೆ ಮತ್ತು ಅದು ಪಕ್ಷಾತೀತವಾಗಿರಬೇಕು. ಆದರೆ ಸದ್ಯ ಬಿಡುಗಡೆ ಮಾಡಲಾದ ವಾರ್ಡ್ ಸಮಿತಿಗಳಲ್ಲಿ ಬಿಜೆಪಿಗರೇ ಸೇರಿದ್ದಾರೆ. ಕಳೆದ ಮನಪಾ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿದವರೂ ಕೂಡ ಈ ಸಮಿತಿಯಲ್ಲಿರುವುದು ಗಮನಾರ್ಹ. ಕೆಲವು ಸದಸ್ಯರ ಸಾಮಾಜಿಕ ಜಾಲತಾಣಗಳನ್ನು ವೀಕ್ಷಿಸಿದಾಗ ಅವರು ಯಾವ ಪಕ್ಷದ ಬೆಂಬಲಿಗರು ಎಂಬುದು ಮನವರಿಕೆಯಾಗುತ್ತದೆ. ಇಂತಹವರನ್ನು ಯಾವ ಮಾನದಂಡದ ಆಧಾರದ ಮೇಲೆ ಸೇರಿಸಲಾಗಿದೆ ಎಂಬುದರ ಬಗ್ಗೆ ಮನಪಾ ಆಯುಕ್ತರು ಸ್ಪಷ್ಟನೆ ನೀಡಬೇಕು ಎಂದು ಜೆ.ಆರ್.ಲೋಬೊ ಒತ್ತಾಯಿಸಿದರು.

ಮನಪಾ ಆಯುಕ್ತರು ಕಾನೂನು ಪಾಲಿಸುವಲ್ಲಿ ವಿಫಲರಾಗಿದ್ದಾರೆ. ಅವರು ಶಾಸಕರ ಕೈಗೊಂಬೆಯಾಗಿದ್ದಾರೆ. ಅವರು ಐಎಎಸ್ ಅಧಿಕಾರಿಯಾ ಅಥವಾ ಬಿಜೆಪಿ ಪಕ್ಷದ ಅಡಿಯಾಳಾ? ಎಂಬುದು ಸ್ಪಷ್ಟಗೊಳ್ಳಬೇಕಿದೆ. ಸಮಿತಿಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿದ್ದರೂ ಕೂಡ ಅವರನ್ನು ಕೈ ಬಿಡಬೇಕು. ಯಾವ ಕಾರಣಕ್ಕೂ ಆ ಸಮಿತಿಯಲ್ಲಿ ಯಾವುದೇ ಪಕ್ಷೀಯರು ಇರಬಾರದು. ಮಂಗಳೂರು ದಕ್ಷಿಣ ವಿಧಾನ ಸಭಾ ಕ್ಷೇತ್ರದ ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷರಾಗಿರುವ ಸೇವಾಂಜಲಿ ಟ್ರಸ್ಟ್ ಅನ್ನು ಈ ಸಮಿತಿಗೆ ಹೇಗೆ ಸೇರ್ಪಡೆ ಮಾಡಲಾಗಿದೆ ಎಂದು ಜೆ.ಆರ್.ಲೋಬೋ ಪ್ರಶ್ನಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾಜಿ ಶಾಸಕ ಮೊಯ್ದಿನ್ ಬಾವಾ, ಪಕ್ಷದ ಮುಖಂಡರಾದ ಜೆ.ಅಬ್ದುಲ್ ಸಲೀಂ, ಶುಭೋದಯ ಆಳ್ವ, ಮುಹಮ್ಮದ್ ಕುಂಜತ್ತಬೈಲ್, ಮಹಾಬಲ ಮಾರ್ಲ, ಸದಾಶಿವ ಶೆಟ್ಟಿ, ವಿಶ್ವಾಸ ಕುಮಾರ್ ದಾಸ್, ಟಿ.ಕೆ.ಸುಧೀರ್, ಪ್ರಕಾಶ್ ಸಾಲ್ಯಾನ್, ರಮಾನಂದ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News